Advertisement

ಒಬ್ಬ ನಕಲಿ ಶ್ಯಾಮ ಮಂತ್ರಿ; ಇನ್ನೊಬ್ಬ ಕಲ್ಲು ತೂರುವವರ ವಕ್ತಾರ

10:31 AM Apr 12, 2017 | Harsha Rao |

ಪಂಜಾಬ್‌ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಸಿಧು ಕಪಿಲ್‌ ಶರ್ಮಾ ಶೋದಲ್ಲಿ ಇನ್ನೂ ಕಾಣಿಸಿಕೊಳ್ಳುತ್ತಿರುವ ಔಚಿತ್ಯದ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ನಡುವೆ ಅವರ ಮೇಲಿನ ಹಳೆಯ ಕೊಲೆ ಆರೋಪವೊಂದು ಉನ್ನತ ನ್ಯಾಯಾಲಯದಲ್ಲಿ ಇನ್ನೂ ಬಗೆಹರಿದಿಲ್ಲ. ಇದೇ ವೇಳೆ ಭಾರತೀಯ ಗಣರಾಜ್ಯದಿಂದ ಪಡೆಯುವಷ್ಟನ್ನೆಲ್ಲ ಪಡೆದ ಜಮ್ಮುಕಾಶ್ಮೀರದ ಫಾರೂಕ್‌ ಅಬ್ದುಲ್ಲಾ ಈಗ ಅಲ್ಲಿನ ಕಲ್ಲು ತೂರಾಟ ಪರಿಣತರನ್ನು ರಾಷ್ಟ್ರೀಯವಾದಿಗಳು ಎಂದು ಕೊಂಡಾಡಿದ್ದಾರೆ!

Advertisement

ಪಂಜಾಬ್‌ ಮಂತ್ರಿ ನವಜೋತ್‌ ಸಿಂಗ್‌ ಸಿಧು ಅವರ ಬಗ್ಗೆ ಎದ್ದಿರುವ ವಿವಾದಗಳನ್ನು ಗಮನಿಸಿದವರಿಗೆ, ಭಾರತದಲ್ಲಿ 
ಸಿನಿಮಾ ತಾರೆಯರಿಗೆ ಹಾಗೂ ಕ್ರಿಕೆಟಿಗರಿಗೆ ದೊರೆಯುತ್ತಿರುವ ಪ್ರಾಮುಖ್ಯ ತೀರಾ ಅತಿಯಾಗಲಿಲ್ಲವೆ ಎಂದು ಅಚ್ಚರಿಯುಂಟಾಗುವುದು ಸುಳ್ಳಲ್ಲ.

ಪಂಜಾಬಿನ ಸ್ಥಳೀಯಾಡಳಿತ ಸಂಸ್ಥೆಗಳ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆಯ ಸಚಿವ ಸಿಧು ಅವರು, “ಕಪಿಲ್‌ ಶರ್ಮಾ ಶೋ’ದಲ್ಲಿ ಇನ್ನೂ ಕಾಣಿಸಿಕೊಳ್ಳುತ್ತಿರುವುದನ್ನು ಪ್ರಶ್ನಿಸಿ ಅಲ್ಲಿನ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿದೆ. ಹೈಕೋರ್ಟ್‌ ಪೀಠ ಈ ಪಿಐಎಲ್‌ಗೆ ಸಂಬಂಧಿಸಿದಂತೆ ತೀರ್ಪನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಕರ್ತವ್ಯ ನಿರತ ಸಚಿವರೊಬ್ಬರು ಟಿವಿ ಶೋದಲ್ಲಿ ಪಾಲ್ಗೊಳ್ಳುವ ಬಗೆಗಿನ ಔಚಿತ್ಯವೇನೆಂಬ, ಈ ಬಗ್ಗೆ ಸಂಪ್ರದಾಯ ಏನು ಹೇಳುತ್ತದೆಂಬ ಹಾಗೂ ಇದರಲ್ಲಿ ಒಳಗೊಂಡಿರುವ ಆರ್ಥಿಕ ಹಿತಾಸಕ್ತಿ ಯಾವ ತೆರನದೆಂಬ ಬಗ್ಗೆ ನ್ಯಾಯಪೀಠ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ದೇಶದಲ್ಲಿ ನಡೆಯುವ ಪ್ರತಿಯೊಂದು ವಿದ್ಯಮಾನದ ಬಗೆಗೂ ಕ್ರೋಡೀಕೃತ ಕಾಯ್ದೆಯೊಂದನ್ನು ರೂಪಿಸುತ್ತ ಹೋಗುವಂತಿಲ್ಲ ಎಂದು ಬೆಟ್ಟು ಮಾಡಿ ಹೇಳಿರುವ ನ್ಯಾಯಪೀಠ, ಈ ಪ್ರಕರಣವು ನ್ಯಾಯಬದ್ಧತೆ ಹಾಗೂ ನೈತಿಕತೆ- ಈ ಎರಡಕ್ಕೂ ಸಂಬಂಧಿತ ಅಂಶಗಳನ್ನು ಒಳಗೊಂಡಿರುವುದಾಗಿ ಹೇಳಿದೆ.

