Advertisement

ಮಗಳ ಪ್ರತಿಭೆಗೆ ಬೆಳಕಾದ ತಂದೆ; ಮಗಳಾದಳು ‘ಹ್ಯೂಮನ್ ಕಂಪ್ಯೂಟರ್’ಗಣಿತ ತಜ್ಞೆ..

10:18 PM May 06, 2020 | Sriram |

ಮನುಷ್ಯನ ಬುದ್ದಿಯೇ ಆತನ ಶಕ್ತಿ. ಆ ಶಕ್ತಿಯಿಂದ ಆತ ಯಾವುದನ್ನು ಬೇಕಾದರು ಯೋಚಿಸಬಹುದು, ಯಾವುದನ್ನು ಬೇಕಾದರು ಯೋಜಿಸಬಹುದು ಅನ್ನುವುದಕ್ಕೆ ಜಗತ್ತಿನ ಶ್ರೇಷ್ಠ ಸಾಧಕರ ಜೀವನ ಚರಿತ್ರೆಯೇ ಸಾಕ್ಷ್ಯವಾಗಿ ನಿಲ್ಲುತ್ತದೆ.

Advertisement

ಶಕುಂತಲಾ ದೇವಿ. ‘ಮಾನವ ಕಂಪ್ಯೂಟರ್’ ಎಂದು ಕರೆಯಲ್ಪಡುವ ಇವರ ಹುಟ್ಟು1929 ನವೆಂಬರ್ 4 ರಂದು ಬೆಂಗಳೂರಿನ ಬ್ರಾಹ್ಮಣ ಕುಟುಂಬದಲ್ಲಿ ಆಯಿತು. ದೇವರ ಸೇವೆ ಮಾಡುವ ಪೂಜಾ ಕಾರ್ಯದಲ್ಲಿ ಆಸಕ್ತಿ ಕಾಣದ ಶಕುಂತಲಾ ದೇವಿಯ ತಂದೆ ವಿಶ್ವಮಿತ್ರ ಮಣಿ. ಊರು ಬಿಟ್ಟು ಸರ್ಕಸ್ ಕಂಪೆನಿಯೊಂದರಲ್ಲಿ ಕಾಯಕವನ್ನು ಮಾಡಲು ಆರಂಭ ಮಾಡುತ್ತಾರೆ. ಇದೇ ವೇಳೆಯಲ್ಲಿ ನಾಲ್ಕು ವರ್ಷದ ಪುಟ್ಟ ಹುಡುಗಿ ಶಕುಂತಲಾ ದೇವಿ ಸಹ ತನ್ನ ತಂದೆಯೊಡನೆ ಸರ್ಕಸ್ ಕಂಪೆನಿಗೆ ಆಗಾಗ ಹೋಗುತ್ತಿದ್ದಳು. ಅದೊಂದು ದಿನ ತಂದೆ ವಿಶ್ವಾಮಿತ್ರ ಕಾರ್ಡ್ಸ್ ಗಳ ಹಿಂದಿರುವ ರಹಸ್ಯವನ್ನು ಮಗಳಿಗೆ ಹೇಳಿಕೊಟ್ಟಾಗ ಪುಟ್ಟ ಮಗಳ ಬುದ್ದಿಗೆ ಬೆರಗುಗೊಂಡು ಬಿಟ್ಟರು. ಮಗಳ ಚತುರತೆಯನ್ನು ಮನಗಂಡ ತಂದೆ, ಪ್ರತಿದಿನ ಮಗಳೊಡನೆ ಕಾರ್ಡ್ಸ್ ಆಟವನ್ನು ಆಡುತ್ತಾರೆ. ಆದರೆ ಪ್ರತಿಬಾರಿಯೂ ಮಗಳ ಬುದ್ದಿಯ ಎದುರು ತಂದೆಯ ಚತುರತೆ ಸೋಲುತ್ತದೆ.

