ರಬಕವಿಯ ಈಶ್ವರ ಸಣಕಲ್ ರಸ್ತೆಗೆ ಹೊಂದಿಕೊಂಡಂತೆ ಚವ್ಹಾನ ಎಂಬುವವರ ಕುಟುಂಬ ಇದ್ದು, ಇವರ ಮುಖ್ಯ ಉದ್ಯೋಗ ಗಣೇಶ ವಿಗ್ರಹಗಳನ್ನು ಮಾಡುವುದು. ಒಂದು ಶತಮಾನಗಳಿಗಿಂತಲೂ ಹೆಚ್ಚು ಕಾಲ ಗಣೇಶ ವಿಗ್ರಹಗಳನ್ನು ಮಾಡುತ್ತಾ ಬಂದಿದ್ದಾರೆ.
Advertisement
ರಾಮಾಚಾರಿ ಚವ್ಹಾಣ, ನಂತರ ಇವರ ಮಗ ದಾನೇಶ್ವರ ಚವ್ಹಾಣ ಹಾಗೂ ಹೆಂಡತಿ ಕಮಲವ್ವ, ಇವರ ಮಗ ವಿಠ್ಠಲ ಚವಾಣ ಮೂರ್ತಿಗಳನ್ನು ಮಾಡುತ್ತಿದ್ದರು. ಹಲವು ವರ್ಷಗಳ ಹಿಂದೆ ವಿಠ್ಠಲ ಚವಾಣ ನಿಧನ ಹೊಂದಿದ ನಂತರ ಅವರ ಪತ್ನಿ ವೀಣಾ ಚವಾಣ ತಮ್ಮ ಇಬ್ಬರು ಮಕ್ಕಳಾದ ಅಮರ ಮತ್ತು ರಾಹುಲ ಅವರನ್ನು ಕರೆದುಕೊಂಡು ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡು, ಮಕ್ಕಳ ಜೊತೆಗೂಡಿ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಈ ಕುಟುಂಬದ ಮೂಲ ಕಸುಬು ಮೂರ್ತಿಗಳನ್ನು ಮಾಡುವುದು. ಹೋಳಿ ಹುಣ್ಣಿಮೆಯ ಸಂದರ್ಭದಲ್ಲಿ ಕಾಮಣ್ಣನ ಮೂರ್ತಿಗಳನ್ನು ಮಾರಾಟ ಮಾಡುವುದು ಇವರ ಪ್ರಮುಖ ಉದ್ಯೋಗವಾಗಿದೆ.
Related Articles
Advertisement
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಗಣೇಶ ಮೂರ್ತಿ ತಯಾರಿಸುವುದು ಸುಲಭ. ಆದರೆ ಜೇಡಿಮಣ್ಣಿನಿಂದ ತಯಾರಿಸುವ ಮೂರ್ತಿಗಳು ತೀರಾ ಸೂಕ್ಷ್ಮವಾಗಿರುವ ಜೊತೆಗೆ ಪರಿಸರ ಸ್ನೇಹಿ ಆಗಿವೆ. ಮೂರ್ತಿಗಳಲ್ಲಿ ಕಲಾವಿದನ ನೈಜ ಕಲಾತ್ಮಕತೆ. ಕೌಶಲ್ಯ ಮೂಡುತ್ತದೆ. ಪರಿಸರಕ್ಕೆ ಹಾನಿ ಉಂಟಾಗಬಾರದು ಎಂಬ ಉದ್ದೇಶದಿಂದ ತಾವು ಪ್ರತಿ ವರ್ಷ ಜೇಡಿ ತಾವಲಗೇರಿಯಿಂದ ವಿಶೇಷವಾದ ಜೇಡಿ ಮಣ್ಣನ್ನು ತಂದು ಅದಕ್ಕೆ ಹತ್ತಿಯನ್ನು ಕೂಡಿಸಿ, ಹದ ಮಾಡಿಕೊಂಡು ಮಣ್ಣಿನ ಗಣೇಶನ ಮೂರ್ತಿಗಳನ್ನು ಮಾಡುತ್ತೇವೆ ಎನ್ನುತ್ತಾರೆ ಅಮರ ಚವಾಣ
ಕುಟುಂಬ ನಿರ್ವಹಣೆ ಹೊತ್ತಿರುವ ತಾಯಿ ವೀಣಾ, ಮಕ್ಕಳೊಂದಗೆ ಗಣೇಶನ ವಿಗ್ರಹಗಳನ್ನು ಮಾಡುವಲ್ಲಿ ನೆರವಾಗುತ್ತಿದ್ದಾರೆ. ನಾಲ್ಕು ತಲೆ ಮಾರುಗಳಿಂದ ಗಣೇಶನ ವಿಗ್ರಹ ಜೊತೆ, ಗೌರಿ ಹುಣ್ಣಿಮೆಗೆ ಗೌರಿ ಮೂರ್ತಿ, ಕಾಮಣ್ಣನ, ಕೃಷ್ಣ ಜಯಂತಿಗೆ ಕೃಷ್ಣ ಮೂರ್ತಿಗಳನ್ನು ಮಾಡುತ್ತ ಬಂದಿರುವ ಈ ಕುಟುಂಬ ವರ್ಷ ಪೂರ್ತಿ ಮೂರ್ತಿ ತಯಾರಿಕೆಯಲ್ಲಿ ತಮ್ಮ ಜೀವನ ಕಳೆಯುತ್ತಿರುವುದು ವಿಶೇಷತೆಯಾಗಿದೆ.
– ಕಿರಣ ಶ್ರೀಶೈಲ ಆಳಗಿ