ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ಪ್ರೇಯಸಿಯನ್ನು ವೇಶ್ಯಾವಾಟಿಕೆ ದಂಧೆಗೆ ದೂಡಲು ಯತ್ನಿಸಿದ ಕಾಂಗೋ ದೇಶದ ಪ್ರಜೆಯನ್ನು ಸದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಕಾಂಗೋ ದೇಶದ ಗೇಲೊರ್ ಬಡಿಬೊಂಗಾ ಮ್ಯಾಜಿಕ್(29) ಬಂಧಿತ. ಆಂಧ್ರಪ್ರದೇಶದ ಯುವತಿ ವಂಚನೆಗೆ ಒಳಗಾದವರು.
ಆರೋಪಿ 2010ರಲ್ಲಿ ವ್ಯಾಸಂಗಕ್ಕಾಗಿ ನಗರಕ್ಕೆ ಬಂದು ಹಲಸೂರು ರಸ್ತೆಯ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಾ ಹಾಸ್ಟೆಲ್‌ನಲ್ಲಿ ನೆಲೆಸಿದ್ದ. ಇದೇ ವೇಳೆ ಇಂಗ್ಲಿಷ್ ಕಲಿಕಾ ತರಗತಿಗಳಿಗೆ ಹೋಗುವಾಗ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುವ ಯುವತಿ ಜತೆ ಸ್ನೇಹ ಬೆಳೆಸಿದ್ದ. ಇದು ಪ್ರೀತಿಗೆ ತಿರುಗಿತ್ತು.
ಮದುವೆಯಾಗುವುದಾಗಿ ನಂಬಿಸಿ ಸದ್ದುಗುಂಟೆ ಪಾಳ್ಯದ ಬಾಡಿಗೆ ಮನೆಯಲ್ಲಿ ಆಕೆಯೊಂದಿಗೆ ಸಹ ಜೀವನ ನಡೆಸುತ್ತಿದ್ದ ಆರೋಪಿ ಆ ವೇಳೆ ಲೈಂಗಿಕ ಸಂಬಂಧವನ್ನು ಬೆಳೆಸಿದ್ದ. ಹಲವಾರು ಬಾರಿ ಗರ್ಭಪಾತ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಾಸಂಗಕ್ಕಾಗಿ ಪೋಷಕರಿಂದ ಹಣ ಬರುವುದು ಕಡಿತವಾದ ಕೂಡಲೇ ಆರೋಪಿ, ತನ್ನ ಪ್ರೇಯಸಿಯನ್ನು ಹಣಕ್ಕಾಗಿ ವೇಶ್ಯಾವಾಟಿಕೆ ನಡೆಸುವಂತೆ ಒತ್ತಾಯಿಸಿದ್ದಾನೆ. ಅಲ್ಲದೇ ಇತ್ತೀಚೆಗೆ ಅಪರಿಚಿತ ಯುವಕನನ್ನು ಕರೆತಂದು ದಂಧೆಗೆ ಸಹಕರಿಸುವಂತೆ ಆಕೆಗೆ ಬಲವಂತ ಮಾಡಿದ್ದಾನೆ. ಆಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಆರೋಪಿ ಸಂತ್ರಸ್ತೆ ಮೇಲೆ ಹಲ್ಲೆ ನಡೆಸಿದ್ದಾನೆ.
ಬಳಿಕ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಮತ್ತೂಂದೆಡೆ 2013ರಲ್ಲಿಯೇ ಆರೋಪಿಯ ವೀಸಾ, ಪಾಸ್‌ಫೋರ್ಟ್ ಅವಧಿ ಮುಗಿದಿದ್ದು, ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿ ಇದೆ ಎಂದು ಸದ್ದುಗುಂಟೆಪಾಳ್ಯ ಠಾಣೆ ಪೊಲೀಸರು ತಿಳಿಸಿದ್ದಾರೆ.