ಕಾರ್ಟೂನ್ ಶೋ ಗಳಲ್ಲಿ ತೋರಿಸುವಂತೆ, ಎಂದಾದರೂ ಕಾರು/ಬೈಕಿನಲ್ಲಿ ಆಕಾಶದೆತ್ತರಕ್ಕೆ ಹಾರಿ ಸಂಚಾರ ಮಾಡಬೇಕು ಎಂದು ಎಂದಾದರೂ ಕನಸು ಕಂಡಿದ್ದೀರಾ? ವಿಮಾನ, ಹೆಲಿಕಾಪ್ಟರ್ ಅಲ್ಲದೇ ನಮ್ಮದೇ ಆದ ವಾಹನದಲ್ಲಿ ಹಾರಾಡಬೇಕು ಎಂದು ನೀವು ಕನಸು ಕಾಣುತ್ತಿದ್ದರೆ, ಅದು ಶೀಘ್ರದಲ್ಲೇ ನನಸಾಗುವ ನಿರೀಕ್ಷೆಯಿದೆ!
ಕ್ಲೈನ್ ವಿಷನ್ ಎಂಬ ಕಂಪನಿಯು ಒಂದು ಹಾರುವ ಕಾರನ್ನು ತಯಾರಿಸಿದ್ದು, ಜೂನ್ 28 ರಂದು ಸ್ಲೊವಾಕಿಯಾದ ನೈಟ್ರಾ ಮತ್ತು ಬ್ರಾಟಿಸ್ಲಾವಾ ನಗರಗಳ ನಡುವೆ ಒಂದು ಯಶಸ್ವಿ ಪರೀಕ್ಷಾ ಹಾರಾಟವನ್ನು ಪೂರ್ಣಗೊಳಿಸಿದೆ. ಈ ಮೂಲಕ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯುವತ್ತ ದಾಪುಗಾಲನ್ನು ಇಡುತ್ತಿದೆ. ಎರಡು ನಗರಗಳ ನಡುವೆ, ಈ ಹಾರುವ ಕಾರು ಸುಮಾರು 35 ನಿಮಿಷಗಳ ಕಾಲ ಗಾಳಿಯಲ್ಲಿ ಹಾರಾಡಿದೆ ಎಂದು ಅದರ ವಿನ್ಯಾಸಕರೊಬ್ಬರು, ಕ್ಲೈನ್ ವಿಷನ್‌ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಜು.13 ಅಥವಾ 14: ಭೂಮಿಗೆ ಬಂದಪ್ಪಳಿಸಲಿದೆ ಸೌರ ಚಂಡಮಾರುತ!ಫೋನ್ ಸಿಗ್ನಲ್ ಹಾನಿ ಸಾಧ್ಯತೆ
ಅವರು ಹೇಳುವಂತೆ, ರಸ್ತೆಯಲ್ಲಿ ತೆಗೆದುಕೊಳ್ಳುವ ಸಮಯಕ್ಕಿಂತಲೂ ವೇಗವಾಗಿ, ಹಾರುವ ಕಾರು ತನ್ನ ಪ್ರಯಾಣವನ್ನು ಪೂರ್ಣಗೊಳಿಸಿದೆ.ಬಹಳಷ್ಟು ನಿರೀಕ್ಷೆಯನ್ನು ಮೂಡಿಸಿದರೂ, ಇದು ಸದ್ಯಕ್ಕೇನೂ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಬಹುದು. ಹಾರುವ ಕಾರುಗಳ ಇತಿಹಾಸ ನೋಡಿದಾಗ ನಮಗಿದರ ಅರಿವಾಗುತ್ತದೆ. ಈ ಹಿಂದೆಯೂ ಹಲವರು ಯಶಸ್ವಿ ಪ್ರಯತ್ನ ನಡೆಸಿದರೂ, ಕೆಲವೊಂದು ಕಾರಣಗಳಿಂದ, ಅದನ್ನು ಪೂರ್ಣ ಪ್ರಮಾಣದಲ್ಲಿ ಹೊರತರಲು ವಿಫಲರಾಗಿದ್ದಾರೆ.
