ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಇದೀಗ ರಾಜ್ಯದ ಜನತೆಗೆ ಅದರಲ್ಲೂ ವಿಶೇಷವಾಗಿ ಯುವಕರಿಗೆ 4ನೇ ಭರವಸೆ (ಗ್ಯಾರೆಂಟಿ) ನೀಡಿದ್ದು ಇವೆಲ್ಲಾ ಈಡೇರಿಸಲು ಸಾಧ್ಯವಾಗದ ಉಚಿತ ಭರವಸೆಗಳೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಈಗಾಗಲೇ ನೀಡಿರುವ ಬಿಪಿಎಲ್ ಕುಟುಂಬ ಸದಸ್ಯರಿಗೆ ಉಚಿತವಾಗಿ 10 ಕೆ.ಜಿ. ಅಕ್ಕಿ, ಗೃಹಿಣಿಯರಿಗೆ ಮಾಸಿಕ 2 ಸಾವಿರ ಹಾಗೂ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ಈಡೇರಿಸಲು ವಾರ್ಷಿಕ 48 ಸಾವಿರ ಕೋಟಿ ರೂ.ಗಳು ಬೇಕಾಗುತ್ತದೆ. ಇನ್ನು 4ನೇ ಭರವಸೆಯಾಗಿರುವ ಪದವೀಧರ ಯುವಕರಿಗೆ 2 ವರ್ಷಗಳ ಕಾಲ ಮಾಸಿಕ 3 ಸಾವಿರ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಮಾಸಿಕ 1500 ರೂ. ನೀಡುವುದಾಗಿ ಘೋಷಿಸಿದೆ. ಈ 4ನೇ ಗ್ಯಾರೆಂಟಿ ಈಡೇರಿಸಲು ಹೊರಟರೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ವೇತನ ಹಾಗೂ ಪಿಂಚಣಿ ಪಾವತಿಸಲು ಪಂಜಾಬ್ ಸರ್ಕಾರದಂತೆ ಸಾಲ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ತಮ್ಮ ಸರ್ಕಾರ ಅಲ್ಪ ಅವಧಿಯಲ್ಲಿಯೇ 55 ಲಕ್ಷ ಉದ್ಯೋಗ ಸೃಷ್ಟಿ ಹಾಗೂ ಕರ್ನಾಟಕದ ಆರ್ಥಿಕತೆಯನ್ನು 1 ಟ್ರಿಲಿಯನ್ ಡಾಲರ್ ಹಂತಕ್ಕೆ ತಂದು ನಿಲ್ಲಿಸಿರುವುದರಿಂದ ತೀವ್ರ ಚಿಂತೆಗೆ ಗುರಿಯಾಗಿರುವ ಕಾಂಗ್ರೆಸ್ ಈಗ ಮತ್ತೂಂದು ಉಚಿತ ಭರವಸೆ ನೀಡಿದೆ. ಇಡೀ ದೇಶದಲ್ಲಿ ರಾಜ್ಯದಲ್ಲಿ ನಿರುದ್ಯೋಗ ಪ್ರಮಾಣ ಅತ್ಯಂತ ಕಡಿಮೆ ಇದೆ. ದೇಶದಲ್ಲಿ ಸರಾಸರಿ ಶೇ.4.2 ರಷ್ಟಿದ್ದರೆ ರಾಜ್ಯದಲ್ಲಿ ಶೇ.2.1 ರಷ್ಟಿದೆ.
ರಾಜ್ಯದಲ್ಲಿ ಹೇರಳವಾಗಿ ಮಾನವ ಸಂಪನ್ಮೂಲ ಕೂಡ ಲಭ್ಯವಾಗುತ್ತಿದೆ, ಸರ್ಕಾರದ ಹಲವು ಕ್ರಮಗಳಿಂದಾಗಿ ಜ್ಞಾನಾಧಾರಿತ ಆರ್ಥಿಕತೆ ಸೃಷ್ಟಿಯಾಗಿದೆ ಎಂದು ಹೇಳುವ ಮೂಲಕ ಎಐಸಿಸಿ ನಾಯಕ ರಾಹುಲ್‌ಗಾಂಧಿ ಅವರ ಬೆಳಗಾವಿ ಭಾಷಣ ಈಡೇರಿಸಲು ಸಾಧ್ಯವಾಗದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.