Advertisement

ಹಳ್ಳಿ ಮಕ್ಕಳಿಗೆ ದೂರವಾದ ದೂರದರ್ಶನ ಪಾಠ

12:27 PM Jul 29, 2020 | mahesh |

ಕಾರ್ಕಳ: ಕೋವಿಡ್‌-19 ಶಿಕ್ಷಣದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದ್ದು , ಮಕ್ಕಳಿಗೆ ವಿದ್ಯೆ ಕಲಿಸುವುದು ಹೆತ್ತವರಿಗೆ, ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಖಾಸಗಿ ಶಾಲೆಗಳಲ್ಲಿ ಆನ್‌ಲೈನ್‌ ಶಿಕ್ಷಣ ಆರಂಭವಾಗಿದೆ. ಗ್ರಾಮಾಂತರದ ಬಡ ಮಕ್ಕಳು ಆನ್‌ಲೈನ್‌ ಕ್ಲಾಸ್‌ನಿಂದ ವಂಚಿತರಾಗಿದ್ದಾರೆ. 8, 9, 10 ನೇ ತರಗತಿ ಮಕ್ಕಳಿಗೆ ದೂರದರ್ಶನ ಡಿಡಿ ಚಂದನದಲ್ಲಿ ಸೇತುಬಂಧ ಮೂಲಕ ಪಾಠ ಹೇಳಿ ಕೊಡಲಾಗುತ್ತಿದೆ. ಮುಂದೆ ಇದನ್ನು ಇತರ ತರಗತಿಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ.

Advertisement

ಟಿವಿ ಇದ್ದರೂ ಕರೆಂಟಿಲ್ಲ
ಗ್ರಾಮೀಣ ಭಾಗದ ಬಡ ಕುಟುಂಬಗಳ ಎಲ್ಲ ಮನೆಗಳಲ್ಲಿ ಮೊಬೈಲ್‌, ಟಿವಿ ಇರುತ್ತವೆ ಎಂದು ಹೇಳಲಾಗುವುದಿಲ್ಲ. ಟಿವಿ ಇಲ್ಲದ ಮನೆಗಳೂ ಇವೆ. ಸಿಡಿಲಿಗೆ ಕೆಲವರ ಟಿವಿ ಕೆಟ್ಟಿರುತ್ತದೆ. ಕೆಲವರು ನಿಗದಿತವಾಗಿ ರೀಜಾರ್ಜ್‌ ಮಾಡಿಸುವುದೂ ಕಡಿಮೆ. ಇಷ್ಟಿದ್ದರೂ ಕೆಲವು ಸಂದರ್ಭ ಕಾಡಿನ ಮಾರ್ಗದಲ್ಲಿ ವಿದ್ಯುತ್‌ ತಂತಿಗಳ ದೋಷದಿಂದ ಆಗಾಗ್ಗೆ ವಿದ್ಯುತ್‌ ವ್ಯತ್ಯಯಗಳಾಗುತ್ತಿರುತ್ತವೆ. ಕಬ್ಬಿನಾಲೆ, ಕೆರ್ವಾಶೆ, ಬೋಳ, ಸಚ್ಚೇರಿಪೇಟೆ, ಮುನಿಯಾಲು, ಮುಂಡ್ಕೂರು ಸಹಿತ ಕೆಲವು ಹಳ್ಳಿಗಳಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಕಲಿಕೆಗೆ ಅಡ್ಡಿಯಾಗಿದೆ.

ಇಲಾಖೆ ಪ್ರಯತ್ನ
ಸೇತುಬಂಧ ಕಾರ್ಯಕ್ರಮವು ಇಲಾಖೆಯ ವೆಬ್‌ಸೈಟ್‌, ಯೂಟ್ಯೂಬ್‌ಗಳಲ್ಲಿಯೂ ದೊರಕುತ್ತದೆ. ಟಿವಿ ಇಲ್ಲದ ಮನೆಗಳಲ್ಲಿ ಆ್ಯಂಡ್ರಾಯಿಡ್‌ ಇಲ್ಲದಿದ್ದರೂ ಕನಿಷ್ಠ ಕುಟುಂಬದ ಒಬ್ಬ ಸದಸ್ಯನಲ್ಲಿ ಕೀ ಬಟನ್‌ ಮೊಬೈಲ್‌ ಆದರೂ ಇರುತ್ತದೆ. ಮಕ್ಕಳನ್ನು ಶಿಕ್ಷಕರು ತಮ್ಮ ಮೊಬೈಲ್‌ ಮೂಲಕ ಸಂಪರ್ಕಿಸಿ ಅವರನ್ನು ಒಂದು ಕಡೆ ಸೇರಿಸಿ, ಸಾಮಾಜಿಕ ಅಂತರದೊಂದಿಗೆ ಪಾಠ ಮಾಡುವಂತಹ ವ್ಯವಸ್ಥೆಯನ್ನು ಕೂಡ ಶಿಕ್ಷಕರು ಅಗತ್ಯಬಿದ್ದರೆ ಮಾಡುತ್ತಾರೆ ಎಂದು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಕಳ ತಾಲೂಕಿನಲ್ಲಿ 29,435 ಮಕ್ಕಳು
ಕಾರ್ಕಳ ತಾ|ನಲ್ಲಿ 166 ಸರಕಾರಿ ಶಾಲಾ-ಕಾಲೇಜು, 42 ಅನುದಾನಿತ, 37 ಖಾಸಗಿ ಶಾಲೆಗಳಿವೆ. ನವೋದಯ ಸಹಿತ ಇತರ 2 ಶಾಲೆ, ಒಟ್ಟು 247 ಶಾಲಾ-ಕಾಲೇಜು, 29,435 ಮಂದಿ ಮಕ್ಕಳಿದ್ದಾರೆ. ಬಹುತೇಕ ಸರಕಾರಿ ಶಾಲೆಗಳಿರುವುದು ಹಳ್ಳಿಯಲ್ಲಿ. ಆನ್‌ಲೈನ್‌, ದೂರದರ್ಶನ ಶಿಕ್ಷಣ ಈ ಮಕ್ಕಳಿಗೆ ಸರಿಯಾಗಿ ಈಗ ಕೈಗೆಟಕುತ್ತಿಲ್ಲ.

ಈ ವ್ಯವಸ್ಥೆ ಅನಿವಾರ್ಯ
ಕಲಿಕೆಯಲ್ಲಿ ನೇರ ತರಗತಿ ಸಂವಹನಕ್ಕೂ ಆನ್‌ಲೈನ್‌ ತರಗತಿಗೂ ಸರಿಸಾಟಿಯಿಲ್ಲ ಎನ್ನುವುದು ನಿಜ. ಎದುರು ಬದುರಿನ ಪಾಠದ ಸಂವಹನ ಶಕ್ತಿಯುತವಾಗಿರುತ್ತದೆ. ಕೊರೊನಾದಂತಹ ಸಂದಿಗ್ಧ ಸ್ಥಿತಿಯಲ್ಲಿ ಈ ವ್ಯವಸ್ಥೆ ಅನಿವಾರ್ಯವಾಗಿದೆ.
-ಜಿ.ಎಸ್‌. ಶಶಿಧರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಕಳ

Advertisement
Advertisement

Udayavani is now on Telegram. Click here to join our channel and stay updated with the latest news.

Next