Advertisement

ಮಂಗಳೂರು: ಮಧುಕರ್‌ ಶೆಟ್ಟಿಗೆ ಅಂತಿಮ ಗೌರವ 

04:46 AM Dec 30, 2018 | Team Udayavani |

ಮಂಗಳೂರು: ಶುಕ್ರವಾರ ರಾತ್ರಿ ನಿಧನ ಹೊಂದಿದ ಐಪಿಎಸ್‌ ಅಧಿಕಾರಿ ಮಧುಕರ್‌ ಶೆಟ್ಟಿ ಅವರ ಪಾರ್ಥಿವ ಶರೀರ ಶನಿವಾರ ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಮಂಗಳೂರು ಪೊಲೀಸರು ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸಲು ವ್ಯವಸ್ಥೆ ಕಲ್ಪಿಸಿದರು. 

Advertisement

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌, ಪಶ್ಚಿಮ ವಲಯದ ಐಜಿಪಿ ಅರುಣ್‌ ಚಕ್ರವರ್ತಿ, ಎಡಿಜಿಪಿ ಪ್ರತಾಪ್‌ ರೆಡ್ಡಿ, ಮಂಗಳೂರು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ, ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ಬ. ನಿಂಬರಗಿ ಉಪಸ್ಥಿತರಿದ್ದು ಮೃತ ಅಧಿಕಾರಿಗೆ ಅಂತಿಮ ಗೌರವ ಸಲ್ಲಿಸಿದರು.
 
ಸಚಿವ ಯು.ಟಿ. ಖಾದರ್‌, ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ನಿವೃತ್ತ ಲೋಕಾಯುಕ್ತ ನಾ| ಎನ್‌. ಸಂತೋಷ್‌ ಹೆಗ್ಡೆ, ಮಾಜಿ ಶಾಸಕರಾದ ಜೆ.ಆರ್‌. ಲೋಬೋ ಮತ್ತು ಮೊದಿನ್‌ ಬಾವಾ ಅವರು ಶ್ರದ್ಧಾಂಜಲಿ ಸಲ್ಲಿಸಿದರು. ಮೃತ ಮಧುಕರ್‌ ಶೆಟ್ಟಿ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಉಪಸ್ಥಿತರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಕೂಡ ಉಪಸ್ಥಿತರಿದ್ದು ಶ್ರದ್ಧಾಂಜಲಿ ಅರ್ಪಿಸಿದರು. 

ಶನಿವಾರ ರಾತ್ರಿ 10 ಗಂಟೆಗೆ ಮೃತದೇಹವನ್ನು ಹೊತ್ತ ವಿಮಾನ ಮಂಗಳೂರಿಗೆ ಬಂದಿಳಿದಿದ್ದು, ಸಾರ್ವಜನಿಕ ಶ್ರದ್ಧಾಂಜಲಿಯ ಬಳಿಕ 10.45ಕ್ಕೆ ಮೃತದೇಹವನ್ನು ಆ್ಯಂಬುಲೆನ್ಸ್‌ ಮೂಲಕ ಹುಟ್ಟೂರಿಗೆ ಕೊಂಡೊಯ್ಯಲಾಯಿತು.

ಅಂತ್ಯಕ್ರಿಯೆಗೆ ಯಡಾಡಿ-ಮತ್ಯಾಡಿಯಲ್ಲಿ  ಸಿದ್ಧತೆ
ಕೋಟ: ಮಧುಕರ ಶೆಟ್ಟಿ ಅವರ ಅಂತ್ಯಕ್ರಿಯೆ ರವಿವಾರ ಬೆಳಗ್ಗೆ ಹುಟ್ಟೂರು ಕುಂದಾಪುರ ತಾಲೂಕಿನ ಗುಡ್ಡಟ್ಟಿನ ಸಮೀಪ ಯಡಾಡಿ ಮತ್ಯಾಡಿಯಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ.  ಯಡಾಡಿ ಮಹಾಲಿಂಗೇಶ್ವರ ದೇವಸ್ಥಾನ ಸಮೀಪ ಮಧುಕರ ಶೆಟ್ಟಿಯವರ ಮನೆ ಇದೆ. ಇಲ್ಲಿನ ತೋಟದಲ್ಲಿ ತಂದೆ ವಡ್ಡರ್ಸೆ ರಘುರಾಮ ಶೆಟ್ಟಿ – ತಾಯಿ ಪ್ರಫ‌ುಲ್ಲಾ ರೈ  ಸಮಾಧಿ ಇದ್ದು, ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

ಬೆಳಗ್ಗೆ 10ರ ವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಸಕಲ ಸರಕಾರಿ ಗೌರವ ಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ.ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ನೇತೃತ್ವದಲ್ಲಿ, ಹೆಚ್ಚುವರಿ ಎಸ್‌.ಪಿ. ಕುಮಾರಚಂದ್ರ, ಡಿವೈಎಸ್‌ಪಿಗಳು, ವೃತ್ತ ನಿರೀಕ್ಷಕರು, ಉಪನಿರೀಕ್ಷಕರು, ಸಿಬಂದಿ ಭಾಗವಹಿಸಲಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next