Advertisement

ಎಪ್ಪತ್ತು ವರ್ಷಗಳಿಂದ ಕೃಷಿ ಕಾಯಕವನ್ನೇ ಉಸಿರಾಗಿಸಿದ ರೈತ

09:46 AM Dec 24, 2019 | mahesh |

ಹೆಸರು: ಯು. ಸದಾಶಿವ ಶೆಟ್ಟಿ
ಏನು ಕೃಷಿ: ಮಿಶ್ರಬೆಳೆ, ಹೈನುಗಾರಿಕೆ
ವಯಸ್ಸು: 80
ಕೃಷಿ ಪ್ರದೇಶ: 15 ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬೆಳ್ತಂಗಡಿ: ತಂದೆಯ ಕಾಲದಿಂದ, ಅಂದರೆ ಸರಿಸುಮಾರು 70 ವರ್ಷಗಳಿಂದ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡವರು ಉಜಿರೆಯ 80ರ ಹರೆಯದ ಯು. ಸದಾಶಿವ ಶೆಟ್ಟಿ. 1980ರ ಅವಧಿಯಲ್ಲಿ 7 ಎಕ್ರೆ ಗದ್ದೆಯಲ್ಲಿ ಬೇಸಾಯ ನಡೆಸುತ್ತಿದ್ದು, ಪ್ರಸಕ್ತ ಉಜಿರೆ-ಚಾರ್ಮಾಡಿ ರಸ್ತೆಯಾಗಿ ಸಾಗಿದರೆ ಉಜಿರೆಯಲ್ಲಿರುವ 5 ಎಕ್ರೆ ಸಹಿತ ಮುಂಡಾಜೆ, ಕಡಿರುದ್ಯಾವರದ ಒಟ್ಟು 15 ಎಕ್ರೆಯಲ್ಲಿ ಭತ್ತ ಬೆಳೆ, ಬಾಳೆ, ತರಕಾರಿ ತೋಟ, ಹೈನುಗಾರಿಕೆಯೊಂದಿಗೆ ಪಾರಂಪರಿಕ ಸಮಗ್ರ ಕೃಷಿ ಪದ್ಧತಿಯ ಸೊಗಡನ್ನು ಪಟ್ಟಣದಲ್ಲೂ ಕಾಣಸಿಗು ವಂತೆ ಮಾಡಿದ್ದಾರೆ. ಹಟ್ಟಿಗೊಬ್ಬರ ಮೂಲಕವೇ ಉತ್ತಮ ಇಳುವರಿ ಕಂಡು ಕೊಳ್ಳುವ ಜತೆಗೆ ಭೂಮಿ ಫಲವತ್ತತೆ ಕಾಯ್ದುಕೊಂಡಿದ್ದಾರೆ. ಇದಕ್ಕಾಗಿ 10ದನ ಗಳನ್ನು ಸಾಕಿಕೊಂಡು ಬಯೋ ಡೈಜೆಸ್ಟರ್‌ ಪದ್ಧತಿ ಅಳವಡಿಸಿದ್ದಾರೆ. ಪ್ರತಿನಿತ್ಯ ಡೇರಿಗೆ 20 ಲೀ. ಹಾಲು ಒದಗಿಸುವ ಮೂಲಕ ಹೈನುಗಾರಿಕೆಯಲ್ಲೂ ಛಾಪು ಮೂಡಿಸಿದ್ದಾರೆ. 3.30 ಎಕ್ರೆ ಗದ್ದೆಯಲ್ಲಿ ಎಂಎಂ4 ತಳಿ ಬಿತ್ತಿ 100 ಮುಡಿ ಅಕ್ಕಿ ಪಡೆಯುವ ಮೂಲಕ ಸದಾಶಿವ ಶೆಟ್ಟಿ ಅವರು 2014-15ರ ತಾ| ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೂ ಭಾಜನರಾಗಿದ್ದರು. ಪ್ರಸಕ್ತ ಏಣೆಲು-(ಮುಂಗಾರು), ಸುಗ್ಗಿ (ಹಿಂಗಾರು)ಯಲ್ಲಿ ಸರಾಸರಿ 80 ಮುಡಿ ಅಕ್ಕಿಯನ್ನು ಪ್ರತಿವರ್ಷ ಬೆಳೆಯುತ್ತಿದ್ದಾರೆ. ಎಚ್‌4, ಜಯ, ಕಜೆ-ಜಯ, ಬಿಳಿ ಜಯ ತಳಿ ಬಿತ್ತನೆ ಪ್ರಯೋಗ ಮಾಡಿರುವುದು ಇವರ ಕೃಷಿ ಪ್ರಯೋಗಕ್ಕೆ ಸಾಕ್ಷಿ.

ಯುವಜನತೆಗೆ ಮಾದರಿ
ಇವರ ಮಗ ಯು. ರಮೇಶ್‌ ಶೆಟ್ಟಿ ಎಳವೆ ಯಿಂದಲೇ ತಂದೆಯೊಂದಿಗೆ ಕೃಷಿ ಚಟುವಟಿಕೆ ಯಲ್ಲಿ ತೊಡಗಿದ್ದು, ಉದ್ಯಮಿಯಾಗಿದ್ದು ಕೊಂಡೂ ಪಾರಂಪರಿಕ ಕೃಷಿ ಉಳಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಕೋ. ರೂ. ಬೆಲೆ ಬಾಳುವ ಭೂಮಿಯಲ್ಲಿ ಕೃಷಿಯೇ ನಮ್ಮ ಉಸಿರು ಎಂಬ ದೃಷ್ಟಿಯಿಂದ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿ ರುವುದು ಯುವಜನತೆಗೊಂದು ಮಾದರಿ.

