ಕುಂಬಳೆ: ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಉತ್ಸವದಂಗವಾಗಿ ನಡೆದ ಕುಂಬಳೆ ಬೆಡಿ ಸಿಡಿಮದ್ದು ಪ್ರದರ್ಶನ ಭಕ್ತರನ್ನು ಬಣ್ಣದ ಲೋಕದಲ್ಲಿ ತೇಲಿಸಿತು.
ಕ್ಷೇತ್ರದಲ್ಲಿ ರಾತ್ರಿ ಶ್ರೀಬಲಿ ಉತ್ಸವದ ಬಳಿಕ ವಾದ್ಯಘೋಷದ ಮೆರವಣಿಗೆಯಲ್ಲಿ ಆಗಮಿಸಿದ ಶ್ರೀದೇವರು ಪೊಲೀಸ್ ಠಾಣೆಯ ಮುಂದಿನ ಬೆಡಿಕಟ್ಟೆಯಲ್ಲಿ ವಿರಾಜಮಾನವಾದ ಬಳಿಕ ಅರ್ಚಕರು ದೀಪದಿಂದ ಆರತಿಯ ಮೂಲಕ ನೀಡಿದ ಬೆಂಕಿಯಿಂದ ಸಿಡಿಮದ್ದುಗಳನ್ನು ಉರಿಸಲು ಆರಂಭಿಸಲಾಯಿತು. ಬಳಿಕ ಚೈನೀಸ್ ಸಿಡಿಮದ್ದುಗಳು ಆಕಾಶದಲ್ಲಿ ಬಣ್ಣಬಣ್ಣದ ನಕ್ಷತ್ರದಂತೆ ಮಿನುಗಿದುವು.ಸಣ್ಣ ದೊಡ್ಡ ರಾಕೆಟ್‌ಗಳು ಬೆಂಕಿಯನ್ನು ಉಗುಳುತ್ತಾ ಬಾನೆತ್ತರಕ್ಕೆ ಹಾರಿ ವರ್ಣ ಚಿತ್ತಾರ ಮೂಡಿಸಿದವು. ಸಣ್ಣದೊಡ್ಡ ಬಾಂಬ್‌ಗಳು ಸಿಡಿದು ಭಕ್ತರನ್ನು ಮಂತ್ರ ಮುಗ್ಧಗೊಳಿಸಿದವು. ಕೊನೆಯಲ್ಲಿ ಸಿಡಿಸಿದ ಫಿನಿಶಿಂಗ್ ಪಾಯಿಂಟ್‌ನ ಕಲರ್ ಮಾಲೆ ಕಿವಿಗಡ ಚಿಕ್ಕುವ ಭಾರೀ ಸದ್ದಿನೊಂಂದಿಗೆ ಪ್ರಖರ ಬೆಳಕನ್ನು ಹರಿಸಿ ರಾತ್ರಿಯನ್ನು ಹಗಲನ್ನಾಗಿಸಿತು. ರಾತ್ರಿ 9.30ರಿಂದ 10 ಗಂಟೆಯ ತನಕ ಸಿಡಿದ ಸುಡುಮದ್ದು ಪ್ರದರ್ಶನವನ್ನು ವೀಕ್ಷಿಸಲು ಅನ್ಯರಾಜ್ಯಗಳ ಸಹಿತ ಅಬಾಲವೃದ್ಧರೆನ್ನದೆ ಸಹಸ್ರಾರು ಜನರು ಆಗಮಿಸಿದ್ದರು.ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.
ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಉನ್ನತ ಪೊಲೀಸ್ ಅಧಿಕಾರಿಗಳಾ ದ ಎಸ್.ಪಿ.ಡಾ.ಶ್ರೀನಿವಾಸ್ ಎಎಸ್.ಪಿ. ಶಿಲ್ಪಾ ಡಿ., ಕುಂಬಳೆ, ಆದೂರು, ವೆಳ್ಳರಿಕುಂಡು, ವಿದ್ಯಾನಗರ ಸಿ.ಐ.ಗಳಾದ ಪ್ರೇಂಸದನ್, ಮ್ಯಾಥ್ಯೂ ಎಂ.ಎ., ಸುನಿಲ್ ಕುಮಾರ್, ಜಿಲ್ಲೆಯ ವಿವಿಧ ಠಾಣೆಗಳ ಎಸ್.ಐ.ಗಳಾದ ಅಶೋಕ್, ಜಯರಾಜನ್, ಗೋಪಾಲನ್, ಶಾಜಿ, ದಾಮೋದರನ್, ಶಶಿಕುಮಾರ್, ಅನೂಪ್, ವನಿತಾ ಎಸ್. ಐ.ಗಳಾದ ನಿರ್ಮಲಾ ಮತ್ತು ರಾಧಾ ವಿಶೇಷ ನಿಗಾ ವಹಿಸಿದ್ದರು. ಮೀಸಲು ಮತ್ತು ಮಹಿಳಾ ಪೊಲೀಸರ ಸಹಿತ 200 ಪೊಲೀಸರು ಕರ್ತವ್ಯ ನಿರತರಾಗಿದ್ದರು.
15 ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಆಕಾಶದಲ್ಲಿ 3 ಡೋÅಣ್ ಹೆಲಿ ಕೆಮರಾ ಕಾರ್ಯಾಚರಿಸುತ್ತಿದ್ದವು. ಬೆಳಕು ಆರಿದಲ್ಲಿ ತುರ್ತು ಬೆಳಕಿನ ವ್ಯವಸ್ಥೆಗಾಗಿ 2 ಎಸ್ಕಾ ಲೈಟ್‌ಗಳನ್ನು ತರಿಸಲಾಗಿತ್ತು.ಮೈಕೊರೆಯುವ ಚಳಿಯಲ್ಲೂ ಕುಂಬಳೆ ಸರಕಾರಿ ವಿದ್ಯಾಲಯದ ವಿಶಾಲ ಮೈದಾನ ಮತ್ತು ಪೊಲೀಸ್ ಠಾಣೆಯ ಮುಂದಿನ ಮೈದಾನದಲ್ಲಿ ನೆರೆದ ಬೆಡಿ ವೀಕ್ಷಕರು ಸಿಡಿಮದ್ದು ಪ್ರದರ್ಶನವನ್ನು ಕೇಕೆಯ ಮೂಲಕ ಸಂಭ್ರಮಿಸಿದರು.
ಮೊಬೈಲ್ ಮತ್ತು ಕೆಮರಾ ಮೂಲಕ ಬೆಡಿಯನ್ನು ಸೆರೆಹಿಡಿದರು.ಜಾತ್ರೆಯ ಐದನೇ ದಿನವಾದ ಜ. 18 ರಂದು ಬೆಳಗ್ಗೆ ಕವಾಟೋದ್ಘಾಟನೆ,ಭಜನೆ, ತುಲಾಭಾರ ಸೇವೆ,ಮಧ್ಯಾಹ್ನ ಮಹಾ ಪೂಜೆಯ ಬಳಿಕ ಸುಶೀಲಾ ರೈ ಮತ್ತು ಕೋಟೆಕ್ಕಾರು ಐತ್ತಪ್ಪ ರೈ ಮನೆಯವರಿಂದ ಅನ್ನದಾನ ನಡೆಯಿತು. ಸಂಜೆ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕದವತಿಯಿಂದ ಯಕ್ಷಗಾನ ವೈಭವ, ರಾತ್ರಿ ಉತ್ಸವ ಬಲಿ, ಘೋಷಯಾತ್ರೆ, ಶೇಡಿಗುಮ್ಮೆ ಯಲ್ಲಿ ಅವಭೃಥ ಸ್ನಾನ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವತರಣ ನಡೆಯಿತು. ಯಕ್ಷಮಿತ್ರರು ಮುಜಂಗಾವು ತಂಡದಿಂದ “ಶ್ರೀದೇವಿ ಮಹಾತೆ¾’ ಯಕ್ಷಗಾನ ಬಯಲಾಟ ಜರಗಿತು.
ಇಂದಿನ ಕಾರ್ಯಕ್ರಮ
ಜ. 19ರಂದು ಬೆಳಗ್ಗೆ 10ರಿಂದ ಶ್ರೀದೇವರಿಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀಬಲಿ, ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, 7ರಿಂದ ಭಜನೆ, ರಾತ್ರಿ 8ರಿಂದ ಮಹಾಪೂಜೆ, ಶ್ರೀಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.