Advertisement
ಚಿಕ್ಕ ಮಕ್ಕಳು ಏನು ಮಾಡಿದರೂ ಚೆಂದ ಎಂದು ದೊಡ್ಡವರು ಮಕ್ಕಳ ಕುರಿತು ಹೆಮ್ಮೆ ವ್ಯಕ್ತಪಡಿಸುವುದನ್ನು ನೋಡಿರಬಹುದು. ಮಕ್ಕಳು ಮಾಡುವ ತರಲೆ ಕೆಲಸ, ತಪ್ಪುಗಳೇನನ್ನೇ ಆದರೂ ದೊಡ್ಡವರು ಕ್ಷಮಿಸಿಬಿಡಬಹುದು. ಆದರೆ, ಈ ಒಂದು ವಿಚಾರದಲ್ಲಿ ಮಾತ್ರ ಮಕ್ಕಳಿಗೆ ವಿನಾಯಿತಿ ಇಲ್ಲ. ಅದ್ಯಾವುದಪ್ಪಾ ಅಂಥ ತಲೆಹೋಗುವ ವಿಚಾರ ಅಂದುಕೊಳ್ಳುತ್ತಿದ್ದೀರಾ? ಅದೇ ಜಗಳ. ಮಕ್ಕಳು, ಓರಗೆಯವರೊಂದಿಗೇ ಆಗಲಿ, ಮನೆಯವರೊಂದಿಗೇ ಆಗಲಿ, ಕೀರಲು ದನಿಯಲ್ಲಿ ಜಗಳವಾಡುವ ಪರಿ ದೊಡ್ಡವರ ತಾಳ್ಮೆಗೆ ಅತಿ ದೊಡ್ಡ ಸವಾಲು.
Related Articles
Advertisement
ಮಕ್ಕಳೇಕೆ ಜಗಳ ಆಡ್ತಾರೆ?: ಮನಃಶಾಸ್ತ್ರಜ್ಞರು ಮಕ್ಕಳ ಮನಸ್ಸನ್ನು ಸ್ಪಾಂಜಿಗೆ ಹೋಲಿಸುತ್ತಾರೆ. ಹೇಗೆ ಒಂದು ಸ್ಪಾಂಜು ತನ್ನ ದಾರಿಯಲ್ಲಿ ಸಿಗುವ ದ್ರವ ಪದಾರ್ಥಗಳನ್ನು ಹೀರಿಕೊಳ್ಳುವುದೋ, ಅದೇ ರೀತಿ ಮಕ್ಕಳು ತಮ್ಮ ಕಣ್ಣ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು, ವಿಷಯಗಳನ್ನು ಹೀರಿಕೊಳ್ಳುತ್ತಿರುತ್ತಾರೆ.
ಮಕ್ಕಳ ಸ್ವಭಾವವನ್ನು ನಿರ್ಧರಿಸುವಲ್ಲಿ ಮಕ್ಕಳು ಬೆಳೆಯುವ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸುಮ್ಮನೆಯೇ ಹೇಳಿಲ್ಲ ಹಿರಿಯರು. ಒಡಹುಟ್ಟಿದವರ ಮೇಲಿನ ಅಸೂಯೆ, ಅಪ್ಪ ಅಮ್ಮನ ಪ್ರೀತಿ ಸಿಗದೇ ಇರುವುದು, ಶಾಲೆಯಲ್ಲಿ ನಡೆದ ಯಾವುದೋ ಘಟನೆ, ಅಪ್ಪ ಅಮ್ಮ ಮನೆಯಲ್ಲಿ ಯಾವಾಗಲೂ ಜಗಳ ಆಡುತ್ತಿದ್ದರೆ, ಹೀಗೆ ಅನೇಕ ವಿಷಯಗಳು ಮಕ್ಕಳ ಜಗಳಗಂಟತನ ಸ್ವಭಾವವನ್ನು ಪ್ರಭಾವಿಸುತ್ತದೆ.