1903 ರಲ್ಲಿ ರೈಟ್ ಬ್ರದರ್ಸ್ ತಮ್ಮ ವಿಮಾನ ಹಾರಾಟ ನಡೆಸಿದ ಒಂದೂವರೆ ದಶಕದ ನಂತರ, ಹಲವರು ಫ್ಲೈಯಿಂಗ್ ಕಾರಿನ ಕನಸನ್ನು ಬೆನ್ನಟ್ಟುತ್ತಾ ಹೋದರು. 18ನೇ ಶತಮಾನದಲ್ಲಿಯೇ ಗ್ಲೈಡಿಂಗ್ ಹಾರ್ಸ್ ಕಾರ್ಟ್ ಅನ್ನು ಅಭಿವೃದ್ಧಿಪಡಿಸುವ ವಿಫಲ ಪ್ರಯತ್ನ ನಡೆಸಿತ್ತು. ಯುನೈಟೆಡ್ ಸ್ಟೇಟ್ಸ್ ಪೇಟೆಂಟ್ ಆ್ಯಂಡ್ ಟ್ರೇಡ್‌ಮಾರ್ಕ್ ಕಛೇರಿಯಲ್ಲಿಯೇ ವಿವಿಧ ರೀತಿಯ ಹಾರುವ ಕಾರುಗಳಿಗೆ ಸುಮಾರು 80 ಪೇಟೆಂಟ್‌ಗಳು ನೋಂದಣಿಯಾಗಿದೆ. ಇವುಗಳಲ್ಲಿ ಕೆಲವು ಯಶಸ್ವಿ ಹಾರಾಟ ನಡೆಸಿದರೂ, ಮಾರುಕಟ್ಟೆಗೆ ಕಾಲಿಟ್ಟಿಲ್ಲ. ದೊಡ್ಡ ಸಂಖ್ಯೆಯಲ್ಲಿ ಉತ್ಪಾದನೆ ಮಾಡಲು ಹಲವಾರು ಅಡೆತಡೆಗಳು ಅವರಿಗೆ ಎದುರಾಗಿವೆ. ಅಂತಹ ಕೆಲವು ಹಾರುವ ಕಾರುಗಳತ್ತ ಒಂದು ನೋಟ ಇಲ್ಲಿದೆ…
ಕರ್ಟಿಸ್ ಆಟೊಪ್ಲೇನ್
ಹಾರುವ ಕಾರಿನ ಪಿತಾಮಹ ಎಂದು ಕರೆಯಲ್ಪಡುವ ಗ್ಲೆನ್ ಕರ್ಟಿಸ್ ಅವರು 1917 ರಲ್ಲಿ, ಅಂತಹ ಒಂದು ವಾಹನದ ಮೊದಲ ಪ್ರಯತ್ನವನ್ನು ಮಾಡಿದ್ದರು. ಅವರ ಅಲ್ಯೂಮಿನಿಯಂ ಆಟೊಪ್ಲೇನ್‌ನಲ್ಲಿ 40 ಅಡಿ ಉದ್ದದ ಮೂರು ರೆಕ್ಕೆಗಳನ್ನು ಹೊಂದಿತ್ತು. ಕಾರಿನ ಹಿಂಭಾಗದಲ್ಲಿ ನಾಲ್ಕು ಬ್ಲೇಡ್‌ನ ಪ್ರೊಪೆಲ್ಲರ್ ಅನ್ನು ಅಳವಡಿಸಲಾಗಿತ್ತು. ಈ ಆಟೊಪ್ಲೇನ್ ಯಾವುದೇ ಹಾರಾಟ ನಡೆಸದಿದ್ದರೂ, ಕುಂಟುತ್ತಾ ಹೋಗುವಂತೆ, ಕೆಲವು ಜಿಗಿತಗಳನ್ನು ಮಾಡಿತ್ತು.
