Advertisement

BBMP: ಪಾಲಿಕೆ ಬೆಂಕಿ ಪ್ರಕರಣ: ಆಂತರಿಕ ತನಿಖೆ

10:29 AM Aug 17, 2023 | Team Udayavani |

ಬೆಂಗಳೂರು: ಪಾಲಿಕೆ ಗುಣನಿಯಂತ್ರಣ ಪ್ರಯೋಗಾಲದ ಕಚೇರಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ ಪಾಲಿಕೆ ಪ್ರಧಾನ ಅಭಿಯಂತರ ಪ್ರಹ್ಲಾದ್‌ ತಂಡ ಹಲಸೂರು ಗೇಟ್‌ ಪೊಲೀಸರ ಸಮ್ಮುಖದಲ್ಲಿ ಬುಧವಾರ ಆಂತರಿಕ ವಿಚಾರಣೆ ಆರಂಭಿಸಿದೆ.

Advertisement

ಘಟನೆ ಸಂಬಂಧ ತಾಂತ್ರಿಕ ವಿಚಾರಣೆ ವರದಿಯನ್ನು ಆ.31ರೊಳಗೆ ಸಲ್ಲಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬೆಂಕಿ ಅವಘಡ ನಡೆದು 5 ದಿನಗಳ ಬಳಿಕ ಬಿಬಿಎಂಪಿಯಿಂದ ಆಂತರಿಕ ತನಿಖೆ ಆರಂಭವಾಗಿದ್ದು ಮತ್ತಷ್ಟು ಚುರುಕು ಪಡೆಯಲಿದೆ.

ಬುಧವಾರ ಹಸೂರು ಗೇಟ್‌ ಪೊಲೀಸರ ಸಮ್ಮುಖದಲ್ಲಿ ಗುಣನಿಯಂತ್ರಣ ಪ್ರಯೋಗಾಲದ ಕಚೇರಿಯ ಬಾಗಿಲಿನ ಕೀ ತೆಗೆದು ಪಾಲಿಕೆಯ ಎಂಜಿನಿಯರ್‌ ಇನ್‌ ಚೀಫ್ ಪ್ರಹ್ಲಾದ್‌ ತಂಡ ಪರಿಶೀಲನೆ ನಡೆಸಿ ಅವಘಡಕ್ಕೆ ಸಂಬಂಧಿಸಿದಂತೆ ತಾಂತ್ರಿಕ ಮಾಹಿತಿ ಕಲೆಹಾಕಿತು. ತಾಂತ್ರಿಕವಾಗಿ ಏನೆಲ್ಲ ಸುರûಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಲೋಪದೋಷಗಳು ಕಂಡು ಬಂದಿದೆಯಾ ಎಂಬೆಲ್ಲ ಮಜಲುಗಳಲ್ಲಿ ತನಿಖೆ ಪ್ರಾರಂಭವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್‌, ಅವಘಡಕ್ಕೆ ತಾಂತ್ರಿಕವಾಗಿ ಏನೆಲ್ಲ ಕಾರಣವಾಗಿರ ಬಹುದು ಎಂಬ ಬಗ್ಗೆ ಪೂರಕ ಅಂಶಗಳನ್ನು ಕಲೆಹಾಕಲಾಗುತ್ತಿದೆ. ಪಾಲಿಕೆ ಮುಖ್ಯ ಆಯುಕ್ತರು ಈ ತಿಂಗಳ ಅಂತ್ಯದ ಒಳಗೆ ಇಲ್ಲವೆ ಅದಕ್ಕೆ ಮೊದಲು ತನಿಖೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಆ.25ರ ಒಳಗೆ ಘಟನೆಯ ಬಗ್ಗೆ ಸಂಪೂರ್ಣ ವರದಿ ನೀಡುವುದಾಗಿ ತಿಳಿಸಿದ್ದಾರೆ.

ಅವಘಡದ ವೇಳೆ ಸ್ಥಳದಲ್ಲಿದ್ದ ಪಾಲಿಕೆ ಸಹಾಯಕ ಎಂಜಿನಿಯರ್‌ ಆನಂದ್‌ ಅವರಿಂದಲೂ ಘಟನೆಯ ಸಂಬಂಧಿಸಿದಂತೆ ಮಾಹಿತಿಯನ್ನು  ಕಲೆಹಾಕಲಾಗಿದೆ. ಖಾಸಗಿ ನುರಿತ ತಜ್ಞರುಗಳಿಂದಲೂ ಪ್ರಯೋಗಾಲಯದ ಕೊಠಡಿ, ಮೂಲ ಸೌಕರ್ಯಗಳ ಲೋಪದೋಷಗಳ ಬಗ್ಗೆ ಪೂರಕ ಅಂಶಗಳನ್ನು ಕಲೆಹಾಕಲಾಗುತ್ತಿದೆ. ಜತೆಗೆ ಈಗಿರುವ ಪ್ರಯೋಗಾಲದ ಸ್ಥಳವನ್ನು ಸ್ಥಳಾಂತರ ಮಾಡಬೇಕಾ ಎಂಬುವುದರ ಕುರಿತಂತೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದರು.

