ಯಾದಗಿರಿ: ಹತ್ತಿ ಬಿಡಿಸಲು ಕೂಲಿಕಾರರು ಸಿಗದೆ ರೈತರು ಕಂಗಲಾಗಿದ್ದು, ಇನ್ನೊಂದಡೆ ಭತ್ತದ ರಾಶಿ ಆರಂಭವಾಗಿದ್ದು, ಎರಡು ಕೃಷಿ ಚಟುವಟಿಕೆಗಳು ಒಂದೇ ಸಮಯದಲ್ಲಿ ಬಂದಿದ್ದು, ಕೂಲಿಕಾರರ ಅಭಾವ ಎದುರಾಗಿದೆ.
ಖಾನಾಪುರ, ಹೆಡಗಿಮದ್ರಿ, ಬಿಳ್ಹಾರ, ಕಂದಳ್ಳಿ, ಬೆಂಡೆಗೆಂಬಳಿ, ಮಲ್ಹಾರ, ಸಾವೂರ, ಹುಣಸಗಿ, ಕೆಂಭಾವಿ, ವಡಗೇರಾ, ಗಡ್ಡೆಸೂಗುರು, ದೋರನಹಳ್ಳಿ, ಗುರುಸಣಿಗಿ, ನಾಯ್ಕಲ್, ಹತ್ತಿಗೂಡುರು, ದೇವಾಪುರ, ರಸ್ತಾಪುರ, ದರಿಯಾಪುರ,
ತಂಗಡಗಿ, ಗುಂಡಳ್ಳಿ, ಹತ್ತಿಕುಣಿ, ಮೈಲಾಪುರ, ಸೇರಿದಂತೆ ಇನ್ನಿತರ ಹಳ್ಳಿಗಳಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಸಾಕಷ್ಟು ಇದ್ದು, ಹತ್ತಿ ಬಿಡಿಸಲು ಕಾರ್ಮಿಕರು ಸಿಗದೆ ರೈತರು ಪರದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದಾರೆ. ಈಗ ಬೆಳೆ ಕೈಗೆ ಬಂದಿದ್ದು, ಹತ್ತಿ ಬಿಡಿಸಲು ಕೃಷಿ ಕಾರ್ಮಿಕರು ಸಿಗದ ಕಾರಣ ರೈತರು ಕೃಷಿಕಾರ್ಮಿಕರ ಹುಡುಕಾಟದಲ್ಲಿದ್ದಾರೆ. ಕೆಲವರು ಮಾನ್ವಿ, ಸಿಂಧನೂರು, ರಾಯಚೂರು ಹಾಗೂ ಆಂಧ್ರಪ್ರದೇಶ ಗಡಿ ಭಾಗಗಳಿಂದ ಕೃಷಿ ಕಾರ್ಮಿಕರನ್ನು ಕರೆಸಿಕೊಂಡು ಹೆಚ್ಚಿನ ಬೆಲೆ ನೀಡಿ ಹತ್ತಿ ಬಿಡಿಸುತ್ತಿದ್ದಾರೆ. ಇನ್ನೂ ಕೆಲವರು ಬಿಡಿಸುವ ಹಂತದಲ್ಲಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಹತ್ತಿ ಬಿಡಿಸುವ ಕಾರ್ಯ ಮಂದಗತಿಯಲ್ಲಿ ಸಾಗಿದೆ.
ಹತ್ತಿ ಬೆಳೆ ಕೈಗೆ ಬಂದಿದ್ದು, ಅದನ್ನು ಬಿಡಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗಲು ರೈತರು ಹೆಣಗಾಡಬೇಕಾಗಿದೆ. ತಮ್ಮ ಹಳ್ಳಿಗಳಲ್ಲಿ ಹತ್ತಿ ಬಿಡಿಸಲು ಕೃಷಿ ಕಾರ್ಮಿಕರು ಸಿಗದ ಹಿನ್ನಲೆಯಲ್ಲಿ ರೈತರು ಬೇರೆ ಊರುಗಳಿಂದ ಕೂಲಿ ಕಾರ್ಮಿಕರನ್ನು ಕರೆಸಿಕೊಂಡು ಬರುತ್ತಿದ್ದಾರೆ. ಅವರನ್ನು ಆಟೋ ಅಥವಾ ಟಂಟಂ ಮೂಲಕ ಕರೆತಂದು ಮತ್ತೆ ವಾಪಸ್ಸು ಅವರ ಹಳ್ಳಿಗೆ ಬಿಟ್ಟು ಬರಲಾಗುತ್ತಿದೆ. ಒಂದು ವೇಳೆ ವಾಹನ ಮಾಡದಿದ್ದರೆ ಕೃಷಿ ಕಾರ್ಮಿಕರು ಹತ್ತಿ ಬಿಡಿಸಲು ಬರಲು ನಿರಾಕರಿಸುತ್ತಿದ್ದಾರೆ. ಮನೆಯಲ್ಲಿ ಐದಾರು ಜನ ಇದ್ದರೆ ಕೃಷಿ ಕಾರ್ಮಿಕರ ಅವಲಂಬನೆ ಇಲ್ಲದೇ ತಮ್ಮ ಜಮೀನಿನಲ್ಲಿ ಬೆಳೆದ ಹತ್ತಿಯನ್ನು ತಾವೇ ಬಿಡಿಸಿಕೊಳ್ಳುತ್ತಿದ್ದಾರೆ.
ಆದರೆ ಕೆಲವೇ ಸಂಖ್ಯೆಯಿರುವ ರೈತರ ಕುಟುಂಬ ಹತ್ತಿ ಬಿಡಿಸಲು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರು ಕುಟುಂಬ ಸಮೇತ ಬೆಂಗಳೂರು, ಮುಂಬೈ, ಹೈದ್ರಾಬಾದ ಸೇರಿದಂತೆ ಇನ್ನಿತರ ಕಡೆಗೆ ದುಡಿಯಲು ಹೋಗಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಈಗ ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಕೊರತೆಯಿಂದ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕೆಲಸಗಾರರ ಸಮಸ್ಯೆ
ಟಂಟಂ ಬಾಡಿಗೆ ಮಾಡಿ ಕೂಲಿಕಾರರನ್ನು ಕರೆಸಿ ದಿನಕ್ಕೆ 120 ಕೂಲಿ ಹಣ ನೀಡಿದರೂ ಕೂಲಿ ಕಾರ್ಮಿಕರು ಬರಲು ಹತ್ತಿ ಬಿಡಿಸಲು ಹಿಂಜರಿಯುತ್ತಿದ್ದು, ಏನು ಮಾಡಬೇಕೆಂದು ತೋಚುತ್ತಿಲ್ಲ.
ಶರಣಪ್ಪ ಸಾಹುಕಾರ್, ರೈತ
ರಾಜೇಶ ಪಾಟೀಲ್ ಯಡ್ಡಳಿ