ಆ್ಯರೋಬಿಲ್
1937 ರಲ್ಲಿ ವಾಲ್ಡೋ ವಾಟರ್‌ಮ್ಯಾನ್ ಅಭಿವೃದ್ಧಿಪಡಿಸಿದ ಆ್ಯರೋಬಿಲ್, ಸ್ಟೂಡ್‌ಬೇಕರ್-ವಿಮಾನ ಎರಡರ ಹೈಬ್ರಿಡ್ ಆಗಿತ್ತು. ಆಟೊಪ್ಲೇನ್‌ನಂತೆ, ಇದರಲ್ಲೂ, ವಾಹನದ ಹಿಂಭಾಗಕ್ಕೆ ಪ್ರೊಪೆಲ್ಲರ್ ಅನ್ನು ಜೋಡಿಸಲಾಗಿತ್ತು. ತ್ರಿಚಕ್ರ ಕಾರಿನಲ್ಲಿ ವಿಶಿಷ್ಟವಾದ 100 ಹಾರ್ಸ್ಪವರ್ ಉಳ್ಳ ಸ್ಟೂಡ್‌ಬೇಕರ್ ಎಂಜಿನ್ ಹೊಂದಿತ್ತು. ಆದರೆ, ಹಣದ ಕೊರತೆಯಿಂದಾಗಿ ಈ ಯೋಜನೆ ಯಶಸ್ವಿಯಾಗಲಿಲ್ಲ.
ಏರ್ಫಿಬಿಯನ್
ಸ್ಟೀಮ್ ಎಂಜಿನ್ ಆವಿಷ್ಕಾರಕನ ದೂರದ ಸಂಬಂಧಿಯಾಗಿದ್ದ ರಾಬರ್ಟ್ ಫುಲ್ಟನ್ 1946 ರಲ್ಲಿ ಏರ್ಫಿಬಿಯಾನ್ ಅನ್ನು ಅಭಿವೃದ್ಧಿಪಡಿಸಿದರು. ಹಾರಾಡುವ ಕಾರಿನ್ ಬದಲಾಗಿ, ರಸ್ತೆಯಲ್ಲಿ ಸಂಚರಿಸುವ ವಿಮಾನದ ತಂತ್ರವನ್ನು ಫುಲ್ಟನ್ ಅಳವಡಿಸಿದರು. ರಸ್ತೆ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿಮಾನದ ರೆಕ್ಕೆಗಳು ಮತ್ತು ಬಾಲದ ಭಾಗವನ್ನು ತೆಗೆಯಬಹುದಿತ್ತು.
ವಿಮಾನವನ್ನು ಕಾರಾಗಿ ಪರಿವರ್ತಿಸಲು ಕೇವಲ ಐದು ನಿಮಿಷಗಳನ್ನು ತೆಗೆದುಕೊಂಡಿತ್ತು. ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಯ ಪೂರ್ವವರ್ತಿಯಾದ ಸಿವಿಲ್ ಏರೋನಾಟಿಕ್ಸ್ ಅಡ್ಮಿನಿಸ್ಟ್ರೇಷನ್‌ನಿಂದ ಪ್ರಮಾಣೀಕರಿಸಲ್ಪಟ್ಟ ಮೊದಲ ಹಾರುವ ಕಾರು ಏರ್‌ಫಿಬಿಯನ್.
ಇದು 150 ಹಾರ್ಸ್ಪವರ್, ಆರು ಸಿಲಿಂಡರ್ ಎಂಜಿನ್ ಹೊಂದಿದ್ದು, ಗಂಟೆಗೆ 120 ಮೈಲುಗಳಷ್ಟು ದೂರ ಹಾರುತ್ತಿತ್ತು ಮತ್ತು ಗಂಟೆಗೆ 50 ಮೀಟರ್ ವೇಗದಲ್ಲಿ ರಸ್ತೆಯಲ್ಲಿ ಚಲಿಸುತ್ತಿತು. ಯಶಸ್ಸಿನ ಹೊರತಾಗಿಯೂ, ಸೂಕ್ತ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಏರ್ಫಿಬಿಯನ್ ವಿಫಲವಾಯಿತು.
