Advertisement

ರಾಜ್ಯದಲ್ಲೂ ಕುಟುಂಬಕ್ಕೊಂದೇ ಟಿಕೆಟ್‌? ಪಂಚರಾಜ್ಯಗಳ ನೀತಿ ರಾಜ್ಯ ಬಿಜೆಪಿಯಲ್ಲೂ ಜಾರಿ?

10:59 AM Mar 14, 2022 | Team Udayavani |

ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶ ರಾಜ್ಯ ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದರೂ, ಬಿಜೆಪಿ ಹೈಕಮಾಂಡ್‌ನ‌ ಒಂದು ಕುಟುಂಬಕ್ಕೆ ಒಬ್ಬರಿಗೆ ಟಿಕೆಟ್‌, ಹಾಗೂ ಶೇ. 30ರಷ್ಟು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿ ಹೊಸಬರಿಗೆ ಮಣೆ ಹಾಕಿರುವುದು ರಾಜ್ಯ ಬಿಜೆಪಿ ನಾಯಕರಲ್ಲಿ ನಡುಕ ಹುಟ್ಟುವಂತೆ ಮಾಡಿದೆ.

Advertisement

ಇತ್ತೀಚೆಗೆ ಮುಕ್ತಾಯಗೊಂಡಿರುವ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡು ಯಶಸ್ವಿ ಗಳಿಸಿದೆ. ಅದರಲ್ಲಿ ಪ್ರಮುಖವಾಗಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎಂಬ ನಿಯಮವನ್ನು ಪಾಲಿಸಿ, ಯಶಸ್ವಿಯಾಗಿದೆ. ಅದು ದೇಶಾದ್ಯಂತ ವಿಸ್ತರಣೆಯಾಗಲಿದೆ ಎನ್ನಲಾಗುತ್ತಿದೆ.

ಖಡಕ್‌ ನಿರ್ಧಾರ
ಕುಟುಂಬ ರಾಜಕಾರಣವನ್ನು ಬಹಿರಂಗವಾಗಿಯೇ ವಿರೊಧಿಸುವ ಪ್ರಧಾನಿ ನರೇಂದ್ರ ಮೋದಿ ಅದನ್ನು ಪಕ್ಷದಲ್ಲಿ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಪಂಚರಾಜ್ಯಗಳಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಂಡಿದ್ದಾರೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎಂಬ ನಿಯಮದ ಕಾರಣ ಹಾಲಿ ಸಚಿವರು, ಸಂಸದರು, ಶಾಸಕರ ಹೆಂಡತಿ, ಮಕ್ಕಳಿಗೆ ಟಿಕೆಟ್‌ ಬೇಡಿಕೆ ಇಟ್ಟಿದ್ದರು. ಅದನ್ನು ಬಿಜೆಪಿ ವರಿಷ್ಠರು ಖಡಾಖಂಡಿತವಾಗಿ ಟಿಕೆಟ್‌ ನಿರಾಕರಿಸಿರುವ ಸಾಕಷ್ಟು ಉದಾಹರಣೆಗಳು ಈ ಬಾರಿ ಕಂಡುಬಂದಿವೆ. ಟಿಕೆಟ್‌ ವಂಚಿತರ ಕುಟುಂಬದವರಿಂದಲಾಗಲಿ ಅಥವಾ ಅವರ ಬೆಂಬಲಿಗರಿಂದಾಗಲೀ ಅಂತಹ ದೊಡ್ಡ ಮಟ್ಟದ ಬಂಡಾಯವೇನು ಎದುರಾಗಿಲ್ಲ. ಕೆಲವರು ಪಕ್ಷ ತೊರೆದು ಬಂಡಾಯವೆದ್ದರೂ, ಅದರಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಯಾವುದೇ ಅಡ್ಡಿಯುಂಟು ಮಾಡಿಲ್ಲ.

