ಕುಷ್ಟಗಿ:ಕುಷ್ಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ತಾವು ಕಲಿತ ಸರಕಾರಿ ಶಾಲೆಗೇ ತಮ್ಮ ಮಗನನ್ನು ಸೇರಿಸುವ ಮೂಲಕ ಮಾದರಿಯಾಗಿದ್ದಾರೆ.
ದೊಡ್ಡನಗೌಡ ಪಾಟೀಲ್ ಅವರ ಸ್ವಗ್ರಾಮ ಕೊರಡಕೇರಾದಲ್ಲಿ ತಾವು ಕಲಿತ ಸರಕಾರಿ ಶಾಲೆಯಲ್ಲಿ ಅವರ ಮೊದಲ ಪುತ್ರ ಹನುಮಗೌಡ ಪಾಟೀಲ್ ಗೆ 1ನೇ ತರಗತಿಗೆ ಸರಸ್ವತಿ ಪೂಜೆ ನೆರವೇರಿಸಿ ದಾಖಲಿಸಿದರು.
ಈ ವೇಳೆ ದೊಡ್ಡನಗೌಡ ಪಾಟೀಲ ಪ್ರತಿಕ್ರಿಯಿಸಿ, ನಮಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದು, ಮೊದಲ ಮಗ ಹನುಮಗೌಡ ಪಾಟೀಲ್ ಗೆ 6 ವರ್ಷ ತುಂಬಿದ್ದರಿಂದ 1ನೇ ತರಗತಿಗೆ ದಾಖಲಿಸಿದ್ದೇನೆ. ಮುಂದೆ ಇನ್ನಿಬ್ಬರು ಮಕ್ಕಳನ್ನೂ ದಾಖಲಿಸುವೆ ಎಂದರು.
ನಾನು ಸಹ ಸರ್ಕಾರಿ ಶಾಲೆಯ ವಿದ್ಯಾರ್ಥಿಯಾಗಿರುವೆ. ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಹೆಸರು ನೊಂದಾಯಿಸಿರುವುದಕ್ಕೆ ಹೆಮ್ಮೆ ಇದೆ ಎಂದರು. ಸರ್ಕಾರಿ ಶಾಲೆಗಳಿಗೆ ಮೆರಿಟ್ ಆಧಾರದ ಮೇಲೆ ಶಿಕ್ಷಕರು ನೇಮಕಗೊಂಡಿದ್ದು ಗುಣಮಟ್ಟದ ಶಿಕ್ಷಣ ನಿರೀಕ್ಷಿಸಿಸಲು ಸಾದ್ಯವಿದೆ. ಗ್ರಾಮೀಣ ಪ್ರದೇಶದ ಶಾಲೆಗಳ ಗ್ರಾಮದ ಮಕ್ಕಳೊಂದಿಗೆ ಬೆರೆಯುವುದರಿಂದ ಮಾನವೀಯ ಮೌಲ್ಯಗಳ ಕಲಿಕೆಗೆ ಸಾಧ್ಯವಾಗಲಿದೆ ಎಂದರು.
ಈ ವೇಳೆ ಮುಖ್ಯ ಶಿಕ್ಷಕ ಬೀರಪ್ಪ ಕುರಿ ಮತ್ತು ಶಾಲೆಯ ಇತರ ಶಿಕ್ಷಕರು ಇದ್ದರು.