ಕುಂದಾಪುರ: ಆಜ್ರಿಯಿಂದ – ಬಡಬಾಳುವಿಗೆ ಸಂಪರ್ಕಿಸುವ ಜಡ್ಡಿನಮೂಲೆ ಬಳಿ ಕುಬ್ಜೆ ನದಿಗೆ ತಾತ್ಕಲಿಕವಾಗಿ ನಿರ್ಮಿಸಲಾದ ಕಾಲು ಸಂಕ ಭಾರೀ ಮಳೆಯಿಂದಾಗಿ ಮುಳುಗುವ ಭೀತಿಯಲ್ಲಿದೆ.
ಕುಂದಾಪುರ ಭಾಗದಲ್ಲಿ ಮಳೆಯಬ್ಬರ ಕಡಿಮೆಯಿದ್ದರು, ಮಲೆನಾಡಿನಲ್ಲಿ ವರುಣನ ಆರ್ಭಟ ಜಾಸ್ತಿ ಇರುವುದರಿಂದ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಕುಬ್ಜೆ ನದಿ ತುಂಬಿ ಹರಿಯುತ್ತಿದೆ. ಕಾಲು ಸಂಕ ಕೊಚ್ಚಿಕೊಂಡು ಹೋಗುವ ಆತಂಕ ಇಲ್ಲಿನ ಜನರಲ್ಲಿ ಆವರಿಸಿದೆ.
ಆಜ್ರಿಯಿಂದ ಬಡಬಾಳುವಿಗೆ ಸಂಪರ್ಕಿಸಲು ಕುಬ್ಜೆ ನದಿ ದಾಟಬೇಕಿದ್ದು, ಜಡ್ಡಿನಮೂಲೆ ಬಳಿ ಊರವರೇ ನಿರ್ಮಿಸಿದ ಕಾಲು ಸಂಕವೇ ಇಲ್ಲಿನ ನೂರಾರು ಮನೆಗಳಿಗೆ ಆಸರೆಯಾಗಿದೆ. 20 ವರ್ಷಗಳ ಹಿಂದಿನಿಂದಲೂ ಇಲ್ಲಿ ಸೇತುವೆ ನಿರ್ಮಾಣದ ಬೇಡಿಕೆಯಿದ್ದರೂ ಸಂಬಂಧಿಸಿದ ಯಾವ ಅಧಿಕಾರಿ, ಇಲಾಖೆಗಳೂ ಇತ್ತ ಗಮನ ಹರಿಸಿಲ್ಲ.
ಸೇತುವೆ ಬೇಡಿಕೆ
ಜಡ್ಡಿಮೂಲೆಯಲ್ಲಿ ಸೇತುವೆ ನಿರ್ಮಾಣ ವಾದರೆ ಆಜ್ರಿಯಿಂದ ಜಡ್ಡಿನಮೂಲೆ, ಯಡೂರು, ಯಡ್ನಾಡಿಯಾಗಿ ಬಡಬಾಳು ವಿಗೆ ಸಂಪರ್ಕ ಸಾಧ್ಯವಾಗಲಿದೆ. ಬಡಬಾಳುವಿನಲ್ಲಿ ಸೇತುವೆ ಇಲ್ಲದ ಕಾರಣ ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದ ಜನರು ಆಜ್ರಿಗೆ ಬಂದು ಮುಖ್ಯ ಪೇಟೆ ಶಂಕರನಾರಾಯಣಕ್ಕೆ ತೆರಳಬೇಕಾದ ಪರಿಸ್ಥಿತಿ ಇದೆ. ಈ ಪ್ರಯಾಣ ಸುಮಾರು 5 ಕಿ.ಮೀ. ದೂರ ಹೆಚ್ಚುವರಿಯಾಗಿದ್ದರೂ, ಕ್ರಮಿಸಬೇಕಾದ ಅನಿವಾರ್ಯ ಇಲ್ಲಿನ ಜನರದ್ದು.
3 ವರ್ಷಗಳ ಹಿಂದೆ ಕೊಚ್ಚಿ ಹೋಗಿತ್ತು
3 ವರ್ಷಗಳ ಹಿಂದೊಮ್ಮೆ ಇದೇ ಜಡ್ಡಿ ಮೂಲೆಯಲ್ಲಿ ಊರವರು ನಿರ್ಮಿಸಿದ್ದ ತಾತ್ಕಾಲಿಕ ಕಾಲು ಸಂಕ ಭಾರೀ ಮಳೆ ಯಿಂದಾಗಿ ನೆರೆಗೆ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಮಳೆಗಾಲ ಮುಗಿಯುವವರೆಗೆ ಈ ದಾರಿಯಲ್ಲಿನ ಸಂಪರ್ಕವೇ ಕಡಿತಗೊಂಡಿತ್ತು.
ಉದಯವಾಣಿ ವರದಿ
ಆಜ್ರ್ರಿಯಿಂದ ಬಡಬಾಳುವಿಗೆ ಸಂಪರ್ಕಿ ಸಲು ಸೇತುವೆಯಿಲ್ಲ. ಊರವರೇ ನಿರ್ಮಿಸುವ ಕಾಲು ಸಂಕವೇ ನದಿ ದಾಟಲು ಜನರಿಗೆ ಆಸರೆ ಎನ್ನುವ ಬಗ್ಗೆ ‘ಉದಯವಾಣಿ’ಯು ಈ ಹಿಂದೆಯೇ ವರದಿ ಮಾಡಿತ್ತು.