ಬೀದರ: ರಾಷ್ಟ್ರೀಯ ಭಾವೈಕ್ಯ ಹಾಗೂ ಕೋಮು ಸೌಹಾರ್ದತೆ ಮೂಡಿಸುವಲ್ಲಿ ಸಾಂಪ್ರದಾಯಿಕ ಹಬ್ಬ ಎಳ್ಳ ಅಮಾವಾಸ್ಯೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಹೇಳಿದರು. ನಗರದ ನಾವದಗೇರಿಯ ಹೆಬ್ಟಾಳೆ ಅವರ ತೋಟದಲ್ಲಿ ಸೋಮವಾರ ಜಾನಪದ ಪರಿಷತ್ತು ಮತ್ತು ಕರುಣಾಮಯ ಯುವಕ ಸಂಘದ ಸಹಯೋಗದಲ್ಲಿ ಎಳ್ಳ ಅಮಾವಾಸ್ಯೆ ನಿಮಿತ್ತ ಆಯೋಜಿಸಿದ್ದ “ಜಾನಪದ ಝಂಕಾರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಳ್ಳ ಅಮಾವಾಸ್ಯೆ ಒಂದು ವಿಶಿಷ್ಟ ಹಾಗೂ ಉತ್ಸಾಹಜನಕ ಹಬ್ಬವಾಗಿದ್ದು, ಪರಸ್ಪರ ಪ್ರೀತಿ ಹಾಗೂ ವಿಶ್ವಾಸ ಹೆಚ್ಚಿಸುವ ಹಬ್ಬವಾಗಿದೆ. ಗತಕಾಲದ ಜಾನಪದ ಬದುಕನ್ನು ಎತ್ತಿ ತೋರಿಸುವ ಇಂತಹ ಹಬ್ಬಗಳು ದೇಶದ ಸಾಮಾಜಿಕ, ಆರೋಗ್ಯ, ನೈತಿಕ ಮತ್ತು ಭಾವನಾತ್ಮಕ ದೃಷ್ಟಿಕೋನವನ್ನು ಎದ್ದು ತೋರಿಸುತ್ತದೆ ಎಂದರು. ಜಿಂಪಂ ಸಿಇಒ ಡಾ| ಆರ್.ಸೆಲ್ವಮಣಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದು ಸಮಾಜದಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಹಾಗೂ ಸೌಹಾರ್ದತೆಯ ಕೊರತೆ ಎದ್ದು ತೋರುತ್ತಿದೆ. ಆದರೆ ಎಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ಆಚರಿಸಲಾಗುತ್ತದೆಯೋ ಅಲ್ಲಿ ಮತ್ತೆ ಭಾವನೆಗಳು ಹುಟ್ಟಿ, ಸಂಬಂಧಗಳು ಗಟ್ಟಿಗೊಳ್ಳಲು ಪ್ರೇರೆಪಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ| ಶಂಭುಲಿಂಗ ಕಾಮಣ್ಣ “ಜಾನಪದದ ಮಹತ್ವ’ ಕುರಿತು ಮಾತನಾಡಿ, ಜಾನಪದ ಸಂಸ್ಕೃತಿಯಲ್ಲಿ ಎಳ್ಳ ಅಮಾವಾಸ್ಯೆಗೆ ತನ್ನದೆ ಆದ ಮಹತ್ವದ ಸ್ಥಾನವಿದ್ದು, ಇಲ್ಲಿ ಬಳಸುವ ಪದಗಳು, ತಯಾರಿಸುವ ಆಹಾರ ಪದಾರ್ಥಗಳು, ಉಪಯೋಗಿಸುವ ಗಾಳಿಪಟ, ಜೋಕಾಲಿ ಎಲ್ಲವೂ ಜಾನಪದ ಬದುಕಿನಲ್ಲಿ ಕಂಡು ಬರುತ್ತವೆ. ಇಂತಹ ಹಬ್ಬದಲ್ಲಿ ಅಳಿದು ಹೋಗುತ್ತಿರುವ ಸಂಸ್ಕಾರ ಹಾಗೂ ಸಂಸ್ಕೃತಿ ಮತ್ತೆ ಚಿಗುರುವವು ಎಂದರು.
ಜಾನಪದ ಪ್ರಾದೇಶಿಕ ಕೇಂದ್ರದ ಸಂಯೋಜನಾಧಿಕಾರಿ ಡಾ| ಜಗನ್ನಾಥ ಹೆಬ್ಟಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಳ್ಳ ಅಮಾವಾಸ್ಯೆ ಇದು ಜಾತ್ರೆ ಅಥವಾ ಪಾರಂಪರಿಕ ಉತ್ಸವಕ್ಕಿಂತ ಮಿಗಿಲಾಗಿ ಕಂಡು ಬರುತ್ತದೆ. ಇಲ್ಲಿ ತಯಾರಿಸುವ ತಿಂಡಿ-ತಿನಿಸುಗಳು ನಮ್ಮ ಆರೊಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಪರಿಷತ್ ತಾಲೂಕಾಧ್ಯಕ್ಷ ಎಸ್.ಬಿ. ಕುಚಬಾಳ್ ಪ್ರಾಸ್ತಾವಿಕ ಮಾತನಾಡಿದರು. ಅಶೋಕ ಹೆಬ್ಟಾಳೆ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ನಿರೂಪಿಸಿದರು. ಚಂದ್ರಶೇಖರ ಹೆಬ್ಟಾಳೆ ವಂದಿಸಿದರು. ಕಲಾವಿದರಾದ ಶಿವಕುಮಾರ ಪಾಂಚಾಳ, ನಾಗಪ್ಪ ಖಾಶೆಂಪುರ, ರಾಮಚಂದ್ರ ಹೆಡಗಾಪುರ ಜಾನಪದ ಗಾಯನ ನಡೆಸಿಕೊಟ್ಟರು. ಮಲ್ಲಿಕಾರ್ಜುನ್ ತಬಲಾ ಸಾಥ್ ನೀಡಿದರು.
ಕಾರ್ಯಕ್ರಮದಲ್ಲಿ ಹುಗ್ಗಿ, ಬಜ್ಜಿ, ಅಂಬಲಿ ವ್ಯವಸ್ಥೆ ಮಾಡಲಾಗಿತ್ತು. ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ವೈಜಿನಾಥ ಕಮಠಾಣೆ, ಪ್ರಮುಖರಾದ ಪ್ರೊ| ಎಸ್.ಬಿ.ಬಿರಾದಾರ, ಶಂಭುಲಿಂಗ ವಾಲೊಡ್ಡಿ, ಎಂ.ಜಿ. ದೇಶಪಾಂಡೆ, ಚಂದ್ರಪ್ಪ ಹೆಬ್ಟಾಳಕರ್, ವಿಜಯಕುಮಾರ
ಸೋನಾರೆ, ಬಸವರಾಜ ಭರಶೆಟ್ಟಿ ಸೇರಿದಂತೆ ಜಾನಪದ ಕಲಾವಿದರು, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಜರಿದ್ದರು.