15 ಎಕ್ರೆಯಲ್ಲಿ ಸಮಗ್ರ ಕೃಷಿ
ತಂದೆಯೊಂದಿಗೆ ಮಗ ಮುಂಡಾಜೆ ಸಹಿತ ಕಡಿರುದ್ಯಾವರ ಹಾಗೂ ಉಜಿರೆಯ ಒಟ್ಟು 15 ಎಕ್ರೆಯಲ್ಲಿ 7,500 ಸೈಗನ್‌ ಅಡಿಕೆ, 1,500 ತೆಂಗು, 100 ರಬ್ಬರ್‌, 500 ಬುಡ ಕರಿಮೆಣಸು, 1,000 ನೇಂದ್ರ, ಕದಳಿ, ಮೈಸೂರು ಸಹಿತ ವಿವಿಧ ಜಾತಿಯ ಬಾಳೆ ಗಿಡ, ಬಸಳೆ, ಕೇನೆ, ಅಲಸಂಡೆ, ಮುಳ್ಳು ಸೌತೆ, ಹೀರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಕಂಚಲ, ಮರಗೆಣಸು ತರಕಾರಿ ಬೆಳೆಯುತ್ತಿದ್ದಾರೆ.
ಕೆಲಸದವರಿಗೆ ಹಾಗೂ ಪೂಜಾ ಕಾರ್ಯಕ್ರಮದ ದೃಷ್ಟಿಯಿಂದ ವೀಳ್ಯದೆಲೆಯನ್ನು ಸಾಂಪ್ರದಾಯಿಕವಾಗಿ ಬೆಳೆಯುತ್ತ ಬಂದಿದ್ದಾರೆ. ಇವೆಲ್ಲದಕ್ಕೂ ಹಟ್ಟಿಗೊಬ್ಬರ ಹಾಗೂ ಕುರಿ ಗೊಬ್ಬರವಷ್ಟೇ ಬಳಕೆ ಎಂಬುದು ವಿಶೇಷ. ಶ್ರೀಕ್ಷೇತ್ರ ಧ.ಗ್ರಾ.ಯೋ.ಯ ಗದ್ದೆ ನಾಟಿ ಹಾಗೂ ಕಟಾವು ಯಂತ್ರೋಪಕರಣ ಪ್ರಾತ್ಯಕ್ಷಿಕೆ ತಾ|ನಲ್ಲಿ ಮೊದಲ ಬಾರಿಗೆ ಸದಾಶಿವ ಶೆಟ್ಟರ ಗದ್ದೆಯಲ್ಲಿ ನಡೆಸಿತ್ತು. ಕೃಷಿಗೇಂದೇ ಈಗಲೂ 30 ಅಡಿಗಳಷ್ಟು ಆಳದ 2 ಕೆರೆಗಳಲ್ಲಿ ನೀರು ಸಂರಕ್ಷಿಸಿ ಬಳಸಲಾಗುತ್ತಿದೆ.

Advertisement

ಪ್ರಶಸ್ತಿ
2014-15ರ ತಾ| ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಭಾಜನ
 7,500 ಅಡಿಕೆ ಮರಗಳು
 500 ಬುಡ ಕರಿಮೆಣಸು
 10 ಹಸು- 20 ಲೀ. ಹಾಲು
 ಸಾವಯವ, ಹಟ್ಟಿ-ಕುರಿ ಗೊಬ್ಬರ ಬಳಕೆ
 3.30 ಎಕ್ರೆ ಗದ್ದೆಯಲ್ಲಿ ಎಂಎಂ4 ತಳಿ ಬಿತ್ತನೆ
 ಕೃಷಿಗಾಗಿ 2 ಕೆರೆಗಳಲ್ಲಿ ನೀರು ಸಂರಕ್ಷಣೆ
 ಮೊಬೈಲ್‌ ಸಂಖ್ಯೆ- 9448823997

ಸಾವಯವ ಕೃಷಿಗೆ ಒತ್ತು
ಆಸಕ್ತಿ ಹಾಗೂ ಶ್ರದ್ಧೆಯಿಂದ ಕೃಷಿಯಲ್ಲಿ ತೊಡಗಿಸಿದಲ್ಲಿ ಕೃಷಿ ಕಾಯಕಕ್ಕೆ ಅಳಿವಿಲ್ಲ. ಆದಾಯ ಹೆಚ್ಚಿಸಿಬೇಕೆಂಬ ಒಂದೇ ದೃಷ್ಟಿಯಿಂದ ಬೇಸಾಯದ ಅನುಕರಣೆ ಮಾಡಬಾರದು. ನಮ್ಮ ದುಡಿಮೆಯ ಭಾಗವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಭೂಮಿ ಫಲವತ್ತತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಸಾವಯವ ಕೃಷಿಗೆ ಒತ್ತು ನೀಡಬೇಕು. ಮತ್ತೂಂದೆಡೆ ಕೃಷಿಯಿಂದ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
-ಯು. ಸದಾಶಿವ ಶೆಟ್ಟಿ, ಕೃಷಿಕ

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next