ಆಮ್‌ಸ್ಟರ್‌ಡ್ಯಾಮ್: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರು ಇದೀಗ ಕ್ರೀಡೆಗೆ ಹೊರತಾದ ವಿಷಯದಿಂದಾಗಿ ಸುದ್ದಿಯಾಗಿದ್ದಾರೆ. ಅವರು ಯೂರೋಪ್‌ನ ನೆದರ್‌ಲ್ಯಾಂಡ್ಸ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ʻರೈನಾʼ ಹೆಸರಿನ ಹೊಟೆಲ್ ಉದ್ಯಮವನ್ನು ಆರಂಭಿಸಿದ್ದು ಈ ಸಂಗತಿಯನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಾವು ಹೊಟೆಲ್‌ವೊಂದನ್ನು ಆರಂಭಿಸಿರುವ ಬಗ್ಗೆ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುರೇಶ್ ರೈನಾ ʻಆಮ್‌ಸ್ಟರ್‌ಡ್ಯಾಮ್‌ನ ಹೃದಯ ಭಾಗದಲ್ಲಿ ಭಾರತೀಯ ರೆಸ್ಟೋರೆಂಟ್‌ವೊಂದನ್ನು ಪರಿಚಯಿಸಲು ನನಗೆ ತುಂಬಾ ಸಂತೋಷವೆನಿಸುತ್ತಿದೆ. ಭೋಜನದ ಮೇಲಿನ ನನ್ನ ಪ್ರೀತಿಯನ್ನು ನೀವು ಈಗಾಗಲೇ ನೋಡಿದ್ದೀರಾ. ಇದೀಗ ನಾನು ಭಾರತದ ವಿವಿದೆಡೆಯ ಸ್ವಾದಿಷ್ಟ ಆಹಾರಗಳನ್ನು ಯೂರೋಪಿನ ಹೃದಯ ಭಾಗಕ್ಕೆ ತಲುಪಿಸುವ ಪ್ರಯತ್ನವನ್ನು ಆರಂಭಿಸಿದ್ದೇನೆʼ ಎಂದು ಬರೆದುಕೊಂಡಿದ್ಧಾರೆ.
ಅಂದ ಹಾಗೆ, ರೈನಾ ಅವರು ತಮ್ಮ ನೂತನ ಹೊಟೆಲ್‌ಗೆ ಅವರು ʻರೈನಾ ಇಂಡಿಯನ್ ರೆಸ್ಟೋರೆಂಟ್ʼ ಎಂದು ಹೆಸರಿಟ್ಟಿದ್ದಾರೆ.
ಭಾರತೀಯ ಕ್ರಿಕೆಟಿಗರು ಹೊಟೆಲ್ ಉದ್ಯಮವನ್ನು ಆರಂಭಿಸಿರುವುದು ಇದು ಹೊಸತೇನಲ್ಲ. ಈ ಮೊದಲೇ ರವೀಂದ್ರ ಜಡೇಜಾ ಅವರ ʻಜಡ್ಡುಸ್ ಫುಡ್ ಫೀಲ್ಡ್ʼ, ವಿರಾಟ್ ಕೊಹ್ಲಿ ಅವರ ʻ ನುಯೇವಾʼ, ಕಪಿಲ್ ದೇವ್ ಅವರ ʻಎಲೆವೆನ್ಸ್ʼ, ಜಹೀರ್ ಖಾನ್ ಅವರ ʻಡೈನ್ ಫೈನ್ʼ ಎಂಬ ಹೆಸರಿನ ಹೋಟೆಲ್‌ಗಳು ಭಾರತದ ವಿವಿದೆಡೆ ಭಾರೀ ಯಶಸ್ಸು ಗಳಿಸಿವೆ. ಇದೀಗ ರೈನಾ ಅವರೂ ಇವರನ್ನು ಸೇರಿಕೊಂಡಿದ್ದು ದೂರದ ನೆದರ್‌ಲ್ಯಾಂಡ್ಸ್‌ನಲ್ಲಿ ಭಾರತದ ಖಾದ್ಯಗಳನ್ನು ಪರಿಚಯಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ:
ಕಂಠೀರವದಲ್ಲಿ ಮುರಿದ ಕುರ್ಚಿಗಳು; ಮಹತ್ವದ ಕೂಟದ ವೇಳೆ ಇಂತಹ ಪರಿಸ್ಥಿತಿಯೇಕೆ?