Advertisement

ಐವರು ಸಂಪೂರ್ಣ ಚೇತರಿಕೆ:

ಬೆಂಕಿ ಅನಾಹುತಕ್ಕೆ ಸಂಬಂಧಿಸಿದಂತೆ ಸುಟ್ಟುಗಾಯದಿಂದ ಬಳಲುತ್ತಿದ್ದ ಬಿಬಿಎಂಪಿಯ 9 ಸಿಬ್ಬಂದಿಗಳ ಪೈಕಿ ಐವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರು ಮೆಡಿಕಲ್‌ ಕಾಲೇಜ್‌ ಆ್ಯಂಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಈ ಬಗ್ಗೆ ಹೆಲ್ತ್‌ ಬುಲೆಟನ್‌ ಬಿಡುಗಡೆ ಮಾಡಿದ್ದು, ಇದರಲ್ಲಿ ಮನೋಜ್‌, ಶ್ರೀನಿವಾಸ್‌, ಸಿರಾಜ್‌, ಶ್ರೀಧರ್‌  ಮತ್ತು ಸಂತೋಷ್‌ ಕುಮಾರ್‌ ಆರೋಗ್ಯದಲ್ಲಿ  ಸಂಪೂರ್ಣ ಚೇತರಿಕೆ ಕಂಡುಬಂದಿದೆ. ಯಾವುದೇ ರೀತಿಯ ದೋಷಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವಿಜಯಮಾಲ ಎಂಬುವವರು ಫ್ಯಾಸಿಯೊಟೊಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಡಯಾಲಿಸಿಸ್‌ನಿಂದ ಬಳಲುತ್ತಿರುವ ಕಿರಣ್‌ ಮತ್ತೂಮ್ಮೆ ಡಯಾಲಿಸಿಸ್‌ಗೆ ಒಳಗಾಗಿದ್ದಾರೆ. ಶೇ.28 ಸುಟ್ಟಗಾಯಗಳಿಂದ ಬಳಲುತ್ತಿರುವ ಡಿಟಿಪಿ ಆಪರೇಟರ್‌ ಜ್ಯೋತಿ ಮತ್ತು ಶೇ.25 ಸುಟ್ಟಗಾಯಕ್ಕೆ ಒಳಗಾಗಿರುವ ಪಾಲಿಕೆ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ ಐಸಿಯುನಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ತಲಾ 10 ಲಕ್ಷ ರೂ. ಪರಿಹಾರಕ್ಕೆ ಮನವಿ :

ಅಗ್ನಿ ಅನಾಹುತದಲ್ಲಿ ಸಿಲುಕಿ ಸುಟ್ಟಗಾಯಗಳಿಂದ ಬೆಂದಿರುವ ಪಾಲಿಕೆ ಮುಖ್ಯ ಅಭಿಯಂತರ ಸೇರಿದಂತೆ 9 ಮಂದಿ ಸಿಬ್ಬಂದಿಗಳಿಗೆ ತಲಾ 10 ಲಕ್ಷ ರೂ.ಪರಿಹಾರ ನೀಡುವಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘ ಪಾಲಿಕೆ ಮುಖ್ಯ ಆಯುಕ್ತರಲ್ಲಿ ಮನವಿ ಮಾಡಿದೆ. ಈ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ  ಎ.ಅಮೃತರಾಜ್‌, ಬೆಂಕಿ ಅನಾಹುತದಲ್ಲಿ 9 ಮಂದಿ ಬೆಂದು ಹೋಗಿದ್ದಾರೆ. ಶೇ.30 ಸುಟ್ಟುಗಾಯದಿಂದ ಬಳಲುತ್ತಿದ್ದಾರೆ. ಅವರಿಗೆ ಪಾಲಿಕೆ ನೆರವು ನೀಡಬೇಕು. ವೈದ್ಯಕೀಯ ಚಿಕಿತ್ಸೆ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಜಮಿನ್‌ ಬಳಕೆ ಏಕೆ?:

ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳು ಮುಗಿದ ಮೇಲೆ ಡಾಂಬರೀಕರಣ ಮಾಡಲಾಗಿರುವ ರಸ್ತೆಯ ಸ್ಥಳದಿಂದ 500 ಗ್ರಾಂ ನಷ್ಟು ಸ್ಯಾಂಪಲ್‌ ತರಲಾಗುತ್ತಿದೆ. ಮೊದಲು ವಿದ್ಯುತ್‌ ಸ್ಟೌವ್‌ ಮೇಲೆ ಇಟ್ಟು  ಆ ಸ್ಯಾಂಪಲ್‌ ಅನ್ನು ಹೀಟ್‌ಮಾಡಲಾಗುತ್ತದೆ. ಬಳಿಕ ಮೆಲ್ಟ್ (ಕರಗಿದ)ಆದ ಅಂಶವನ್ನು ಬೇರ್ಪಡೆ ಮಾಡಲು ಬೆಂಜಮಿನ್‌ ಎಂಬ ರಾಸಾಯನಿಕವನ್ನು  ಪ್ರಯೋಗಿಸಲಾಗುತ್ತದೆ. ಆಗ ಅದು ಜಲ್ಲಿ, ಡಾಂಬರು ಸೇರಿದಂತೆ ಮತ್ತಿತರರ ಅಂಶಗಳನ್ನು ಬೇರ್ಪಡಿಸಲಿದೆ. ಪ್ರಾಥಮಿಕ ಹಂತದ ಪ್ರಯೋಗ ನಡೆದ ನಂತರ ಮತ್ತೂಂದು ಬಾರಿ ಬೆಂಜಮಿನ್‌ ಪರೀಕ್ಷೆ ನಡೆಸಲಾಗುತ್ತದೆ. ಇದರಿಂದ ಪೂರ್ಣ ಮಾಹಿತಿ ದೊರೆಯಲಿದೆ ಎಂದು ಪಾಲಿಕೆ ಮುಖ್ಯ ಎಂಜಿನಿಯರ್‌ ಪ್ರಹ್ಲಾದ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next