ಫೈಟಿಂಗ್ ವೀರರ ಪೋಷಕರೇ…1. ಮಕ್ಕಳು ಮನೆಯಿಂದ ಹೊರಗಡೆ ಜಗಳವಾಡಿಕೊಂಡು, ತಕ್ಷಣ ಬೈಯದಿರಿ. ಏಕೆಂದರೆ, ಮಕ್ಕಳ ಮನಸ್ಸು ಆ ಸಮಯದಲ್ಲಿ ಪ್ರಕ್ಷುಬ್ದತೆಯಿಂದ ಕೂಡಿರುತ್ತದೆ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ಬಳಿಕ ಜಗಳದ ಕುರಿತು ಮಾತನಾಡಿ. 2. ತಪ್ಪುಮಾಡಿದ್ದರೂ, ಮಾಡದಿದ್ದರೂ ಮಗು ಹೇಳುವುದನ್ನು ಸಹನೆಯಿಂದ ಆಲಿಸಿ. ಮಗುವಿನ ಮಾತನ್ನು ಅರ್ಧದಲ್ಲಿಯೇ ತಡೆದು ಮಾತನಾಡಬೇಡಿ. ಶಿಕ್ಷೆ ನೀಡುವುದು ಪಾಲಕರ ಗುರಿಯಾಗಿರಬಾರದು. ವಿಷಯ ತಿಳಿದುಕೊಳ್ಳುವುದಷ್ಟೇ ಆದ್ಯತೆಯಾಗಿರಲಿ. 3. ಮಗುವನ್ನು ಯಾವುದೇ ಷರತ್ತಿಲ್ಲದೆ ಪ್ರೀತಿಸಿ. ತಂದೆ- ತಾಯಿಯರ ಪ್ರೀತಿಯ ಸ್ಪರ್ಶವು ಮಗುವಿಗೆ ಸದಾ ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಹಾಗೆಯೇ ಮನೆಮಂದಿಯೆಲ್ಲ ಬೆರೆತು ಖುಷಿಯಿಂದ ಇರುವ ಕೌಟುಂಬಿಕ ವಾತಾವರಣದಿಂದ ಮಗುವಿನ ಮನಸ್ಸು ಮುದಗೊಳ್ಳುತ್ತದೆ. 4. ಒಡಹುಟ್ಟಿದವರ ಜಗಳ ಹೊಡೆದಾಟ ತೀರಾ ವೈಯಕ್ತಿಕವಾಗದಂತೆ ಎಚ್ಚರವಹಿಸಿ. ಏಕೆಂದರೆ ಅದು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡಬಹುದು. ಮುಖ್ಯವಾಗಿ ಪಾಲಕರು ಯಾರ ಕಡೆಗೂ ಪಕ್ಷಪಾತ ತೋರದಿರಿ. ಮಕ್ಕಳೆಲ್ಲರನ್ನೂ ಸಮಾನವಾಗಿ ಪ್ರೀತಿಸಿ. 5. ಮಕ್ಕಳು ಓರಗೆಯವರೊಂದಿಗೆ ಜಗಳವಾಡಿದ ಸಂದರ್ಭ ಹೆಚ್ಚಿನ ಪಾಲಕರು ಇನ್ನೊಬ್ಬ ಹುಡುಗನ ಪರ ನಿಂತು ಸಾರಿ ಕೇಳಿಬಿಡುತ್ತಾರೆ. ಸ್ವಂತ ತಂದೆ ತಾಯಿಯೇ ತಮ್ಮ ಪರ ನಿಲ್ಲದಿರುವುದು ಮಕ್ಕಳ ಮನಸ್ಸಿಗೆ ಆಘಾತ ತರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಸನ್ನಿವೇಶವನ್ನು ನಿಭಾಯಿಸಬೇಕು. 