Advertisement

ಮಳೆ ಬಿಡುವು ಕೊಟ್ಟರೂ ಇಳಿಯದ ಪ್ರವಾಹ

09:11 PM Aug 10, 2019 | Lakshmi GovindaRaj |

ಹಾಸನ: ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಶನಿವಾರ ಇಳಿಮುಖವಾಗಿದೆ. ಆದರೆ ಪ್ರವಾಹದ ಪ್ರಮಾಣವೇನೂ ಕಡಿಮೆಯಾಗಿಲ್ಲ. ಹಳ್ಳ, ಕೊಳ್ಳ, ನದಿಗಳು ಶನಿವಾರವೂ ತುಂಬಿ ಹರಿಯುತ್ತಿವೆ. ಬುಧವಾರದಿಂದ ಶುಕ್ರವಾರ ರಾತ್ರಿವರೆಗೂ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಶುಕ್ರವಾರ ರಾತ್ರಿಯಿಂದ ಇಳಿಮುಖವಾಗಿದ್ದು, ಶನಿವಾರ ಆಗಾಗ್ಗೆ ಮಳೆ ಬಿಡುವು ಕೊಟ್ಟಿದ್ದರಿಂದ ಜನ ಜೀವನ ಸಹಜ ಸ್ಥಿತಿಗೆ ಮರಳಿತು.

Advertisement

ಆದರೂ ಮೂರು ದಿನ ಸುರಿದ ಮಳೆಯ ನೀರು ಪ್ರವಾಹದೋಪಾದಿಯಲ್ಲಿ ಹಳ್ಳ, ಕೊಳ್ಳಗಳಲ್ಲಿ ಹರಿಯುತ್ತಿದ್ದು, ನದಿಗಳೂ ತುಂಬಿ ಹರಿಯುತ್ತಿವೆ. ಬೇಲೂರಿನ ಯಗಚಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡುತ್ತಿದ್ದು, ಯಗಚಿ ನದಿ ಉಕ್ಕಿ ಹರಿಯುತ್ತಿದೆ.

ಜಲಾಶಯಗಳು ಭರ್ತಿ: ಯಗಚಿ ಜಲಾಶಯ ನಿರ್ಮಾಣವಾದ ನಂತರ ಇದೇ ಮೊದಲ ಬಾರಿಗೆ ಈ ಪ್ರಮಾಣದ ನೀರು ಯಗಚಿ ನದಿಯಲ್ಲಿ ಹರಿಯುತ್ತಿದೆ. ಹೇಮಾವತಿ ಜಲಾಶಯಕ್ಕೆ 1.13 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು ನದಿಗೆ 60 ಸಾವಿರ ಕ್ಯೂಸೆಕ್‌ ನೀರು ಬಿಡಲಾಗುತ್ತಿದೆ. 1991ರ ನಂತರ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಒಂದು ಲಕ್ಷ ಕ್ಯೂಸೆಕ್‌ ಹರಿದು ಬಂದು ದಾಖಲೆ ನಿರ್ಮಿಸಿದೆ.

ಒಡೆದ ಕೆರೆ ಕಟ್ಟೆಗಳು: ಗ್ರಾ ಮೀಣ ಪ್ರದೇಶಗಳಲ್ಲಿ ಕೆರೆ- ಕಟ್ಟೆಗಳು ಒಡೆದು ಹೋಗಿವೆ. ಸಕಲೇಪುರ ತಾಲೂಕಿನ ಹೆನ್ನಲಿ ಕೆರೆ ಒಡೆದಿದೆ. ಆಲೂರು ತಾಲೂಕು ಅಗಸರಹಟ್ಟಿ ಗ್ರಾಮದ ಕೆರೆ ಒಡೆದು ಅಚ್ಚುಕಟ್ಟು ಪ್ರದೇಶ ಜಲಾವೃತವಾಗಿದ್ದು, ಗದ್ದೆಗಳಿಗೆ ಮಣ್ಣು ತುಂಬಿಕೊಂಡು ರೈತರ ಭತ್ತದ ಬೆಳೆ ಮಣ್ಣು ಪಾಲಾಗಿದೆ. ಸಕಲೇಶಪುರ ಪಟ್ಟಣದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅಜಾದ್‌ ನಗರ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.

