ಗದಗ: ಕಲ್ಕತ್ತಾದಲ್ಲಿ ನಿಧನರಾದ ಬಿಎಸ್‌ಎಫ್ ಯೋಧ ಕುಮಾರಸ್ವಾಮಿ ಡಿ. ನಾಗರಾಳ ಅವರ ಪಾರ್ಥಿವ ಶರೀರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ಶನಿವಾರ ಬೆಟಗೇರಿಯ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇದಕ್ಕೂ ಮುನ್ನ ಕೋಲ್ಕತ್ತಾದಿಂದ ಬೆಂಗಳೂರಿಗೆ ವಿಶೇಷ ವಿಮಾನ ಹಾಗೂ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಬೆಳಗ್ಗೆ 6ಕ್ಕೆ ನಗರಕ್ಕೆ ಹುತಾತ್ಮ ಯೋಧ ಕುಮಾರಸ್ವಾಮಿ ಅವರ ಕಳೆಬರ ಆಗಮಿಸಿತು. ಇರಾನಿ ಕಾಲೋನಿಯಲ್ಲಿರುವ ಮನೆಗೆ ಪಾರ್ಥಿವ ಶರೀರ ತಲುಪುತ್ತಿದ್ದಂತೆ ಕುಟುಂಬಸ್ಥರು, ನೆರೆಹೊರೆಯರು ಹಾಗೂ ಸಂಬಂಧಿಕರಲ್ಲಿ ಮಡುಗಟ್ಟಿದ್ದ ದುಃಖ ಸ್ಫೋಟಗೊಂಡಿತು.
ಮಗನ ಕಳೆಬರ ಮನೆಗೆ ತಲುಪುತ್ತಿದ್ದಂತೆ ಪಾರ್ಥಿವ ಶರೀರದ ಜೊತೆಯಲ್ಲೇ ಆಗಮಿಸಿದ ತಾಯಿ ಲಕ್ಷಿ ್ಮ ದೇವಿ, ಯೋಧನ ಪತ್ನಿ ಮಂಜುಳಾ ಸಂಬಂಧಿಕರನ್ನು ಅಪ್ಪಿಕೊಂಡು ಕಣ್ಣೀರು ಹಾಕಿದರು. ವಿಧಿ ನನ್ನ ಯಜಮಾನನ್ನು ಕಿತ್ತುಕೊಂಡು ನಮ್ಮನ್ನು ತಬ್ಬಲಿಯನ್ನಾಗಿಸಿದೆ ಎಂದು ರೋಧಿಸಿದರು. ಈ ದೃಶ್ಯ ನೆರೆದವರ ಕಣ್ಣುಗಳನ್ನು ತೇವಗೊಳಿಸಿತು.
ಬಳಿಕ ಮನೆಯಲ್ಲಿ ಯೋಧನ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದರು. ಕೆಲ ಸಮಯದ ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇಲ್ಲಿನ ಸಾಯಿ ಮಂದಿರ ಸಮೀಪದ ಮೈದಾನಕ್ಕೆ ಸಾಗಿಸಲಾಯಿತು. ನಂತರ ಮಧ್ಯಾಹ್ನ 1ರ ಸುಮಾರಿಗೆ ಅಂತಿಮ ಯಾತ್ರೆ ಆರಂಭಗೊಂಡಿತು. ಹಾತಲಗೇರಿ ನಾಕಾ, ಕೆಸಿ ರಾಣಿ ರಸ್ತೆ, ಮಹಾತ್ಮಗಾಂಧಿ ವೃತ್ತ, ಹೆಲ್ತ್ಕ್ಯಾಂಪ್ ಮಾರ್ಗವಾಗಿ ಮುಕ್ತಿಧಾಮಕ್ಕೆ ತಲುಪಿತು. ಅಂತಿಮ ಯಾತ್ರೆಯಲ್ಲಿ ಸಾಗಿ ಬಂದ ಯುವಕರು ‘ಕುಮಾರಸ್ವಾಮಿ ಅಮರ್ ರಹೇ, ಇನಕ್ಲಾಬ್ ಜಿಂದಾಬಾದ್, ಭೋಲೋ ಭಾರತ ಮಾತಾ ಕೀ ಜೈ’ ಎಂಬ ಘೋಷಣೆಗಳನ್ನು ಮೊಳಗಿಸಿ, ವೀರ ಯೋಧನಿಗೆ ವಿದಾಯ ಹೇಳಿದರು.
ಬೆಟಗೇರಿ ಮುಕ್ತಿ ಧಾಮದಲ್ಲಿ ಸಕಲ ಸರಕಾರಿ ಗೌರವವಂದಿಗೆ ಅಂತಿಮ ಸಂಸ್ಕಾರ ನಡೆಸಲಾಯಿತು.ಈ ವೇಳೆ ಬೆಂಗಳೂರಿನಿಂದ ಆಗಮಿಸಿದ್ದ ಬಿಎಸ್‌ಎಫ್ ಯೋಧರ ಪಡೆ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿತು.
ಅಂತಿಮ ದರ್ಶನಕ್ಕೆ ಹರಿದು ಬಂದ ಜನ: ಇದಕ್ಕೂ ಮುನ್ನ ಶ್ರೀಸಾಯಿ ಮಂದಿರ ಸಮೀಪದ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದ ಯೋಧನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಮೂಲೆಗಳಿಂದ ಜನರು ತಂಡೋಪ ತಂಡವಾಗಿ ಆಗಮಿಸಿದ್ದರು. ಅದರೊಂದಿಗೆ ಅವಳಿ ನಗರದ ವಿವಿಧ ಶಾಲೆಗಳ ಮಕ್ಕಳು ಶಾಲಾ ವಾಹನ ಹಾಗೂ ಸರದಿ ಸಾಲಿನಲ್ಲಿ ನಡೆದು ಬಂದು ಯೋಧನ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು. ಇದೇ ವೇಳೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಡಿವೈಎಸ್‌ಪಿ ವಿಜಯಕುಮಾರ ಟಿ., ಪೌರಾಯುಕ್ತ ಮನಸೂರ ಅಲಿ ಆಗಮಿಸಿ ಹುತಾತ್ಮ ಯೋಧನ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದರು. ಅದರೊಂದಿಗೆ ಅವಳಿ ನಗರದ ವಿವಿಧ ರಾಜಯಕೀಯ ಪಕ್ಷಗಳ ನಾಯಕರು, ಸ್ಥಳೀಯ ಮುಖಂಡರು ಆಗಮಿಸಿ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.