ಕೊಲೆ ಪ್ರಕರಣ ಎದುರಿಸುತ್ತಿರುವ ಸಿಧು: ಆದರೆ ಇಲ್ಲಿ ಅತ್ಯಂತ ಗಂಭೀರ ಪ್ರಶ್ನೆಯೊಂದಿದೆ. ಬಾಯಿಬಡುಕತನಕ್ಕೆ ಹೆಸರಾಗಿರುವ ಈ ಮಾಜಿ ಟೆಸ್ಟ್‌ ಕ್ರಿಕೆಟರ್‌ 1988ರಿಂದಲೂ ಕೊಲೆ ಪ್ರಕರಣವೊಂದನ್ನು ಎದುರಿಸುತ್ತಿದ್ದಾರೆ. ಇದೇ ಪಂಜಾಬ್‌ – ಹರ್ಯಾಣ ಹೈಕೋರ್ಟ್‌ 2006ರಲ್ಲಿ ಇದೇ ಸಿಧು ಅವರನ್ನು ಶಿಕ್ಷಾರ್ಹ ಅಪರಾಧಿಯೆಂದು ಘೋಷಿಸಿ, ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ಅವರದು “ದೋಷಾಸ್ಪದ/ ನಿಂದನೀಯ ಹತ್ಯೆ’ಯ ಅಪರಾಧವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಆದರೆ ಸರ್ವೋಚ್ಚ ನ್ಯಾಯಾಲಯ 2007ರಲ್ಲಿ ಹೈಕೋರ್ಟಿನ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು. 

ಸಿಧು ಅವರ ಜೈಲು ಶಿಕ್ಷೆಯನ್ನು ಕೇವಲ ತಡೆಹಿಡಿಯಲಾಗಿದೆಯಷ್ಟೆ; ಅವರನ್ನಿನ್ನೂ ದೋಷಮುಕ್ತಿಗೊಳಿಸಲಾಗಿಲ್ಲ.
1988ರಲ್ಲಿ ಪಟಿಯಾಲಾದ ರಸ್ತೆಯೊಂದರಲ್ಲಿ ಸಿಧು ತಮ್ಮ ಮಿತ್ರನ ಜತೆಯಲ್ಲಿ ವಾಹನದಲ್ಲಿ ಸಾಗುತ್ತಿದ್ದಾಗ 65ರ ಹಿರಿಯರೊಬ್ಬರ ಜತೆಗೆ ಮಾತಿನ ಚಕಮಕಿ ನಡೆದಿತ್ತು. ಆಗ ಇನ್ನೂ 25ರ ಹರೆಯದಲ್ಲಿದ್ದ ಸಿಧು ಹಾಗೂ ಅವರ ಮಿತ್ರ ಈ ಹಿರಿಯರ ಮೇಲೆ ಹಲ್ಲೆ ನಡೆಸಿದ್ದರಿಂದ ಆತ ಗಾಯಗೊಂಡು ಅಸುನೀಗಿದ್ದರು. ಪಟಿಯಾಲಾದ ಸೆಶನ್ಸ್‌ ಕೋರ್ಟ್‌ ಈ ಪ್ರಕರಣದಲ್ಲಿ 1991ರಲ್ಲಿ ಸಿಧು ಅವರನ್ನು ದೋಷಮುಕ್ತಗೊಳಿಸಿತ್ತು. ಆದರೆ 2006ರಲ್ಲಿ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟು ಈ ತೀರ್ಪಿನ ವಿರುದ್ಧ ತೀರ್ಪು ನೀಡಿ ಸಿಧು ಅವರಿಗೆ ಮೂರು ವರ್ಷಗಳ ಜೈಲುವಾಸ ವಿಧಿಸಿತ್ತು. 

