ಇಂಫಾಲ: ಬೂದಿ ಮುಚ್ಚಿದ ಕೆಂಡದಂತಿರುವ ಮಣಿಪುರದಲ್ಲಿ, ಹಿಂಸಾಚಾರದಲ್ಲಿ ಮಡಿದವರ ಅಂತ್ಯಸಂಸ್ಕಾರದ ವಿಚಾರವಾಗಿ ಮತ್ತೂಂದು ಸುತ್ತಿನ ಸಂಘರ್ಷದ ಕಿಡಿ ಹೊತ್ತಿಕೊಳ್ಳುವ ನಡುವೆಯೇ, ಮಣಿಪುರ ಹೈಕೋರ್ಟ್ ಮಧ್ಯಪ್ರವೇಶಿಸಿ, ತನ್ನ ಸಮಯೋಚಿತ ನಿರ್ಣಯದಿಂದ ಗಲಭೆ ಕಿಡಿಗೆ ತಣ್ಣೀರೆರಚಿದೆ.
ಹೌದು ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷದಲ್ಲಿ ಹಲವರು ಮೃತಪಟ್ಟಿದ್ದು, ಕುಕಿ ಜನಾಂಗದವರು ತಮ್ಮವರ 35 ಶವಗಳನ್ನೂ ಸಾಮೂಹಿಕ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಮೈತೇಯಿ ಜನಾಂಗ ಆಕ್ಷೇಪ ವ್ಯಕ್ತಪಡಿಸಿ, ಹೈಕೋರ್ಟ್‌ನಲ್ಲಿ ನಡುರಾತ್ರಿ ಅರ್ಜಿ ಸಲ್ಲಿಸಿತ್ತು.
ಬಳಿಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಾದ ಎಂ.ವಿ.ಮುರಳೀಧರನ್ ಮುಂಜಾನೆ 6 ಗಂಟೆಗೇ ಅರ್ಜಿ ಆಲಿಸಿದ್ದಾರೆ. ಸದ್ಯ ಅಂತ್ಯ ಸಂಸ್ಕಾರಕ್ಕೆ ತಡೆ ನೀಡಿ, ಆಡಳಿತಾಧಿಕಾರಿಗಳಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶಿಸಿದ್ದಾರೆ. ಅಲ್ಲದೇ ಕುಕಿ ಜನಾಂಗಕ್ಕೆ ಬೇಕಿದ್ದರೆ ಸರಕಾರದಿಂದ ಭೂಮಿ ಪಡೆದು ಅಲ್ಲಿ, ಒಂದು ವಾರದ ಬಳಿಕ ಅಂತ್ಯ ಸಂಸ್ಕಾರ ನಡೆಸುವಂತೆ ಸೂಚನೆ ನೀಡಿದ್ದಾರೆ.
ಘರ್ಷಣೆ:
19 ಮಂದಿಗೆ ಗಾಯ: ಬಿಷ್ಣುಪುರ ಜಿಲ್ಲೆಯಲ್ಲಿ ಮತ್ತೂಮ್ಮೆ ಉದ್ವಿಗ್ನತೆ ಶುರುವಾಗಿದೆ. ಭದ್ರತಾ ಪಡೆಗಳು ಅಳವಡಿಸಿರುವ ಬ್ಯಾರಿಕೇಡ್‌ಗಳನ್ನು ದಾಟಲು ಮೈತೇಯಿ ಮಹಿಳೆಯರು ಮುಂದಾಗಿದ್ದು, ಅವರನ್ನು ತಡೆದ ಪರಿಣಾಮ ಮೈತೇಯಿ ಜನಾಂಗ ಮತ್ತು ಭದ್ರತಾ ಸಿಬಂದಿ ನಡು ವೆಯೇ ಘರ್ಷಣೆ ಏರ್ಪಟ್ಟಿದೆ. ಸಿಬಂದಿ ಮೇಲೆ ಜನರು ಕಲ್ಲುತೂರಾಟ ನಡೆಸಿದ್ದು, ಗುಂಪನ್ನು ಚದುರಿಸಲು ಪೊಲೀಸರು ಅಶ್ರು ವಾಯು ಪ್ರಯೋಗಿಸಿದ್ದಾರೆ. ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಪೂರ್ವ ಮತ್ತು ಪಶ್ಚಿಮ ಇಂಫಾಲದಲ್ಲಿ ಹಿಂಪಡೆದಿದ್ದ ಕರ್ಫ್ಯೂವನ್ನು ಘಟನೆ ಬಳಿಕ ಮತ್ತೆ ಜಾರಿಗೊಳಿಸಲಾಗಿದೆ.