ನೀವು ಯಾವುದನ್ನು ಪ್ರೀತಿಸುತ್ತೀರೋ ಅದಾಗುತ್ತೀರಿ, ನಿಮ್ಮ ಪ್ರೀತಿ ಯಾವುದ ರಲ್ಲಿದೆಯೋ ಅದು ನಿಮಗೆ ಸಿಗುತ್ತದೆ. ಹಾಗಾಗಿ ನಿಮ್ಮ ಪ್ರೀತಿಯನ್ನು, ಒಲವನ್ನು ಮೊದಲು ಕಂಡುಕೊಳ್ಳಿ. ಕಾರನ್ನು, ನಾಲ್ಕಂತಸ್ತಿನ ಮನೆಯನ್ನು, ಆರಂಕಿಯ ಬ್ಯಾಂಕ್ ಬ್ಯಾಲೆನ್ಸನ್ನು ಮಾತ್ರ ಪ್ರೀತಿಸುವುದಕ್ಕೆ ಈ ಅಮೂಲ್ಯ ಬದುಕನ್ನು ವಿನಿಯೋಗಿಸ ಬೇಡಿ. ಏಕೆಂದರೆ ಇವಿಷ್ಟರ ಮೇಲೆ ಮಾತ್ರ ಒಲವು ಹೊಂದಿದ್ದರೆ ನಾವೂ ಅದೇ ಮಟ್ಟ ದಲ್ಲಿ ಉಳಿದುಬಿಡುತ್ತೇವೆ. ಏನನ್ನಾದರೂ ಪ್ರೀತಿಸುವುದಿದ್ದರೆ ಅದು ದೈವಿಕವಾದದ್ದು, ಜೀವನವನ್ನು ಬದಲಾಯಿಸುವಂಥ ಶ್ರೇಷ್ಠವಾದದ್ದು, ಬದುಕನ್ನು ಎತ್ತರಿಸು ವಂಥದ್ದು ಆಗಿರಲಿ. ಹಿಮಾಲಯದಷ್ಟು ಉಚ್ಚವಾದದ್ದನ್ನು ಪ್ರೀತಿಸಿ, ಬಯಸಿ. ಪ್ರೀತಿ, ಬಯಕೆ, ಒಲುಮೆ ಎಂಬುದು ಅಗಾಧ ಶಕ್ತಿಯ ಸ್ರೋತ. ಅದು ಯಾವ ಕಡೆಗೆ ಸೆಳೆಯುತ್ತದೆಯೋ ಅತ್ತ ಕಡೆಗೆ ನಮ್ಮ ಗಮನ. ಪ್ರೀತಿ, ಒಲುಮೆಯೇ ಬದುಕಿನ ಹಾದಿ. ತಾವರೆ ಎಲ್ಲೇ ಅರಳಿರಲಿ, ದುಂಬಿ ಅದನ್ನು ಹುಡುಕುತ್ತದೆ. ಏಕೆಂದರೆ ದುಂಬಿಯ ಒಲವು ತಾವರೆಯ ಕಡೆಗೆ.
ಇಲ್ಲೊಂದು ಸುಂದರ ಕಥೆಯಿದೆ. ನಾವು ಸೊಲೊಮನ್ ಬಗ್ಗೆ ಕೇಳಿದ್ದೇವೆ. ಪುರಾತನ ಮಧ್ಯಪ್ರಾಚ್ಯದಲ್ಲಿ ಅವನೊಬ್ಬ ಅತ್ಯಂತ ಬುದ್ಧಿವಂತ, ಜ್ಞಾನಿ ದೊರೆ. ಒಂದು ದಿನ ಅವನ ಆಸ್ಥಾನಕ್ಕೆ ಯುವತಿಯೊಬ್ಬಳು ಬಂದಳು. ಆಕೆ ಕ್ಲಿಯೊಪಾತ್ರಾ, ಸೌಂದರ್ಯಕ್ಕೆ ಅನ್ವರ್ಥನಾಮ. ಆಕೆಗೆ ಸೊಲೊಮನ್ ಮೇಲೆ ಒಲವು ಹುಟ್ಟಿತ್ತು. ಅತ್ಯದ್ಭುತ ಸುಂದರಿ ಯಾದ ತಾನು ಮಹಾಜ್ಞಾನಿ ಸೊಲೊಮನ್ನನ ಪತ್ನಿಯಾಗಬೇಕು ಎಂಬ ಹಂಬಲ.
ಸೊಲೊಮನ್ನನ ಜ್ಞಾನವನ್ನು ಪರೀಕ್ಷಿಸ ಬೇಕು ಎಂಬ ಬಯಕೆಯೂ ಆಕೆಗೆ ಇತ್ತು. ಅದಕ್ಕಾಗಿ ಆಕೆ ಒಂದು ಹೂವನ್ನು ತಂದಿದ್ದಳು. ಅದು ನೈಜ ಹೂವನ್ನು ನೂರಕ್ಕೆ ನೂರು ಹೋಲುವ ಕೃತಕ ಹೂವು. ಸೊಲೊಮನ್ ನಿಂದ ಬಹಳ ದೂರ ನಿಂತುಕೊಂಡು ಕ್ಲಿಯೊಪಾತ್ರಾ “ಈ ಹೂವು ಅಸಲಿಯೇ ನಕಲಿಯೇ’ ಎಂದು ಪ್ರಶ್ನಿಸಿದಳು.