Advertisement

ಇಂಥ ತೀರ್ಪೊಂದು ಯಾರನ್ನೂ ಅಕ್ಷರಶಃ ವಿಚಲಿತಗೊಳಿಸುವಂಥದ್ದು. ಆದರೆ ಸಿಧು ಈ ಬಗ್ಗೆ ಕಿಂಚಿತ್ತು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಕಳೆದ 29 ವರ್ಷಗಳಿಂದಲೂ ಈ ಪ್ರಕರಣ ವಿಚಾರಣೆ ಪೂರ್ಣಗೊಳ್ಳದೆ ಉಳಿದಿದೆ ಎಂಬ ಸಂಗತಿಯೂ ಅವರನ್ನು ಬಾಧಿಸಿಲ್ಲ. ಬದಲಾಗಿ, ಕ್ರಿಕೆಟ್‌ನಲ್ಲಿ ಅವರು ದೊಡ್ಡ ವ್ಯಕ್ತಿಯಾಗಿ ಹೊಮ್ಮಿದರು. ಕ್ರಿಕೆಟ್‌ ಸಾಧನೆಯನ್ನು ರಾಜಕೀಯ ಪ್ರವೇಶಕ್ಕೆ ಬಳಸಿಕೊಂಡರು. ಬಿಜೆಪಿ ಟಿಕೆಟ್‌ನಲ್ಲಿ ಅಮೃತಸರದಿಂದ ಲೋಕಸಭೆಗೆ ಎರಡು ಬಾರಿ ಆಯ್ಕೆಯಾದರು. ಅತ್ಯಂತ ಅಚ್ಚರಿಯೆಂದರೆ ನರೇಂದ್ರ ಮೋದಿ ಸರಕಾರ, ಸಿಧು ಅವರನ್ನು ರಾಜ್ಯಸಭೆಯ ನಾಮಕರಣ ಸದಸ್ಯನನ್ನಾಗಿಸಿದ್ದು! ಇದು, ಅರ್ಹತೆಯ ಕಾರಣಕ್ಕಿಂತಲೂ ರಾಜಕೀಯ ಕಾರಣಕ್ಕಾಗಿ ಸಂಭವಿಸಿದ ವಿದ್ಯಮಾನ. ಅಮೃತಸರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅರುಣ್‌ ಜೇತ್ಲಿಯವರಿಗೆ ಅವಕಾಶ ಮಾಡಿಕೊಟ್ಟರೆಂದೇ ಸಿಧು ಅವರಿಗೆ ಈ ಕೊಡುಗೆ ಸಂದಿದೆ. 

ರಾಜಕೀಯ ಮಹತ್ತಾಕಾಂಕ್ಷೆಯ ಪಟುವಾದ ಸಿಧು ತನಗೆ ನೀಡಲಾದ ಸದಸ್ಯತ್ವವನ್ನು ಸೂಕ್ತ ಬಹುಮಾನವೆಂದು ಪರಿಗಣಿಸಲೇ ಇಲ್ಲ. ಅವರು ಈ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರಬಿದ್ದರು. ಪಂಜಾಬಿನ ಮುಖ್ಯಮಂತ್ರಿಯಾಗ ಬೇಕೆಂಬುದು ಅವರ ಆಕಾಂಕ್ಷೆಯಾಗಿತ್ತು. ಹಾಗೆಂದೇ ಅವರು ಆಪ್‌ ಕಡೆ ಕತ್ತು ಹೊರಳಿಸಿದರು. ಆದರೆ ಆ ಪಕ್ಷ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಿಲ್ಲ. ಮುಖ್ಯಮಂತ್ರಿಗಿರಿಯ ಬಗೆಗಿನ ಪ್ರಬಲ ಬಯಕೆಯಿಂದ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಆದರೆ ಅವರ ದುರದೃಷ್ಟವೆಂಬಂತೆ, ಪಂಜಾಬ್‌ ವಿಧಾನಸಭಾ ಚುನಾವಣೆಯ ಶ್ರೇಯಸ್ಸು ಕ್ಯಾ| ಅಮರೀಂದರ್‌ ಸಿಂಗ್‌ ಅವರ ಪಾಲಾಯಿತು.