ಕೊನ್ವ್ಏರ್‌ಕಾರ್
1940 ರ ದಶಕದಲ್ಲಿ, ಎರಡು-ಬಾಗಿಲಿನ ವಿಮಾನವನ್ನು ಕನ್ಸಾಲಿಡೇಟೆಡ್-ವಲ್ಟಿ ಅಭಿವೃದ್ಧಿಪಡಿಸಿದ್ದರು. ಕಾನ್ವ್ಏರ್‌ಕಾರ್ 1947 ರಲ್ಲಿ ತನ್ನ ಮೊದಲ ಹಾರಾಟ ನಡೆಸಿತು ಮತ್ತು ಸುಮಾರು ಒಂದು ಗಂಟೆಯ ಹಾರಾಟ ನಡೆಸಿ, ಪ್ರತಿ ಗ್ಯಾಲನ್‌ಗೆ 45 ಮೈಲಿ (72 ಕಿಲೋಮೀಟರ್) ಗ್ಯಾಸ್ ಮೈಲೇಜ್ ನೀಡಿತು. ಆದರೆ, ದುರದೃಷ್ಟವಶಾತ್, ತನ್ನ ಮೂರನೇ ಹಾರಾಟದ ಸಂದರ್ಭ, ವಿಮಾನವು ಅಪಘಾತಕ್ಕೀಡಾದಾಗ ಏರ್‌ಕಾರನ್ನು ಮಾರಾಟ ಮಾಡುವ ಎಲ್ಲಾ ಯೋಜನೆಗಳು ಕೊನೆಗೊಂಡಿತು.
ಅವ್ರೊಕಾರ್
ಮಿಲಿಟರಿ ಬಳಕೆಗಾಗಿ ವಿನ್ಯಾಸಗೊಳಿಸಲಾದ ಮೊದಲ ಹಾರುವ ಕಾರು ಅವ್ರೊಕಾರ್. ಇದನ್ನು ಕೆನಡಿಯನ್ ಮತ್ತು ಬ್ರಿಟಿಷ್ ಮಿಲಿಟರಿ ನಡುವಿನ ಜಂಟಿ ಪ್ರಯತ್ನದಲ್ಲಿ ಅಭಿವೃದ್ಧಿಪಡಿಸಲಾಗಿದೆ. 1959ರಲ್ಲಿ ಮೊದಲ ಹಾರಾಟ ನಡೆಸಿದ್ದ ಅವ್ರೋಕಾರ್, ಸೇನೆಯಲ್ಲೂ ಸೇರ್ಪಡೆಗೊಳಿಸಲಾಗಿತ್ತು ಎನ್ನಲಾಗಿದೆ. ಆದರೆ, 1961ರಲ್ಲಿ ಸೈನ್ಯದಿಂದ ನಿವೃತ್ತಿ ಪಡೆಯಿತು.
ಏರೋಕಾರ್
ಏರ್ಫಿಬಿಯನ್ ಮತ್ತು ರಾಬರ್ಟ್ ಫುಲ್ಟನ್ ಅವರಿಂದ ಪ್ರೇರಿತರಾದ ಮೌಲ್ಟನ್ “ಮೋಲ್ಟ್” ಟೇಲರ್ ಬಹುಶಃ ಇಲ್ಲಿಯವರೆಗಿನ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ಯಶಸ್ವಿ ಫ್ಲೈಯಿಂಗ್ ಕಾರನ್ನು ರಚಿಸಿದ್ದಾರೆ. ಯಾವುದೇ ಅಡೆತಡೆಯಿಲ್ಲದೆ ಓಡಿಸಲು ಮತ್ತು ಹಾರಲು ಅನುವಾಗುವಂತೆ ಏರೋಕಾರ್ ಅನ್ನು ವಿನ್ಯಾಸಗೊಳಿಸಲಾಗಿದೆ. 10-ಅಡಿ ಉದ್ದದ (3-ಮೀಟರ್) ಡ್ರೈವ್ ಶಾಫ್ಟ್, ಎಂಜಿನ್ ಅನ್ನು ಪುಶರ್ ಪ್ರೊಪೆಲ್ಲರ್ಗೆ ಸಂಪರ್ಕ ನೀಡಲಾಗಿದೆ.
