ಗುಳೇದಗುಡ್ಡ: ಅಗ್ನಿಶಾಮಕ ಠಾಣೆಗೆ ತಾತ್ಕಾಲಿಕ ಕಚೇರಿ ಆರಂಭಕ್ಕೆ ಪುರಸಭೆ ತಾತ್ಕಾಲಿಕ ಜಾಗ ನೀಡಿ ಒಪ್ಪಿಗೆ ಕೊಟ್ಟಿದೆ. ಆದರೆ, ಈಗ ಶಾಶ್ವತ ಜಾಗ ನೀಡಿದರೆ ಸೂಕ್ತ ಎಂದು ಅಗ್ನಿಶಾಮಕ ಇಲಾಖೆ ಹೇಳುತ್ತಿರುವುದು ತಾತ್ಕಾಲಿಕ ಕಚೇರಿ ಆರಂಭ ಅನುಮಾನ ಎನ್ನಲಾಗುತ್ತಿದೆ.
ಹೌದು, ಪಟ್ಟಣಕ್ಕೆ ಅಗ್ನಿಶಾಮಕ ಠಾಣೆ ಮಂಜೂರಿಯಾಗಿದ್ರೂ ಅದರ ಪ್ರಯೋಜನ ಮಾತ್ರ ಜನರಿಗೆ ಸಿಗುತ್ತಿಲ್ಲ. ಠಾಣೆ ಆರಂಭಿಸಲು ಕ್ಷೇತ್ರದ ಶಾಸಕ ಸಿದ್ದರಾಮಯ್ಯನವರ ಒತ್ತಡವಿದ್ದರೂ ಸಹ ಇಲಾಖೆ ಮಾತ್ರ ಮನಸ್ಸು ಮಾಡುತ್ತಿಲ್ಲ. ಇಲಾಖೆಯ ಕೇಳಿತ್ತು ತಾತ್ಕಾಲಿಕ ಜಾಗ: ಅಗ್ನಿಶಾಮಕ ಠಾಣೆ ಆರಂಭಿಸುವ ಕುರಿತು ಮಾಜಿ ಸಿಎಂ,ಶಾಸಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದರಿಂದ ಹುಬ್ಬಳಿ ಮುಖ್ಯ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಮತ್ತೆ ಸ್ಥಳ ಪರಿಶೀಲನೆ ಮಾಡಿದ್ದರೂ ಅಷ್ಟೇ ಅಲ್ಲದೇ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಟ್ಟರೇ ಕಚೇರಿ ಆರಂಭಿಸಲಾಗುವುದು ಎಂದು ಹೇಳಿದ್ದರು. ಆದರೆ, ಈಗ ಶಾಶ್ವತ ಜಾಗ ಕೊಟ್ಟರೆ ಅನುಕೂಲವಾಗುತ್ತದೆ ಎಂಬ ಮಾತು ಕೇಳಿಬಂದಿದೆ.
ಮೇ 22ರಂದೇ ತಾತ್ಕಾಲಿಕ ಜಾಗ: ಪುರಸಭೆ ಆಡಳಿತಾಧಿಕಾರಿಗಳು, ಬಾಗಲಕೋಟೆಯ ಎಸಿ ಎಚ್.ಜಯಾ ಅವರು ಮೇ 22ರಂದು ಬಾದಾಮಿ ನಾಕಾದ ಬಳಿ ಇರುವ ಸಿಟಿ ಸರ್ವೆ ನಂ.3/2 ರಲ್ಲಿರುವ ಪುರಸಭೆ ಮಾಲಿಕತ್ವದಲ್ಲಿರುವ ವಾಹನ ನಿಲುಗಡೆ ಶೆಡ್ ಮತ್ತು ಆವರಣದಲ್ಲಿರುವ ವಸತಿಗೃಹ ಸಮೇತ ತಾತ್ಕಾಲಿಕವಾಗಿ ಅಗ್ನಿಶಾಮಕ ಘಟಕ ಆರಂಭಿಸಲು ಮಂಜೂರಾತಿ ನೀಡಿದ್ದಾರೆ.
ಏಕೆ ಶಾಶ್ವತ ಜಾಗಕ್ಕೆ ಹಠ: ಈ ಮೊದಲು ಮುಧೋಳದಲ್ಲಿ ತಾತ್ಕಾಲಿಕ ಜಾಗದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದು ಆರಂಭಿಸಿದ ಅಗ್ನಿಶಾಮಕ ಕಚೇರಿಗೆ ಸಮರ್ಪಕ ಜಾಗೆ ಇದುವರೆಗೂ ದೊರೆತಿಲ್ಲ. ಕಾರಣ ಗುಳೇದಗುಡ್ಡದಲ್ಲಿಯೂ ಹೀಗಾಗ ಬಾರದೆಂಬ ಮುಂದಾಲೋಚನೆಯಿಂದ ಅಗ್ನಿಶಾಮಕ ಅಧಿಕಾರಿಗಳು ತಾತ್ಕಾಲಿಕವಾಗಿ ಕಚೇರಿ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಶ್ವತ ಜಾಗ ಕೊಟ್ಟು ಬಿಟ್ಟರೇ ಠಾಣೆಗೆ ಬೇಕಾದ ಕಚೇರಿ, ಸಿಬ್ಬಂದಿಗಳ ವಸತಿಗೃಹ ನಿರ್ಮಿಸಿ, ಜನರಿಗೆ ಉತ್ತಮ ಸೇವೆ ನೀಡಲು ಅನುಕೂಲವಾಗುತ್ತದೆ ಎಂಬುದು ಇಲಾಖೆಯ ಮಾತು.
•ಮಲ್ಲಿಕಾರ್ಜುನ ಕಲಕೇರಿ