ವಿಜಯಪುರ: ನೀರಾವರಿ ಸೇರಿದಂತೆ ಇತರೆ ಯೋಜನೆ, ಸೌಲಭ್ಯ ನೀಡಿದ ಜನಪ್ರತಿನಿಧಿಗಳಿಗೆ ವೈವಿಧ್ಯಮಯ ವಸ್ತುಗಳ ಹಾರ, ತುರಾಯಿ ಹಾಕುವುದು ಸಾಮಾನ್ಯವಾಗಿದೆ. ಆದರೆ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಯುವರೈತರೊಬ್ಬರು ತಮ್ಮ ಜಮೀನಿಗೆ ನೀರು ಹರಿಸಿದ ಶಾಸಕನಿಗೆ ತಾನೇ ಸಾಕಿದ ಆಕಳ ಹಾಲು ಕುಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸಿದ್ದಾಪುರ ಕೆ. ಗ್ರಾಮದ ಯುವ ರೈತ ವೃಷಭನಾಥ ಯಶವಂತ ಘೋಸರವಾಡ ಬುಧವಾರ ಬೆಳಿಗ್ಗೆ ನಗರದಲ್ಲಿರುವ ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಅವರ ಮನೆಗೆ ಬಂದಿದ್ದರು. ಬರುವಾಗ ವಾಹನದಲ್ಲಿ ಹಾಲು ತುಂಬಿ 3-4 ಕ್ಯಾನ್ ಗಳನ್ನೂ ತಂದಿದ್ದರು.
ಯುವ ರೈತ ಕ್ಯಾನ್ ಸಹಿತ ಬಂದುದನ್ನು ಗಮನಿಸಿದ ಶಾಸಕ ಎಂ.ಬಿ.ಪಾಟೀಲ ಅವರ ಗೃಹ ಕಛೇರಿ ಸಿಬ್ಬಂದಿ ಪ್ರಶ್ನಿಸಿದಾಗ, ಯುವರೈತ ವೃಷಭನಾಥ ಕ್ಷೇತ್ರದ ರೈತರಿಗೆ ನೀರಾವರಿ ಮಾಡಿದ ಮಾಜಿ ಸಚಿವರೂ ಆಗಿರುವ ಶಾಸಕ ಎಂ.ಬಿ. ಪಾಟೀಲ ಅವರಿಗೆ ಕುಡಿಸಲು ಹಾಲು ತಂದಿದ್ದಾಗಿ ಹೇಳಿದ್ದನ್ನು ಕೇಳಿ, ಅಚ್ಚರಿಯೊಂದಿಗೆ ವಿಷಯವನ್ನು ಶಾಸಕರ ಗಮನಕ್ಕೆ ತಂದಿದ್ದಾರೆ.
ಕೂಡಲೇ ಹೊರ ಬಂದ ಶಾಸಕ ಎಂ.ಬಿ.ಪಾಟೀಲ, ತಮಗಾಗಿ ಕಾದಿರುವ ರೈತ ವೃಷಭನಾಥನ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದಾಗ, ಯುವರೈತ ಎಂ.ಬಿ.ಪಾಟೀಲ ಅವರ ಕಾಲಿಗೆ ಬಿದ್ದು, ನಮಸ್ಕರಿಸಿ, ನಿಮಗೆ ಕುಡಿಸಲು ನಾನು ಸಾಕಿದ ಆಕಳ ಹಾಲು ತಂದಿದ್ದೇನೆ. ದಯವಿಟ್ಟು ಸೇವಿಸಬೇಕೆಂದು ಮನವಿ ಮಾಡುತ್ತಾನೆ.