ಮಗಳ ಈ ಅಸಾಮಾನ್ಯ ಸಾಮರ್ಥ್ಯವನ್ನು ‌ಮನಗಂಡ ತಂದೆ ವಿಶ್ವಾಮಿತ್ರ ಇದ್ದ ಕೆಲಸ ಬಿಟ್ಟು ಮಗಳ ಬುದ್ದಿ ಸಾಮಾರ್ಥ್ಯವನ್ನು ಇತರ ಕಡೆಗೆ ಸಾಗಿಸಲು ಕಾರ್ಡ್ಸ್ ಪ್ರದರ್ಶನದ ವೇಳೆಯಲ್ಲಿ ಶಕುಂತಲಾ ದೇವಿ ಗಣಿತದ ಸವಾಲುಗಳನ್ನು ಒಂದೇ ಘಳಿಗೆಯ ವೇಗದಲ್ಲಿ ಪರಿಹಾರ ಮಾಡುತ್ತಾರೆ. ಈ ರೀತಿ ಪ್ರದರ್ಶನದಲ್ಲಿ ಶಕುಂತಲಾ ದೇವಿಯ ಪ್ರತಿಭೆ ಎಲ್ಲೆಡೆ ಹರಡಲು ಶುರುವಾಗುತ್ತದೆ.

ಮೈಸೂರು ವಿಶ್ವವಿದ್ಯಾನಿಲಯದಿಂದ ಶಕುಂತಲಾ ದೇವಿಗೆ ಆಹ್ವಾನವೊಂದು ಬರುತ್ತದೆ. ಅಲ್ಲಿ ನೀಡುವ ಗಣಿತದ ಪ್ರಶ್ನೆಗಳನ್ನು ಎಂದಿನಂತೆ ಎಷ್ಟೇ ಕಠಿಣವಾಗಿದ್ದರು ಅದನ್ನು ಸುಲಭವಾಗಿ ಕರಗತ ಮಾಡಿಕೊಂಡು ಉತ್ತರ ನೀಡಿ ಮತ್ತೊಮ್ಮೆ ಬುದ್ದಿವಂತಿಕೆಯಲ್ಲಿ‌ ಮೇಲುಗೈ ಸಾಧಿಸುತ್ತಾರೆ. ವಿಶೇಷ ಅಂದರೆ ಅಷ್ಟಾಗಿ ಕಲಿಯದೆ ಇದ್ದ ಶಕುಂತಲಾ ದೇವಿಗೆ ಯಾವುದೇ ವಿಷಯವನ್ನು ಒಂದು ಸಲಿ ನೋಡಿಕೊಂಡರೆ ಮರೆತು ಹೋಗುವುದು ನೂರರಲ್ಲಿ ಒಂದು ಸಲಿಯಂತೆ ಅಪರೂಪ.

ಇಷ್ಟು ಸಮಯ ಭಾರತದಲ್ಲಿ ಚರ್ಚೆ ಆಗುತ್ತಿದ್ದ ಶಕುಂತಲಾ ದೇವಿಯ ಪ್ರತಿಭೆ ಮೊದಲ ಬಾರಿ ಬಿಬಿಸಿ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತದೆ. ಈ ಕಾರ್ಯಕ್ರಮದ ಬಳಿಕ ಶಕುಂತಲಾ ದೇವಿಯ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಚ್ಚಾಗುತ್ತದೆ. ಬಿಬಿಸಿ ರೇಡಿಯೋ ಕಾರ್ಯಕ್ರಮದ ನಿರೂಪಕ ಶಕುಂತಲಾ ದೇವಿಗೆ ಅತ್ಯಂತ ಕಠಿಣ ಹಾಗೂ ಒಮ್ಮೆಗೆ ಉತ್ತರಿಸಲು ಆಗದ ತಲೆಯನ್ನು ವಂಚಿಸುವ ಪ್ರಶ್ನೆಯನ್ನು ಕೇಳುತ್ತಾರೆ. ಇದಕ್ಕೆ ಶಕುಂತಲಾ ದೇವಿ‌ ಕೆಲವೇ ಸೆಕೆಂಡ್ ಗಳಲ್ಲಿ ಉತ್ತರ ಕೊಡುತ್ತಾರೆ. ಈ ಕಾರ್ಯಕ್ರಮದ ಬಳಿಕ ಶಕುಂತಲಾ ದೇವಿಯ ಹೆಸರು ಎಲ್ಲೆಡೆ ಪ್ರಸಿದ್ದಿ ಆಗುತ್ತದೆ. ಕಾರ್ಯಕ್ರಮದಲ್ಲಿ ಶಕುಂತಲಾ ಕೊಟ್ಟ ಉತ್ತರ ಭಿನ್ನವಾಗಿರುತ್ತದೆ. ಪ್ರಶ್ನೆ ಸಿದ್ದ ಮಾಡಿದ್ದ ನಿರೂಪಕನ ಉತ್ತರ ತಪ್ಪು ಆಗಿರುತ್ತದೆ.