6. ಪಾಲಕರು ತಮ್ಮ ಮಕ್ಕಳ ಆಟ ಪಾಠ, ಅವರ ಸ್ನೇಹಿತರು… ಮುಂತಾದ ವಿಚಾರಗಳ ಕುರಿತು ಗಮನ ಹರಿಸುತ್ತಿದ್ದರೆ, ಮಕ್ಕಳಲ್ಲಿ ಸುರಕ್ಷತಾ ಮನೋಭಾವ ಮೂಡುತ್ತದೆ. ಪ್ರೀತಿ ಕಮ್ಮಿ ಆದ್ರೆ, ಯುದ್ಧ ಆಗುತ್ತೆ!: ಮಕ್ಕಳ ನಡುವೆ ಜಗಳ ಏರ್ಪಡುವುದು ಅತ್ಯಂತ ಸಹಜ. ಚಿಕ್ಕ ಮಟ್ಟಿನ ಜಗಳ, ಮನಸ್ತಾಪ, ಮಕ್ಕಳ ಮಾನಸಿಕ ಬೆಳವಣಿಗೆಗೆ ಆರೋಗ್ಯಕರ. ಹೊರ ಪ್ರಪಂಚವನ್ನು ಎದುರಿಸುವಲ್ಲಿ ಮಗುವನ್ನು ಈ ಪುಟ್ಟ ಜಗಳಗಳು ಸಿದ್ಧಗೊಳಿಸುತ್ತವೆ ಎನ್ನುತ್ತಾರೆ ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಮನೋವೈದ್ಯರಾದ ಡಾ. ವಿಷ್ಣುವರ್ಧನ್. ಮಕ್ಕಳು ಮನೆಯಲ್ಲಿ ರಚ್ಚೆ ಹಿಡಿಯುವುದಕ್ಕೆ, ಪ್ರಮುಖ ಕಾರಣ ಹೆತ್ತವರ ಗಮನವನ್ನು ತಮ್ಮೆಡೆಗೆ ಸೆಳೆಯುವುದೇ ಆಗಿರುತ್ತದಂತೆ. ಈಗಿನ ಸ್ಮಾರ್ಟ್‌ಪೋನ್ ಯುಗದಲ್ಲಿ ದೊಡ್ಡವರ ಗಮನ ಸೆಳೆೆಯಲು ನೂರಾರು ಸಂಗತಿಗಳಿವೆ. ಪಾಲಕರು ಅದರಲ್ಲೇ ಸದಾ ಕಾಲ ಮುಳುಗಿದ್ದರೆ, ಅದರ ಬಿಸಿ ಮಕ್ಕಳಿಗೆ ತಟ್ಟುವುದು. ಮಕ್ಕಳು ಜಗಳವಾಡುವಾಗ ಪಾಲಕರು ಯಾರೊಬ್ಬರ ಪರವೂ ನಿಲ್ಲಬಾರದು. ಕೋಪ ತಾಪ ತೋರಬಾರದು. ಮಾತುಕತೆಯಿಂದ ಯುದ್ಧಗಳೇ ನಿಂತುಹೋಗುತ್ತವೆ, ಇನ್ನು ಮನೆಯಲ್ಲಿನ ಜಗಳ ನಿಲ್ಲದೇ? ಪೋಷಕರ ಪ್ರೀತಿ, ಗಮನದ ಕೊರತೆ ಇದ್ದಾಗ ಮಕ್ಕಳು ಅತಿರೇಕದ ಹಾದಿ ಹಿಡಿಯುತ್ತಾರೆ. ಮಕ್ಕಳತ್ತ ಪೋಷಕರು ಹೆಚ್ಚಿನ ಗಮನ ಹರಿಸಬೇಕು ಮಾತ್ರವಲ್ಲ, ಅವರಿಗೆ ಪೊಸಿಟಿವ್ ಮತ್ತು ನೆಗೆಟಿವ್ ವಿಚಾರಗಳನ್ನು ತಿಳಿಹೇಳಬೇಕು.
-ಡಾ. ವಿಷ್ಣುವರ್ಧನ್, ಮನೋವೈದ್ಯರು * ರಾಜೇಶ್ವರಿ ಜಯಕೃಷ್ಣ