ಅಲ್ಲದೇ ಕುಡಿಯುವ ನೀರಿಗೂ ತತ್ವಾರ ಇದ್ದ ನಮ್ಮ ಭಾಗಕ್ಕೆ ನಿಮ್ಮ ರಾಜಕೀಯ ರಹಿತ ಅಭಿವೃದ್ಧಿ ಬದ್ಧತೆಯಿಂದ ನೀರಾವರಿ ಸೌಲಭ್ಯ ಸಿಕ್ಕಿದೆ. ಹೀಗಾಗಿ ವಿದ್ಯಾವಂತನಾದ ನಾನು ನೌಕರಿ ಮಾಡುವ ನಿರ್ಧಾರದಿಂದ ಹಿಂದೆ ಸರಿದು, ನನ್ನ ತಮ್ಮ ಭೀಮು ಜೊತೆ ಸೇರಿ ಇರುವ ಮೂರು ಎಕರೆ ಜಮೀನಿನಲ್ಲಿ ಅರ್ಧ ಎಕರೆ ಮೇವೂ ಬೆಳೆದುಕೊಂಡು ಹೈನುಗಾರಿಕೆ ಮಾಡುತ್ತಿದ್ದೇನೆ. ಸಮಗ್ರ ಕೃಷಿಯಲ್ಲಿ ತೊಡಗಿದ್ದೇನೆ. ದ್ರಾಕ್ಷಿ ತೋಟ ಮಾಡಿದ್ದೇನೆ, ನಾಲ್ಕಾರು ಆಕಳು ಸಾಕಿಕೊಂಡು ನಿತ್ಯವೂ ನೂರು ಲೀಟರ್ ಹಾಲು ಮಾರಾಟ ಮಾಡಿ, ಲಕ್ಷಾಂತರ ರೂ. ಆದಾಯ ಗಳಿಸುತ್ತಿದ್ದೇನೆ. ದ್ರಾಕ್ಷಿ ಹಣ್ಣಿನಿಂದ 12 ಲಕ್ಷ ರೂ. ಆದಾಯ ಬರುತ್ತಿದೆ ಎಂದು ವಿವರಿಸಿದ.
ನನ್ನ ಈ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು ನೀವು ನೀಡಿದ ನೀರಿನ ಕೊಡುಗೆಯ ಕೃಪೆ ಎಂದು ಹೇಳುತ್ತಲೇ, ತಾನು ತಂದಿದ್ದ ಹಾಲನ್ನು ಕುಡಿಯಲು ನೀಡಿ ಸಂತೃಪ್ತಿ ವ್ಯಕ್ತಪಡಿಸಿ, ಭಾವುಕನಾದ.
ತಮ್ಮ ರಾಜಕೀಯ ಇಚ್ಚಾಶಕ್ತಿಯ ನೀರಾವರಿ ಸೌಲಭ್ಯದಿಂದ ಜಿಲ್ಲೆಯ ಯುವಕರು ಕೃಷಿಯತ್ತ ಮುಖಮಾಡಿ, ಸ್ವಾವಲಂಬಿ ಜೀವನದ ಜೊತೆಗೆ ಸಮಗ್ರ ಕೃಷಿಯಲ್ಲಿ ಸಾಧನೆ ಮಾಡುತ್ತಿರುವುದು ಸಂತೃಪ್ಪಿ ತಂದಿದೆ ಎಂದರು.
ಸಿದ್ಧಾಪುರದ ಯುವರೈತ ಸಹೋದರರು ಹೈನುಗಾರಿಕೆ ಮೂಲಕ ಸ್ವಯಂ ಉದ್ಯೋಗ ಮಾಡುತ್ತಿರುವುದು ಮಾದರಿ ಎನಿಸಿದೆ. ವಿಜಯಪುರ ಜಿಲ್ಲೆಯಲ್ಲಿ ಜಲಕ್ರಾಂತಿಯಾಗಿದ್ದು, ಭವಿಷ್ಯದಲ್ಲಿ ಕ್ಷೀರಕ್ರಾಂತಿ ಮಾಡುವುದಾಗಿ ಹೇಳಿದರು.
ರೈತರ ಸಹಕಾರದೊಂದಿಗೆ ಸಾಮೂಹಿಕ ಒಡೆತನದಲ್ಲಿ ಡೈರಿ ಆರಂಭಿಸುವ ಯೋಜನೆ ರೂಪಿಸುತ್ತಿದ್ದೇನೆ. ಅಲ್ಲದೇ ಅರ್ಥಿಕ ದುರ್ಬಲ ರೈತರಿಗೆ ಸಾಲ ಸೌಲಭ್ಯ ಮತ್ತು ಸಬ್ಸಿಡಿ ಯೋಜನೆ ಮೂಲಕ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡಲಾಗುವುದಾಗಿ ಭರವಸೆ ನೀಡಿದರು.
ಯುವಕರು, ಮಹಿಳೆಯರು ಸ್ವಯಂ ಉದ್ಯೋಗ ಕೈಗೊಂಡು ಸ್ಚಾವಲಂಬಿ ಬದುಕಿಗೆ ಅಗತ್ಯ ಕಾರ್ಯಕ್ರಮಗಳ ಜೊತೆಗೆ, ರೈತರ ಉತ್ಪನ್ನಗಳಿಗೆ ಉತ್ತಮ ಆದಾಯ ಒದಗಿಸಲು ಆಹಾರ ಸಂಸ್ಕರಣೆ ಘಟಕ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.