ಚನ್ನರಾಯಪಟ್ಟಣ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಹಾಗೂ ಹೊಸ ವರ್ಷದ ಶುಭಾಶಯಗಳು ಎಂಬ ಸಂದೇಶ ಮೊಬೈಲ್‌ಗೆ ಬಂದಿದ್ದೇ ತಡ ಅನ್ನದಾತರು ಸಂತಸಗೊಂಡಿದ್ದಾರೆ. 2019ರ ಡಿಸೆಂಬರ್‌ನಿಂದ 2020ರ ಮಾರ್ಚ್ ಅವಧಿಗೆ ಎರಡು ಸಾವಿರ ರೂ. ಜಮಾ ಮಾಡಲಾಗಿದೆ.
ನಾಲ್ಕು ತಿಂಗಳಿಗೊಮ್ಮೆ ಸಿಗುವ ಈ ಮೊತ್ತ ನಿಮ್ಮ ಕೃಷಿ ಖರ್ಚು ವೆಚ್ಚಕ್ಕೆ ಸಹಾಯ ಮಾಡುತ್ತದೆ ಎಂದ ಭಾವಿಸುತ್ತೇನೆ. ಹೊಸ ವರ್ಷದ ಶುಭಾಶಯಗಳು ನರೇಂದ್ರ ಮೋದಿ ಎಂಬ ಸಂದೇಶ ತಾಲೂಕಿನ ಸಾವಿರಾರು ರೈತರ ಮೊಬೈಲ್‌ಗೆ ಬಂದಿದೆ. ಕೂಡಲೇ ಹಲವು ಮಂದಿ ಬ್ಯಾಂಕ್‌ಗೆ ತೆರಳಿ ತಮ್ಮ ಖಾತೆಯನ್ನು ಪರಿಶೀಲಿಸಿದಾಗ ಎರಡು ಸಾವಿರ ಹಣ ಬಂದಿದೆ ಇದರಿಂದ ಅನ್ನದಾತರಲ್ಲಿ ಖುಷಿ ಮೂಡಿದೆ.
ರೈತರ ಗಮನ ಸೆಳೆದ ಸಂದೇಶ: ಈ ರೀತಿ ಸಂದೇಶ ಬಂದಿರುವುದು ಬೇರೆ ದಿನವಲ್ಲ, ಅದು ದೇಶದ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಕಾಲಿಟ್ಟಿರುವ ಸಮದಲ್ಲಿ. ತುಮಕೂರು ಜಿಲ್ಲೆಯಲ್ಲಿ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳೊಂದಿಗೆ ಸಂವಾದ ಮುಗಿಸಿ ಕಿಸಾನ್ ಸಮ್ಮೇಳನದಲ್ಲಿ ಪಾಲ್ಗೊಂಡು ಪ್ರಧಾನಿ ಮಾತು ಪ್ರಾರಂಭ ಮಾಡಿ ಕಿಸಾನ್ ಸಮ್ಮಾನ್ ಯೋಜನೆ ಬಗ್ಗೆ ತಿಳಿಸುವ ಸಮಯ ಜ.2ರ ಮಧ್ಯಾಹ್ನ ತಾಲೂಕಿನ ಸಾವಿರಾರು ಮಂದಿ ರೈತರ ಖಾತೆಗೆ ಸಮ್ಮಾನ್ ನಿಧಿ ಹಣ ಸಂದಾಯವಾಗಿದೆ ಇದರಿಂದ ಈ ಸಂದೇಶ ರೈತರ ಗಮನ ಸೇಳೆದಿದೆ.
ಮೋಡಿ ಮಾಡಿದ ಮೋದಿ ಎಸ್‌ಎಂಎಸ್: ವಾಟ್ಸಾಪ್ ಸಂದೇಶದ ಯುಗದಲ್ಲಿ ಎಸ್‌ಎಂಎಸ್ ಮಾಡುವುದನ್ನು ಮರೆತಿದ್ದವರಿಗೆ ಖುದ್ದು ಮೋದಿ ಅವರೇ ಎಸ್‌ಎಂಎಸ್ ಮೂಲಕ ಹೊಸ ವರ್ಷಕ್ಕೆ ಶುಭ ಕೋರಿದ್ದಾರೆ. ಮೊಬೈಲ್‌ಗೆ ಎಸ್‌ಎಂಎಸ್ ಬಂದಾಗ ಟೆಲಿಕಾಂ ಸಂಸ್ಥೆಯವರು ರೀಚಾರ್ಜ್ ಮಾಡಿಸುವಂತೆ ಸಂದೇಶ ಕಳುಹಿಸಿದ್ದಾರೆ. ಕೆಲಸ ಲೇವಾದೇವಿ ವ್ಯವಹಾರ ಸಂಸ್ಥೆಯವರು ಸಾಲ ನೀಡುತ್ತೇವೆ ಎಂಬ ಸಂದೇಶ ಕಳುಹಿಸಿದ್ದಾರೆ ಎಂಬ ಭಾವನೆಯಿಂದ ನೂರಾರು ರೈತರು ಸಂದೇಶ ಓದುವ ಗೋಜಿಗೆ ಹೋಗಿಲ್ಲ. ಮೋದಿ ನನಗೆ ಸಂದೇಶ ಕಳುಹಿಸಿದ್ದಾರೆ ಎಂಬ ಸುದ್ದಿ ಗ್ರಾಮದಲ್ಲಿ ಹರಡಿದ್ದೇ ತಡ ಎಲ್ಲರೂ ತಮ್ಮ ತಮ್ಮ ಮೊಬೈಲ್ ತೆಗೆದು ನೋಡಲು ಪ್ರಾರಂಭಿಸಿದ್ದಾರೆ ಒಂದು ಸಂದೇಶದಿಂದ ರೈತರನ್ನು ಮೋಡಿ ಮಾಡಿದ್ದಾರೆ ಮೋದಿ.