ಈ ನಡುವೆ ಪಂಜಾಬಿನ ಈ ಸಂಸ್ಕೃತಿ ಸಚಿವನ ಧಾಷ್ಟéìದ ನಡೆಯ ಬಲಿಪಶುವಾಗಿರುವ ವ್ಯಕ್ತಿಯ ಕುಟುಂಬ ಈ ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಳ್ಳಬೇಕೆಂದು ಕಾದು ಕುಳಿತಿದೆ. ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟಿನ ಮೃದು ತೀರ್ಪು ಈ ಕುಟುಂಬಕ್ಕೆ ಸಂತಸ ತಂದಿಲ್ಲ.

ನವಜೋತ್‌ ಸಿಂಗ್‌ ಅಕ್ಷರಶಃ ಟಿ.ವಿ. ವಾಹಿನಿಗಳ ಜೋಕರ್‌ ಆಗಿದ್ದಾರೆ. ಕ್ರಿಕೆಟ್‌ ಕಾಮೆಂಟರಿಗಳನ್ನು ನಕಲಿಶ್ಯಾಮನ ಪ್ರಹಸನದ ಮಟ್ಟಕ್ಕೆ ಇಳಿಸಿಬಿಟ್ಟಿದ್ದಾರೆ. ಘನತೆ – ಗಾಂಭೀರ್ಯಗಳ ರಾಜಕೀಯ ವಾತಾವರಣವಿದ್ದ ಕಾಲಘಟ್ಟವೆಂದು ಪರಿಗಣಿತವಾಗಿರುವ 1950ರ ದಶಕದಲ್ಲಿ ಕೇಂದ್ರ ವಾರ್ತಾ ಪ್ರಸಾರಮಂತ್ರಿಯಾಗಿದ್ದ; ರೇಡಿಯೋ ದಲ್ಲಿ ಕ್ರಿಕೆಟ್‌ ವೀಕ್ಷಕ ವಿವರಣೆ ಹಾಗೂ ಚಿತ್ರಗೀತೆಗಳಿಗೆ ನಿಷೇಧ ಹೇರಿದ್ದ ಡಾ| ಬಿ.ವಿ. ಕೇಸ್ಕರ್‌ರಂಥವರು ಇಂದು ಸಿಧು ಅವರ ವೀಕ್ಷಕ ವಿವರಣೆಗಳನ್ನು ವೀಕ್ಷಿಸಿದ್ದಿದ್ದರೆ ಏನು ಮಾಡುತ್ತಿದ್ದರೋ!

