ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನುಕೊಲೆಗೈದಿದ್ದ ಆರೋಪಿಯನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರ ನಿವಾಸಿಗಳಾದ ವಿಠಲ್ ಅಲಿಯಾಸ್ ಪಾಂಡು (45) ಬಂಧಿತ ಆರೋಪಿ. ಈತ ದಿಲೀಪ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ.
ಇಬ್ಬರ ನಡುವಿನ ಹಣಕಾಸಿನ ವಿಚಾರವೇ ಕೃತ್ಯಕ್ಕೆ ಕಾರಣ ಎಂಬುದು ಗೊತ್ತಾಗಿದೆ. ಮೇ 1ರಂದು ಠಾಣಾ ವ್ಯಾಪ್ತಿಯಲ್ಲಿ ಹೊಯ್ಸಳ ವಾಹನ ಸಿಬ್ಬಂದಿ ಗಸ್ತಿನಲ್ಲಿರುವಾಗ ಓಕಳಿಪುರದ ವಾಟಾಳ್ ನಾಗರಾಜ್ ರಸ್ತೆಯ ರಾಜೀವ್ ಗಾಂಧಿ ಸಿಗ್ನಲ್ ಮುಕ್ತ ಕಾರಿಡಾರ್ ಕೆಳಸೇತುವೆ ಬಳಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿತ್ತು.
ವ್ಯಕ್ತಿಯ ಚಹರೆ ಹಾಗೂ ಗುರುತುಗಳು ಪತ್ತೆಯಾಗಿರಲಿಲ್ಲ. ಅಕ್ಕಪಕ್ಕದವರನ್ನು ವಿಚಾರಿಸಿದರೂ ಸುಳಿವು ದೊರೆತಿರಲಿಲ್ಲ. ದೇಹದ ಮೇಲೆ ಗಾಯಗಳು ಕಂಡುಬಂದಿದ್ದರಿಂದ, ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಮತ್ತೂಂದೆಡೆ ಮರಣೋತ್ತರ ಪರೀಕ್ಷೆ ವರದಿಯಲ್ಲೂ ಕೊಲೆ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ನಂತರ ಕೊಲೆಯಾದ ವ್ಯಕ್ತಿಯ ಕುಟುಂಬಸ್ಥರನ್ನು ಪತ್ತೆ ಮಾಡಿ ಮಾಹಿತಿ ಸಂಗ್ರಹಿಸಿ ಆರೋಪಿಯ ಸುಳಿವು ಪತ್ತೆ ಮಾಡಲಾಯಿತು. ಕೊಲೆಯಾದ ದಿಲೀಪ್ ಹಾಗೂ ಆರೋಪಿ ಸ್ನೇಹಿತರು. ಆರೋಪಿ ಕೆಲ ದಿನಗಳ ಹಿಂದೆ ದಿಲೀಪ್‌ಗೆ 20 ಸಾವಿರ ರೂ. ಕೈ ಸಾಲ ನೀಡಿದ್ದ. ಈ ಹಣ ವಾಪಸ್ ನೀಡುವಂತೆ ಹಲವು ಬಾರಿ ದಿಲೀಪ್‌ಗೆ ಆರೋಪಿ ಸಾಕಷ್ಟು ಬಾರಿ ಮನವಿ ಮಾಡಿದ್ದ. ಆದರೂ ಸಾಲ ವಾಪಸ್ ನೀಡಿರಲಿಲ್ಲ. ಅದರಿಂದ ಕುಪಿತಗೊಂಡಿದ್ದ ಆರೋಪಿ, ಕೊಲೆಗೆ ಸಂಚು ರೂಪಿಸಿದ್ದ. ಮೇ 1ರಂದು ಸ್ನೇಹಿತ ದಿಲೀಪ್‌ಗೆ ಕರೆ ಮಾಡಿ, ಮದ್ಯ ಸೇವಿಸಲು ಶ್ರೀರಾಮಪುರದ ಕಲ್ಯಾಣದ ಹಿಂದಿನ ಖಾಲಿ ಪ್ರದೇಶಕ್ಕೆ ಕರೆಸಿಕೊಂಡಿದ್ದಾನೆ.
ಸ್ಥಳಕ್ಕೆ ಹೋಗುತ್ತಿದ್ದಂತೆ ದಿಲೀಪ್ ಮುಖಕ್ಕೆ ಖಾರದ ಪುಡಿ ಎರಚಿ ಚಾಕುವಿನಿಂದ ಕತ್ತು, ಎದೆ, ಹೊಟ್ಟೆ, ಬೆನ್ನಿಗೆಹಲವು ಬಾರಿ ಇರಿದಿದ್ದ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.