ಕನ್ನಡದಲ್ಲಿ ಬಂದ ಸಂದೇಶ: ಮೋಬೈಲ್‌ಗೆ ಆಂಗ್ಲ ಭಾಷೆಯಲ್ಲಿ ಈ ರೀತಿ ಸಂದೇಶ ಬಂದಿದ್ದರೆ ರೈತರು ಖುಷಿ ಪಡಲಾಗುತ್ತಿರಲಿಲ್ಲ. ಆದರೆ ಕಿಸಾನ್ ಎಂಬ ಹೆಸರಿನಲ್ಲಿ ಅದು ಸಂಪೂರ್ಣ ಕನ್ನಡದಲ್ಲಿ ಸಂದೇಶ ಬಂದಿದ್ದು ರೈತರಿಗೆ ಮತಷ್ಟು ಖುಷಿ ತಂದಿದೆ. ಹಿಂದಿ ಭಾಷೆ ಹೇರಿಕೆ ಎಂದು ಕನ್ನಡಪರ ಹೋರಾಟಗಾರರಿಂದ ಅಪಾದನೆಗೆ ಒಳಗಾಗುವ ನಮೋ ಸರ್ಕಾರ ರೈತರಿಗೆ ರವಾನೆ ಮಾಡಿರುವ ಸಂದೇಶ ಸಂಪೂರ್ಣ ಕನ್ನಡದಲ್ಲಿ ಇರುವುದರಿಂದ ಪ್ರಾದೇಶಕತೆಗೆ ಒತ್ತು ನೀಡುವ ಸರ್ಕಾರ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನೆ ಮಾಡಿದ್ದಾರೆ.
ಮೋದಿ ಸಂದೇಶ ವೈರಲ್: ರೈತರ ಮೊಬೈಲ್‌ಗೆ ಬಂದ ಪ್ರಧಾನಿಗಳ ಹೊಸ ವರ್ಷ ಶುಭಾಶಯ ಸಂದೇಶವನ್ನು ರೈತರ ಮಕ್ಕಳು ತಮ್ಮ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಮಾಡಿದ್ದಾರೆ. ತುಮಕೂರಿನಲ್ಲಿ ರೈತ ಸಮಾವೇಶ ಉದ್ಘಾಟಿಸಿ ಮೋದಿ ಭಾಷಣ ಮುಗಿಯುವುದರೊಳಗೆ ನಮ್ಮ ತಂದೆ ಖಾತೆಗೆ ಎರಡು ಸಾವಿರ ಹಣ ಬಂದಿದೆ ಎಂದು ಬರೆದುಕೊಂಡಿರುವುದಲ್ಲದೇ ದೇಶದ ಪ್ರಧಾನಿ ಅವರೇ ನಮಗೆ ಶುಭಾಶಯ ಕೋರಿದ್ದಾರೆ ಎಂದು ತಮ್ಮ ಫೇಸ್‌ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುವ ಮೂಲಕ ಹಲವು ಮಂದಿ ಪುಳಕಗೊಂಡಿದ್ದಂತೂ ಸತ್ಯ.
ಗುರುವಾರ ಸಂಜೆ 5.30ರಲ್ಲಿ ಟೀವಿ ನೋಡುತ್ತಿದ್ದೆ. ಈ ವೇಳೆ ಪ್ರಧಾನಿ ಭಾಷಣ ಮಾಡುತ್ತಿದ್ದರು. ಇದೇ ಸಮಯದಲ್ಲಿ ನನ್ನ ಮೊಬೈಲ್‌ಗೆ ಒಂದು ಎಸ್‌ಎಂಎಸ್ ಬಂತು ಅದನ್ನು ನೋಡಿದರೆ ಪ್ರಧಾನಿ ನಮೋ ಹೊಸ ವರ್ಷಕ್ಕೆ ಶುಭಾಶಯ ಕೋರಿರುವುದಲ್ಲದೇ ನನ್ನ ಖಾತೆಗೆ 2 ಸಾವಿರ ಹಣ ಹಾಕಿರುವುದಾಗಿ ತಿಳಿಸಿದ್ದರು. ಇದರಿಂದ ನನಗೆ ಬಹಳ ಸಂತೋಷ ತಂದಿದೆ.
-ಲೋಕಮಾತೆ, ರೈತ ಮಹಿಳೆ ಅಣ್ಣೇನಹಳ್ಳಿ ಗ್ರಾಮ
ಜ.2 ರಂದು ನನ್ನ ತಂದೆ ನಾಗರಾಜು ಅವರ ಎಸ್‌ಬಿಐ ಖಾತೆಗೆ ಎರಡು ಸಾವಿರ ಹಣ ಜಮಾ ಆಗಿರುವ ಸಂದೇಶ ಬಂದಿದ್ದು ಸಂದೇಶದಲ್ಲಿ ಕಿಸಾನ್ ಸಮ್ಮಾನ್ ನಿಧಿ ಎಂದು ತಿಳಿಸಲಾಗಿದೆ. ರೈತರಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿರುವುದರಿಂದ ಸಂತಸವಾಗಿದೆ.
-ಶರತ್‌ಕುಮಾರ್, ಚನ್ನರಾಯಪಟ್ಟಣ
* ಶಾಮಸುಂದರ್ ಕೆ. ಅಣ್ಣೇನಹಳ್ಳಿ