ಸಿನಿಮಾ ತಾರೆಯರ ಬಗ್ಗೆ ಮೃದು ಧೋರಣೆ: ಇನ್ನು ಸಿನಿಮಾ ತಾರೆಯರ ಬಗ್ಗೆ ಸರಕಾರಗಳ ಮೆದು ಧೋರಣೆಗೆ ಉದಾಹರಣೆ ಬೇಕಿದ್ದರೆ, ಕರ್ನಾಟಕವನ್ನೇ ನೋಡಬಹುದು. ಬೆಂಗಳೂರಿನ ರಾಜಾ ಕಾಲುವೆಯ ಮೇಲೆ ಬಂಗಲೆಯೊಂದನ್ನು ಕಟ್ಟಿಕೊಂಡಿರುವ ಮಧ್ಯಮ ದರ್ಜೆಯ ಚಿತ್ರ ನಟರೊಬ್ಬರು, ಕೇವಲ ತಾನೊಬ್ಬ ಕಲಾವಿದನೆಂಬ ಕಾರಣಕ್ಕಾಗಿಯೇ ತನ್ನ ಬಂಗಲೆ ನೆಲಸಮಗೊಳ್ಳುವ ಅಪಾಯದಿಂದ ಪಾರಾಗಿದ್ದಾರೆ. ಪ್ರಭಾವೀ ಕುಳಗಳೊಂದಿಗಿನ ಸಂಪರ್ಕ ಭಾಗ್ಯವಿಲ್ಲದ ವ್ಯಕ್ತಿಗಳು ಈ ಜಾಗದಲ್ಲಿ ಕಟ್ಟಿಕೊಂಡಿದ್ದ ಹಲವಾರು ಮನೆಗಳನ್ನು ರಾಜಾರೋಷವಾಗಿ ಉರುಳಿಸುವ ಅಧಿಕಾರಿಗಳು, ಈ ನಟನ ಬಂಗಲೆಯ ಗೋಜಿಗೆ ಹೋಗಿಲ್ಲ. ಕಾಂಗ್ರೆಸ್‌ ಶಾಸಕ ಶ್ಯಾಮನೂರು ಶಿವಶಂಕರಪ್ಪ ಅವರು ನಿರ್ಮಿಸಿರುವ ಒಂದು ಆಸ್ಪತ್ರೆ ಕಟ್ಟಡ ಕೂಡ ರಾಜಾ ಕಾಲುವೆಯ ವ್ಯಾಪ್ತಿಯಲ್ಲೇ ಇದೆ ಎಂದು ಈ ಹಿಂದೆ ಹೇಳಲಾಗಿತ್ತಾದರೂ ಅಧಿಕಾರಿಗಳು ಅದನ್ನು ಮುಟ್ಟಲು ಹೋಗಿಲ್ಲ. ಈ ಇಬ್ಬರನ್ನು ರಕ್ಷಿಸುವ ಸಲುವಾಗಿಯೇ ಕಂದಾಯ ಅಧಿಕಾರಿಗಳು ಈ ಎರಡು ಕಟ್ಟಡಗಳ ಮರುಸರ್ವೇಕ್ಷಣಕ್ಕೆ ಆದೇಶ ಹೊರಡಿಸಿದರೆಂಬುದು ಮೇಲ್ನೋಟಕ್ಕೆ ಸ್ಪಷ್ಟ. ಈಚೆಗೆ ಈ ಚಿತ್ರನಟನ ಹುಟ್ಟುಹಬ್ಬವನ್ನು ಆಚರಿಸಿರುವ ಕನ್ನಡ ಟಿ.ವಿ. ಚಾನೆಲ್‌ಗ‌ಳು ಈತನ ವಿರುದ್ಧ ಇರುವ ರಾಜಾ ಕಾಲುವೆ ಅತಿಕ್ರಮಣ ಪ್ರಕರಣವನ್ನು ಬಹುಶಃ ಮರೆತಿರುವಂತೆ ತೋರುತ್ತಿದೆ.