ಇದು ಗಾಳಿಯಲ್ಲಿ ಗಂಟೆಗೆ 120 ಮೈಲು (193 ಕಿ.ಮೀ) ವೇಗದಲ್ಲಿ ಪ್ರಯಾಣ ಮಾಡಿತ್ತು ಮತ್ತು ಎಫ್‌ಎಎ ಅನುಮೋದನೆಯನ್ನು ಪಡೆದ ಎರಡನೇ ಮತ್ತು ಕೊನೆಯ ರಸ್ತೆಯಲ್ಲಿ ಸಂಚರಿಸುವ ವಿಮಾನ (ಫ್ಲೈಯಿಂಗ್ ಕಾರು) ಆಗಿದೆ. 1970 ರಲ್ಲಿ, ಫೋರ್ಡ್ ಮೋಟಾರ್ ಕಂಪನಿಯು, ಈ ವಾಹನವನ್ನು ಮಾರಾಟ ಮಾಡುವುದಕ್ಕೆ ಮುಂದೆ ಬಂದರೂ, ದಶಕದ ತೈಲ ಬಿಕ್ಕಟ್ಟು ಎಲ್ಲಾ ಯೋಜನೆಗಳನ್ನು ನಾಶಪಡಿಸಿತು.
ಫ್ಲೈಯಿಂಗ್ ಮಾರುತಿ
ಭಾರತದ ಮೂಲದ ಲಂಡನ್ ನಿವಾಸಿ ಸಂಶೋಧಕ, ಎ.ಕೆ.ವಿಶ್ವನಾಥ್ ಅವರು, ಮಾರುತಿ 800 ಕಾರಿನಿಂದ ಹಾರುವ ಕಾರನ್ನು ತಯಾರಿಸಿದ್ದಾಗಿ 2011ರಲ್ಲಿ ಹೇಳಿಕೊಂಡಿದ್ದರು. ಬಿ’ಲೋರಿಯನ್ ಎಂಬ ಔಟ್ ಫಿಟ್ ಮೂಲಕ ಕಾರನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ಹೇಳಿದ್ದರು. ಕಾರಿನ ಮೇಲ್ಛಾವಣಿಗೆ ರೋಟರ್ ಬ್ಲೇಡ್‌ಗಳು ಅಂಟಿಕೊಂಡಿವೆ. ಕಾರಿನ ಚಕ್ರ ಕಮಾನುಗಳು ವಿಶೇಷ ವಿಸ್ತರಣಾ ವೈಶಿಷ್ಟ್ಯ ಹೊಂದಿದ್ದು, ಅವುಗಳನ್ನು ನಿರ್ವಾತವನ್ನು (ವ್ಯಾಕ್ಯೂಂ) ರಚಿಸಲು ಬಳಸಲಾಗುತ್ತದೆ. 2011ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಈ ಕಾರನ್ನು ತೋರಿಸಲಾಗಿತ್ತು. ಅಲ್ಲಿ ಇದ್ದ ಹಲವು ಫೈಟರ್ ಜೆಟ್‌ಗಳಿಗಿಂತ ಹೆಚ್ಚಿನ ಆಕರ್ಷಣೆಯನ್ನು ಈ ಕಾರು ಪಡೆದಿತ್ತು ಎನ್ನಲಾಗಿದೆ. ಆದರೆ, ನಂತರದ ದಿನಗಳಲ್ಲಿ ಇದು ಎಲ್ಲಿ ಹೋಯಿತು ಎಂಬುವುದಕ್ಕೆ ಉತ್ತರ ಇಲ್ಲ!
2013 ರಲ್ಲಿ ಯಶಸ್ವಿ ಹಾರಾಟವನ್ನು ನಡೆಸಿತ್ತು ಫ್ಲೈಯಿಂಗ್ ಬೈಸಿಕಲ್!
