ಹೈದರಾಬಾದ್: ಅಪಾಯಕಾರಿ
ಕೋವಿಡ್ 19 ಸೋಂಕು ಕಾಣಿಸಿಕೊಂಡ ನಂತರ ದೇಶದಲ್ಲಿ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಮಾಸ್ಕ್ ಗಳು, ಹ್ಯಾಂಡ್ ಸ್ಯಾನಿಟೈಸರ್ ಗಳು ಅತ್ಯಂತ ವೇಗದಲ್ಲಿ ಬಿಕರಿಯಾಗುತ್ತಿರುವ, ದುಪ್ಪಟ್ಟು ದರಕ್ಕೆ ಮಾರಾಟವಾಗುತ್ತಿರುವ ಸುದ್ದಿಗಳ ನಡುವೆ ಬೆಚ್ಚಿ ಬೀಳುವ ಸುದ್ದಿಯೊಂದು ಹೈದರಾಬಾದ್ ನಿಂದ ವರದಿಯಾಗಿದೆ.
ಕೋವಿಡ್ 19 ಸೋಂಕು ತಾಗದಂತೆ ಜನರು ಬಳಸುವ ಹ್ಯಾಂಡ್ ಸ್ಯಾನಿಟೈಸರ್ ಗಳ ಜೊತೆ ಸಾಕಷ್ಟು ನಕಲಿ ಸ್ಯಾನಿಟೈಸರ್ ಗಳೂ ಮಾರಾಟವಾಗುತ್ತಿದೆ. ಇಂತಹ ನಕಲಿ ಸ್ಯಾನಿಟೈಸರ್ ಗಳನ್ನು ಉತ್ಪಾದನೆ ಮಾಡುತ್ತಿದ್ದ ಜಾಲವೊಂದನ್ನು ಹೈದರಾಬಾದ್ ಪೊಲೀಸರು ಬೇಧಿಸಿದ್ದಾರೆ.
ರಾಚಕೊಂಡ ವಿಶೇಷ ತನಿಖಾ ದಳ, ಹೈದರಾಬಾದ್ ಪೊಲೀಸರು ಮತ್ತು ತೆಲಂಗಾಣ ಆಯುಶ್ ಆರೋಗ್ಯ ತಪಾಸಣಾಧಿಕಾರಿಗಳ ತಂಡ ದಾಳಿ ನಡೆಸಿ ಈ ಜಾಲವನ್ನು ಪತ್ತೆ ಮಾಡಿದ್ದು, ನಕಲಿ ಉತ್ಪನ್ನಗಳನ್ನು ವಶಕ್ಕೆ ಪಡೆದಿದ್ದಾರೆ.
100 ಮಿ.ಲೀ ನ 25 ಸಾವಿರ ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರೊಂದಿಗೆ ಸುಮಾರು 40 ಲಕ್ಷ ರೂ. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಂಬಂಧಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇದುವರೆಗೆ ಈ ಜಾಲ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ನಕಲಿ ಸ್ಯಾನಿಟೈಸರ್ ಬಾಟಲಿಗಳನ್ನು ಮಾರಾಟ ಮಾಡಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಈ ನಕಲಿ ಸ್ಯಾಸಿಟೈಸರ್ ಮಾರಾಟದಿಂದ ಈ ಜಾಲ ಸುಮಾರು ಒಂದು ಕೋಟಿ 44 ಲಕ್ಷ ರೂ. ನಷ್ಟು ಹಣ ಗಳಸಿದೆ ಎನ್ನಲಾಗಿದೆ.
ಕುಶೈಗಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಲಪಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿದ್ದು, ಸೆಮನ್ಸ್ ಕ್ಲೀನ್ ಸೆಮ್ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಕೌಸ್ತುಭಾ ಕೋಕ್ಲೀನ್ ಎಂಬ ಹೆಸರಿನಲ್ಲಿ ನಕಲಿ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದರು.
ತೆಲಂಗಾಣದಲ್ಲಿ ಮುಖಗವುಸು ಮತ್ತು ಸ್ಯಾನಿಟೈಸರ್ ನ ಕೊರತೆ ಕಾಡುತ್ತಿದ್ದು, ಅದರ ಮಧ್ಯೆ ಈ ನಕಲಿ ಸ್ಯಾನಿಟೈಸರ್ ಗಳ ಹಾವಳಿಯಿಂದ ಸರಕಾರ ಮತ್ತು ಜನರು ಮತ್ತಷ್ಟು ಚಿಂತೆಗೀಡಾಗುವಂತಾಗಿದೆ.