Advertisement

ಟೆಕ್ಸಾಸ್ ನ ಡಾಲಸ್ ವಿಶ್ವವಿದ್ಯಾಲಯದಲ್ಲಿದ್ದ ಆಧುನಿಕ ಕಂಪ್ಯೂಟರ್ ಹಾಗೂ ಶಕುಂತಲಾ ನಡುವೆ ಸ್ಪರ್ಧೆ ನಡೆಯುತ್ತದೆ ಕಠಿಣ ಪ್ರಶ್ನೆಗೆ ಕಂಪ್ಯೂಟರ್ 62 ಸೆಕೆಂಡ್ ಗಳನ್ನು ತೆಗೆದುಕೊಂಡರೆ ಯಾವ ಪೆನ್ ಪೇಪರ್ ಇಲ್ಲದೆಯೇ ಬರೀ ತನ್ನ ಯೋಚನಾ ಶಕ್ತಿಯಿಂದ ಶಕುಂತಲಾ ದೇವಿ 52 ಸೆಕೆಂಡ್ ಗಳಲ್ಲಿ ಉತ್ತರ ನೀಡುತ್ತಾರೆ. ಯಂತ್ರಗಳ ಮುಂದೆ ಮಾನವ ಬುದ್ದಿಯೇ ಮೇಲು ಎಂಬುದನ್ನು ಸಾಬೀತು ಮಾಡುತ್ತಾರೆ. 1982 ರ ಹೊತ್ತಿನಲ್ಲಿ ‘ಗಿನ್ನಿಸ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ಸ್’ ಸಂಚಿಕೆಯಲ್ಲಿ ಇವರ ಸಾಧನೆ ಅಚ್ಚಾಗುತ್ತದೆ. ಅಲ್ಲಿಂದ ‘ ಹ್ಯೂಮನ್ ಕಂಪ್ಯೂಟರ್’ ಹೆಸರಿನಿಂದ ಎಲ್ಲೆಡೆ ಪ್ರತಿಭೆ ಪರಿಚಯ ಆಗುತ್ತದೆ.

ದೇಶ ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ, ಆ ಕಾಲದಲ್ಲೇ ‘The World of Homosexuals’ ಎನ್ನುವ ಪುಸ್ತಕ ಬರೆದು ದೊಡ್ಡ ಚರ್ಚೆಗೆ ಒಳಗಾಗುತ್ತಾರೆ. ‘Astrology for You’ ಎನ್ನುವ ಜ್ಯೋತಿಷ್ಯ ಸಂಬಂಧಿತ ಪುಸ್ತಕವನ್ನು ಬರಹದ ರೂಪದಲ್ಲಿ ಹೊರ ತಂದಿದ್ದಾರೆ. ಇವರ ಪುಸ್ತಕಗಳು ಇಂದಿಗೂ ಪ್ರಸಕ್ತ.

1980 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಗಣಿತದ ಲೆಕ್ಕಗಳನ್ನೇ ಜೀವನದುದ್ದಕ್ಕೂ ಜಗತ್ತಿಗೆ ಪಸರಿಸಿದ ಶಕುಂತಲಾ ದೇವಿ ಏಪ್ರಿಲ್ 21, 2013 ರಲ್ಲಿ ಇಹಲೋಕವನ್ನು ತ್ಯಜಿಸುತ್ತಾರೆ. ‘ಹ್ಯೂಮನ್ ಕಂಪ್ಯೂಟರ್’ ಎಂದು ಬಿರುದು ಪಡೆದುಕೊಂಡಿದ್ರು, ಅವರಿಗೆ ಇದು ಇಷ್ಟವಾಗುತ್ತಿರಲಿಲ್ಲ. ಮಾನವ ಬುದ್ದಿ ಶಕ್ತಿಗಿಂತ ದೊಡ್ಡ ಕಂಪ್ಯೂಟರ್ ಬೇರೆ ಯಾವುದು ಇಲ್ಲ ಎನ್ನುವುದು ಶಕುಂತಲಾ ದೇವಿ ನಂಬಿಕೆ.

ಅಂದ ಹಾಗೆ ವಿದ್ಯಾಬಾಲನ್ ಮುಖ್ಯ ಭೂಮಿಕೆಯಲ್ಲಿ ಅನು ಮೆನನ್ ನಿರ್ದೇಶನದಲ್ಲಿ ಶಕುಂತಲಾ ದೇವಿ ಅವರ ಜೀವನ ಚರಿತ್ರೆ ಆಧಾರಿತ ಚಿತ್ರ ಈ ವರ್ಷ ಬಿಡುಗಡೆಯಾಗಲಿದೆ.

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next