ಸೊಲೊಮನ್ ಹೇಳಿದ, “ನೀನು ನಿಂತಿರು ವಲ್ಲಿ ಕತ್ತಲೆಯಿದೆ. ನನಗೆ ವಯಸ್ಸಾಯಿತು, ಕಾಣಿಸುತ್ತಿಲ್ಲ. ಕಿಟಿಕಿ ತೆರೆದುಬಿಡಲೇ?’ ಕ್ಲಿಯೊಪಾತ್ರಾ ಒಪ್ಪಿದಳು. ಕಿಟಿಕಿಗಳನ್ನು ತೆರೆಯಲಾಯಿತು. ಒಂದೆರಡು ನಿಮಿಷ ಬಿಟ್ಟು ಸೊಲೊಮನ್ ಉದ್ಗರಿಸಿದ, “ನೈಜ ಹೂವನ್ನು ನೂರಕ್ಕೆ ನೂರು ಹೋಲುವಂತೆ ಎಷ್ಟು ಸುಂದರವಾಗಿ ತಯಾರಿಸಲಾಗಿದೆ’!
ಮರುಕ್ಷಣ ಕ್ಲಿಯೊಪಾತ್ರಾ ಅಂಥದ್ದೇ ಇನ್ನೊಂದು ಹೂವನ್ನು ಕೈಚೀಲದಿಂದ ತೆಗೆದಳು. “ಇದು ಅಸಲಿಯೇ ಕೃತಕವೇ’ ಎಂದು ಪ್ರಶ್ನಿಸಿದಳು.
ಸೊಲೊಮನ್ ಅದನ್ನು ನೋಡುವಂತೆ ನಟಿಸಿ “ಇದಾ ದರೆ ನೈಜ ಹೂವು’ ಎಂದ. ಕ್ಲಿಯೊಪಾತ್ರಾ ತಬ್ಬಿಬ್ಟಾದಳು. “ದೊರೆಯೇ, ಹೇಗೆ ಗೊತ್ತಾ ಯಿತು’ ಎಂದು ಎಲ್ಲರೂ ಪ್ರಶ್ನಿಸಿದರು. “ಕಿಟಿಕಿ ಗಳನ್ನು ತೆರೆದಾಗ ಮೊದಲನೆಯ ಹೂವಿನ ಬಳಿಗೆ ದುಂಬಿಗಳು ಬರಲಿಲ್ಲ. ಎರಡನೆಯ ಹೂವನ್ನು ಹೊರತೆಗೆದ ಕೂಡಲೇ ಒಂದು ದುಂಬಿ ಹಾರಿಬಂತು…’ ಸೊಲೊಮನ್ ರಹಸ್ಯವನ್ನು ಉಸುರಿದ.
ಅತ್ಯಂತ ಗಾಢವಾಗಿ ಪ್ರೀತಿಸುವುದು ಎಲ್ಲೇ ಇದ್ದರೂ ನಮ್ಮೊಳಗು ಅದನ್ನು ಅರಸುತ್ತದೆ. ನಮ್ಮ ಗಾಢವಾದ ಒಲವು ನಮ್ಮನ್ನು ಮುನ್ನಡೆಸುತ್ತದೆ, ಪಥದರ್ಶಕನಾಗುತ್ತದೆ. ದುಂಬಿಗಳು, ಜೇನ್ನೊಣಗಳು ಮೈಲು ಗಟ್ಟಲೆ ದೂರದಲ್ಲಿ ಹೂವು ಅರಳಿದ್ದನ್ನು ಗ್ರಹಿಸಿ ಅಲ್ಲಿಗೆ ಹಾರುತ್ತವೆ. ಅವುಗಳ ಆಂತರ್ಯ ದಲ್ಲಿಯೂ ಸುಪ್ತವಾಗಿರುವುದು ಇಂಥದ್ದೇ ಒಂದು ಒಲವು.
ನಾವು ಯಾವುದನ್ನು ಪ್ರೀತಿಸುತ್ತೇವೆಯೋ ಅದನ್ನು ಪಡೆಯುತ್ತೇವೆ ಹಾಗಾಗಿ ಯಾವುದ ರತ್ತ ನಮ್ಮ ಪ್ರೀತಿ, ಯಾವುದು ನಮ್ಮ ಒಲವು ಎಂಬ ಬಗ್ಗೆ ಎಚ್ಚರದಿಂದ ಇರೋಣ.
(ಸಾರ ಸಂಗ್ರಹ)