ಪ್ಯಾರಾವೆಲೊ ಎಂಬ ಬ್ರಿಟಿಷ್ ಕಂಪನಿಯೊಂದು ನಿರ್ಮಿಸಿದ್ದ ಹೊಸ ವಿನ್ಯಾಸದ ಬೈಸಿಕಲ್ ಒಂದು, 2013ರಲ್ಲಿ ವಿಮಾನವಾಗಿ ರೂಪಾಂತರಗೊಂಡು ಹಾರಾಟ ನಡೆಸುವಲ್ಲಿ ಯಶಸ್ವಿಯಾಗಿತ್ತು. ಸುಮಾರು 4,000 ಅಡಿ ಎತ್ತರಕ್ಕೆ ಹಾರಬಲ್ಲ ಶಕ್ತಿಯಿದ್ದ ಬೈಸಿಕಲ್ ಅಂದು ಹಲವರ ಕನಸಿಗೆ ಆಶಾಕಿರಣವಾಗಿತ್ತು ಆದರೆ, ಅದು ಇನ್ನೂ ಮಾರುಕಟ್ಟೆ ಪ್ರವೇಶಿಸಿಲ್ಲ. ಈಗ ಎಲ್ಲಿದೆ ಎಂಬುವುದು ತಿಳಿದಿಲ್ಲ. ಹೀಗಿರುವಾಗ, ಇತ್ತೀಚೆಗೆ ಯಶಸ್ವಿ ಪರೀಕ್ಷಾ ಹಾರಾಟವನ್ನು ನಡೆಸಿರುವ ಕ್ಲೈನ್ ವಿಷನ್ ಕಂಪನಿಯ ಹಾರುವ ಕಾರು ಯಾವಾಗ ಮಾರುಕಟ್ಟೆಗೆ ಬರಬಹುದು ಎಂದು ಊಹಿಸಲೂ ಅಸಾಧ್ಯ.
ಇದುವರೆಗೆ ಹಲವರು ಪ್ರಯತ್ನಪಟ್ಟರೂ ಸಹ, ಒಬ್ಬರೂ ಸಹ ಯಶಸ್ವಿ, ಪೂರ್ಣಪ್ರಮಾಣದ ಹಾರುವ ಕಾರನ್ನು ಅಭಿವೃದ್ಧಿಪಡಿಸಲು ವಿಫಲರಾಗಿದ್ದಾರೆ. ಕೆಲವರು, ತಮ್ಮ ಹಾರುವ ಕಾರಿನ ಪರೀಕ್ಷೆಯ ಸಮಯದಲ್ಲಿ ಮರಣ ಹೊಂದಿದ್ದರೆ, ಇನ್ನೂ ಕೆಲವರಿಗೆ ಆರ್ಥಿಕ ಹಿನ್ನಡೆ ಉಂಟಾಯಿತು. ಹೀಗಿದ್ದರೂ, ಹಾರುವ ಕಾರನ್ನು ನಿರ್ಮಿಸಬಹುದೆಂದು ಅವರೆಲ್ಲರೂ ಸಾಬೀತುಪಡಿಸಿದ್ದಲ್ಲದೆ, ರಸ್ತೆಯಲ್ಲಿ ಸಂಚರಿಸುವ ವಿಮಾನವನ್ನು ಅಭಿವೃದ್ಧಿಪಡಿಸುವ ಉತ್ಸಾಹಿಗಳಿಗೆ ಪ್ರೇರಣೆಯಂತೆ ನಿಂತಿದ್ದಾರೆ. ಮುಂದಿನ ದಿನಗಳಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು, ಅದಕ್ಕೊಂದು ಪರಿಹಾರವಾಗಿ ಹಾರುವ ಕಾರುಗಳು ಬಂದರೂ ಅಚ್ಚರಿಯಿಲ್ಲ!
– ಇಂದುಧರ ಹಳೆಯಂಗಡಿ
ಇದನ್ನೂ ಓದಿ : ಎರಡೂ ಲಸಿಕೆ ಹಾಕಿಸಿಕೊಂಡವರಿಗೆ ಗೋವಾ ಗೆ ಪ್ರವೇಶ : ಕೋರ್ಟ್ ಅನುಮತಿ