ಕುಟುಂಬಸ್ಥರಿಗೆ ಆತಂಕ ?
ರಾಜ್ಯದಲ್ಲಿ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಎಲ್ಲ ಪಕ್ಷಗಳ ನಾಯಕರುಗಳು ಧಾರಳವಾಗಿ ತಮ್ಮ ಕುಟುಂಬಸ್ಥರಿಗೆ ಟಿಕೆಟ್‌ ನೀಡಿ ಗೆಲ್ಲಿಸಿಕೊಂಡು ಬರುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಈ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಅಪ್ಪ-ಮಕ್ಕಳು, ಅಣ್ಣ -ತಮ್ಮ, ಮಾವ-ಅಳಿಯ, ಶಾಸಕರು, ಸಂಸದರಾಗಿರುವ ರಾಜಕಾರಣಿಗಳು ರಾಜ್ಯ ಬಿಜೆಪಿಯಲ್ಲಿಯೂ ಇದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಆ ಕುಟುಂಬಗಳ ಇಬ್ಬರೂ ಮೂವರಿಗೆ ಟಿಕೆಟ್‌ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ನಾಯಕರುಗಳಿಗೆ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಹೊಸ ಮುಖಗಳಿಗೆ ಆದ್ಯತೆ
ಉತ್ತರ ಪ್ರದೇಶ, ಉತ್ತರಾಖಂಡ, ಗೋವಾಗಳಲ್ಲಿ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿ ಹೊಸ ಮುಖಗಳಿಗೆ ಆದ್ಯತೆ ನೀಡಿರುವುದು, ರಾಜ್ಯ ಬಿಜೆಪಿಯ ಹಾಲಿ ಶಾಸಕರಲ್ಲಿ ಆತಂಕ ಉಂಟಾಗುವಂತೆ ಮಾಡಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗುವಂತೆ ಮಾಡಿದೆ. ಉತ್ತರ ಪ್ರದೇಶದಲ್ಲಿ 89 ಅಭ್ಯರ್ಥಿಗಳು, ಉತ್ತರಾಖಂಡದಲ್ಲಿ 55 ಜನ ಹೊಸಬರಿಗೆ ಟಿಕೆಟ್‌ ನೀಡಿ ಗೆಲುವು ಸಾಧಿಸಿದೆ. ಗೋವಾದಲ್ಲಿ ಮಾಜಿ ಸಿಎಂ ಹಾಗೂ ಮಾಜಿ ಸಿಎಂ ಪುತ್ರರಿಗೂ ಟಿಕೆಟ್‌ ನಿರಾಕರಿಸಿ ಪಕ್ಷ ಗೆಲುವು ಸಾಧಿಸಿದ್ದು, ರಾಜ್ಯದ ಬಿಜೆಪಿ ಹಾಲಿ ಶಾಸಕರಲ್ಲಿಯೂ ನಡುಕ ಹುಟ್ಟುವಂತೆ ಮಾಡಿದೆ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ.

Advertisement

ನಮ್ಮ ಪಕ್ಷದ ನಿಲುವು ಬಹಳ ಸ್ಪಷ್ಟವಾಗಿದೆ. ಅದಕ್ಕೆ ಒತ್ತಾಸೆ ಕೊಡುತ್ತೇವೆ. ಕೆಲವು ಪ್ರಕರಣಗಳಲ್ಲಿ ಅನಿವಾರ್ಯತೆ ಉಂಟಾಗುತ್ತದೆ. ನಮ್ಮದು ಕುಟುಂಬ ರಾಜಕಾರಣಕ್ಕೆ ಒತ್ತು ಕೊಡುವುದಿಲ್ಲ. ನಮ್ಮ ಪಕ್ಷ ಈ ನಿಯಮ ಎಲ್ಲೆಡೆ ಅಳವಡಿಸಿಕೊಂಡು ಹೋಗುತ್ತದೆ.
– ಮಹೇಶ್‌, ಬಿಜೆಪಿ ಮುಖ್ಯ ವಕ್ತಾರ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next