ಸಲೇಶಪುರದ ಬಿಸಲೆ ಘಾಟ್‌ ರಸ್ತೆಯಲ್ಲಿ ಭೂ ಕುಸಿತದ ಪ್ರಕರಣಗಳು ವರದಿಯಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ -75 ರ ಶಿರಾಡಿಘಾಟ್‌ನಲ್ಲಿ ಪ್ರಯಾಣಿಕರ ಸರಕು ಸಾಗಾಣಿಕೆ ಬಸ್‌ ಮತ್ತು ಅಗತ್ಯ ವಸ್ತುಗಳ ಸಾಗಾಣೆಯ ವಾಹನಗಳ ಹೊರತುಪಡಿಸಿ ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ವಾಹನಗಳು ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಂತಿವೆ.

Advertisement

ಅರಕಲಗೂಡು ತಾಲೂಕು ರಾಮನಾಥಪುರದಲ್ಲಿಯೂ ಕಾವೇರಿ ನದಿ ಉಕ್ಕಿ ಹಹರಿಯುತ್ತಿರುವ ಪರಿಣಾಮ ರಾಮನಾಥಪುರದ ಹಲವು ಬಡಾವಣೆಗಳು ಜಲಾವೃತವಾಗಿದ್ದು, ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿವೆ.

3 ದಿನದಲ್ಲೇ ಭರ್ತಿಯಾದ ಸತ್ಯಮಂಗಲ ಕೆರೆ
ಹಾಸನ: ನಗರಕ್ಕೆ ಹೊಂದಿಕೊಂಡಂತಿರುವ ಸತ್ಯಮಂಗಲ ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. 5- 6 ವರ್ಷಗಳ ನಂತರ ಭರ್ತಿಯಾಗಿರುವ ಕೆರೆ ಭರ್ತಿಯಾಗಿರುವುದನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಕೆರೆ ದಂಡೆ ಹಾಗೂ ಕೋಡಿ ಕಾಲುವೆ ಬಳಿ ನಿಂತು 3 ದಿನದಲ್ಲಿಯೇ ಕೆರೆ ತುಂಬಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.

2013 ರಲ್ಲಿ ಸತ್ಯಮಂಗಲ ಕೆರೆ ತುಂಬಿ ಕೋಡಿ ಹರಿದಿತ್ತು. ಅಲ್ಲಿಂದ ಈ ವರೆಗೂ ಅಲ್ಪ ಸಲ್ಪ ನೀರು ಮಳೆಗಾಲದಲ್ಲಿ ತುಂಬಿಕೊಂಡು ಬೇಸಿಗೆಯಲ್ಲಿ ಒಣಗಿ ಹೋಗುತ್ತಿತು.ಕೆರೆ ಒಣಗಿದ ಪರಿಣಾಮ ವಿದ್ಯಾನಗರ, ವಿವೇಕ ನಗರ, ಸತ್ಯಮಂಗಲ, ಉದಯಗಿರಿ ಬಡಾವಣೆಯಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಟ್ಯಾಂಕರ್‌ಗಳ ನೀರನ್ನು ಅಶ್ರಯಿಸಿದ್ದರು.

ಈಗ ಕೆರೆ ತುಂಬಿರುವುದರಿಂದ ಬತ್ತಿಹೋಗಿರುವ ಕೊಳವೆ ಬಾವಿಗಳು ಮರಪೂರಣಗೊಳ್ಳುವ ಅಶಾಭಾವ ಮೂಡಿದೆ. ಕೆರೆಯ ಕೋಡಿ ಹರಿಯುತ್ತಿರುವ ಮಾಹಿತಿ ಪಡೆದ ಕೆಲವರು ಕೋಡಿಯಲ್ಲಿ ಬಲೆ ಹಾಕಿ ಮೀನು ಹಿಡಿಯುವ ಪ್ರಯತ್ನ ನಡೆಸಿದರು. ಹಾಸನದ ಜವೇನಹಳ್ಳಿ ಕೆರೆಯೂ ಭರ್ತಿಯಾಗಿದೆ. ಇತ್ತೀಚಿಗಷ್ಟೇ ಹಸಿರು ಭೂಮಿ ಪ್ರತಿಷ್ಠಾನದವರು ಜವೇನಹಳ್ಳಿ ಕೆರೆಯನ್ನು ಪುನರುಜ್ಜೀವನಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next