ಕಲ್ಲು ತೂರುವವರ ವಕ್ತಾರ!: ರಾಷ್ಟ್ರದ ಜನತೆಯೆದುರು ಈಗ ಇನ್ನೊಂದು ಪ್ರಕರಣವಿದೆ. ಭಾರತೀಯ ಗಣರಾಜ್ಯದಿಂದ ಪಡೆಯುವಷ್ಟನ್ನೆಲ್ಲ ಪಡೆದುಕೊಂಡಿರುವ ಡಾ| ಫಾರೂಕ್‌ ಅಬ್ದುಲ್ಲಾ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ವಿರುದ್ಧವೇ ಶಸ್ತ್ರ ಎತ್ತಿರುವ ಭಯೋತ್ಪಾದಕರ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ಇಷ್ಟೇ ಅಲ್ಲ, ಮಿಲಿಟರಿ ಹಾಗೂ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸುತ್ತಿರುವ ಹಿಂಸಾಕೋರರನ್ನು “ರಾಷ್ಟ್ರೀಯವಾದಿಗಳು’ ಎಂದು ಕರೆಯುತ್ತಾರೆ. ರಾಜ್ಯದ “ಪರಂಪರಾಗತ ಮುಖ್ಯಮಂತ್ರಿ’ಗಳಾಗಿ ಆಳ್ವಿಕೆ ನಡೆಸಿದ್ದ ಅಬ್ದುಲ್ಲಾ ಕುಟುಂಬದ ಮೂರು ತಲೆಮಾರುಗಳು ನಮ್ಮ ದೇಶಕ್ಕೆ ಮಾಡಿರುವ ಅಪಕಾರವನ್ನು ಜಾಹೀರುಪಡಿಸಬೇಕಾದ ಸಮಯವೀಗ ಬಂದಿದೆ. ಕಳೆದ 29 ವರ್ಷಗಳ ಕಾಲ ಶೇಖ್‌ ಅಬ್ದುಲ್ಲಾ, ಆ ಬಳಿಕ ಅವರ ಪುತ್ರ ಫಾರೂಕ್‌ ಅಬ್ದುಲ್ಲಾ, ಮುಂದೆ ಅವರ ಪುತ್ರ ಉಮರ್‌ ಅಬ್ದುಲ್ಲಾ ಈ ರಾಜ್ಯವನ್ನು ಆಳಿದ್ದಾರೆ. ಇಷ್ಟು ಸಾಲದೆಂಬಂತೆ ಶೇಖ್‌ ಅಬ್ದುಲ್ಲಾರ ಅಳಿಯ ಗುಲಾಂ ಮಹಮ್ಮದ್‌ ಶಾ ಅವರೂ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಭಾರತದ ಈ ಭಾಗದಲ್ಲಿ ಮಹಾರಾಜರ ಆಳ್ವಿಕೆಯ ಬದಲಿಗೆ ಅಬ್ದುಲ್ಲಾಗಳ ರಾಜ್ಯಭಾರ ಚಾಲ್ತಿಯಲ್ಲಿತ್ತು. ಕಾಶ್ಮೀರ ಕಣಿವೆಯ ಒಂದು ಜನವರ್ಗ ಪಾಕಿಸ್ತಾನದೊಂದಿಗೆ ಸೇರ್ಪಡೆಗೊಳ್ಳಬೇಕೆಂದು ಬಹಿರಂಗವಾಗಿ ಆಗ್ರಹಿಸುವಂಥ ಸನ್ನಿವೇಶ ಅಲ್ಲಿ ನಿರ್ಮಾಣವಾಗಲು ಈ ಅಬ್ದುಲ್ಲಾ ಕುಟುಂಬವೇ ಕಾರಣ. ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಜಗ್‌ಮೋಹನ್‌ 30 ವರ್ಷಗಳ ಹಿಂದೆಯೇ ಬರೆದು ಪ್ರಕಟಿಸಿದ್ದ “ಮೈ ಫೊÅàಜನ್‌ ಟಬುìಲೆನ್ಸ್‌ ಇನ್‌ ಕಾಶ್ಮೀರ್‌’ ಎಂಬ ಪುಸ್ತಕದಲ್ಲಿ, “”ರಾಜ್ಯದಲ್ಲಿ ರಾಜಕೀಯ ಭ್ರಷ್ಟಾಚಾರವೆನ್ನುವುದು 1947ರಿಂದಲೇ ಇತ್ತಾದರೂ ಅದು ಪೆಡಂಭೂತವಾಗಿ ಬೆಳೆದು ನಿಂತದ್ದು 1977ರಲ್ಲಿ ಶೇಖ್‌ ಅಬ್ದುಲ್ಲಾ ಅಧಿಕಾರಕ್ಕೆ ಮರಳಿದ ಬಳಿಕ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈಗ ಕಣಿವೆಯ ಪಾಕ್‌ಪ್ರಿಯರ ಕಡೆಗೆ ವಾಲಿ ನಿಂತು ಮಾತನಾಡುತ್ತಿರುವ ಫಾರೂಕ್‌ ಅಬ್ದುಲ್ಲಾ ಬಹುಶಃ ಈ ಮೂಲಕ ಮೋದಿ ಸರಕಾರ ತನ್ನ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ತಾವಾಗಿ ಆಹ್ವಾನಿಸಿಕೊಳ್ಳುತ್ತಿದ್ದಾರೆ.

– ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next