ವಿಜಯಪುರ: ಸರ್ಕಾರಿ ಆಸ್ಪತ್ರೆಯಲ್ಲಿ ಬೇಜವಾಬ್ದಾರಿಯಿಂದ ಹೆರಿಗೆ ಮಾಡಿ, ಮಹಿಳೆಯೊಬ್ಬಳು ಮೃತಪಟ್ಟಿದ್ದಳು. ಈ ಕುರಿತು ದಾಖಲಾದ ದೂರಿನಂತೆ ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ನಿರ್ಲಕ್ಷ್ಯ ವಹಿಸಿದ ಸರ್ಕಾರಿ ವೈದ್ಯರಿಗೆ 15 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ವಿಜಯಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಅಂಬಾದಾಸ ಕುಲಕರ್ಣಿ ಈ ಆದೇಶ ನೀಡಿದ್ದಾರೆ. ದೂರು ದಾಖಲಾದ ಬಳಿಕ ಎದುರಾಳಿಗಳಿಗೆ ತಮ್ಮ ಪರ ಅಗತ್ಯ ಸಾಕ್ಷ್ಯಾಧಾರ, ಆಕ್ಷೇಪವಿದ್ದಲ್ಲಿ ಸಲ್ಲಿಸುವಂತೆ ಸಾಕಷ್ಟು ಅವಕಾಶ ನೀಡಿದ್ದರೂ ಸ್ಪಂದಿಸಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಣಮಾಪುರ ಗ್ರಾಮದ ಸುರೇಶ ಮಜ್ಜಗಿ, ಮತ್ತವರ ಮಗಳು ಸುಮಿತಾ ಇಬ್ಬರೂ 20-11-2019 ರಂದು ಜಂಟಿಯಾಗಿ ವಿಜಯಪುರ ಜಿಲ್ಲೆಯ ತಿಕೋಟಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ 4 ಜನ ಸಿಬ್ಬಂದಿ ವಿರುದ್ಧ ವಿಜಯಪುರ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಹಾಜರುಪಡಿಸಿದ ಎಲ್ಲ ದಾಖಲೆ ಪರಿಶೀಲಿಸಿದ ಗ್ರಾಹಕರ ಆಯೋಗ, ಪ್ರಾಥಮಿಕ ಆರೋಗ್ಯ ಕೇಂದ್ರದ ನಾಲ್ವರು ಸಿಬ್ಬಂದಿ ನಿಷ್ಕಾಳಜಿಯಿಂದ ಸೇವಾ ನ್ಯೂನತೆ ಜರುಗಿದೆ. ನಾಲ್ವರೂ ಸಿಬ್ಬಂದಿ ಸೇರಿ ಬಾಧಿತ ದೂರುದಾರರಿಗೆ 15 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
15 ಲಕ್ಷ ರೂ. ಪರಿಹಾರದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿನ ಅಧಿಕಾರಿ 11 ಲಕ್ಷ ರೂ. ಪರಿಹಾರಧನ, 2 ರಿಂದ 4 ಜನ ಸಿಬ್ಬಂದಿ ಪ್ರತ್ಯೇಕವಾಗಿ ಅಥವಾ ಕೂಡಿಕೊಂಡು ಪರಿಹಾರದ ಮೊತ್ತ 4 ಲಕ್ಷ ರೂ. ಸೇರಿಸಿ ನೀಡಬೇಕು. 15 ಲಕ್ಷ ರೂ. ಪರಿಹಾರ ಮೊತ್ತಕ್ಕೆ ಶೇ.9ರಂತೆ ಬಡ್ಡಿಯೊಂದಿಗೆ ದೂರು ದಾಖಲಾದ ದಿನಾಂಕದಿಂದ ನೀಡಬೇಕು. ಇದಲ್ಲದೇ ನಿರ್ಲಕ್ಷ್ಯ ವಹಿಸಿದ ನಾಲ್ವರೂ ಸೇರಿ 25 ಸಾವಿರ ರೂ. ಮಾನಸಿಕ ವ್ಯಥೆಗೆ ಮತ್ತು 10 ಸಾವಿರ ರೂ. ದೂರಿನ ಖರ್ಚನ್ನು ದೂರುದಾರರಿಗೆ ನೀಡಬೇಕು ಎಂದು ಆದೇಶಿಸಿದೆ.
ಪರಿಹಾರದ ಮೊತ್ತ ಇಬ್ಬರೂ ಅರ್ಜಿದಾರರು ಸಮಾನಾಗಿ ಹಂಚಿಕೆ ಮಾಡಿಕೊಳ್ಳಬೇಕು. ಆದೇಶ ಹೊರಬಿದ್ದ 1 ತಿಂಗಳಲ್ಲಿ ಪರಿಹಾರ ವಿತರಿಸಬೇಕು. ತಪ್ಪಿದ್ದಲ್ಲಿ ಸದರಿ ಪರಿಹಾರದ ಮೊತ್ತಕ್ಕೆ ಶೇ.12 ರೂ. ಬಡ್ಡಿ ಸಹಿತ ನೀಡಬೇಕು. 2ನೇ ದೂರುದಾರಳು ಅಪ್ರಾಪ್ತಳಾಗಿದ್ದು, ಆಕೆ ವಯಸ್ಕಳಾಗುವವರೆಗೆ ಅವಳ ಪಾಲಿನ ಸಮಾನ ಹಂಚಿಕೆ ಹಣ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಮಾಡಬೇಕು ಎಂದು ಆದೇಶಿಸಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ವಿ.ಬಿ. ಮುತಾಲಿಕ ದೇಸಾಯಿ, ಕಮಲಕಿಶೋರ್ ಜೋಶಿ ಅವರನ್ನೊಳಗೊಂಡ ಆಯೋಗ ಈ ಆದೇಶ ನೀಡಿದೆ.