Advertisement

ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಜಾಲ ಎಎಸ್‌ಐ ಪುತ್ರನೇ ಸೂತ್ರದಾರ

11:23 AM Jan 19, 2018 | |

ಬೆಂಗಳೂರು: ವಾಹನ ತಪಾಸಣೆ ವೇಳೆ ದೊರೆತ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಜಾಡುಹಿಡಿದು ತನಿಖೆ ಆರಂಭಿಸಿದ ಕೊತ್ತನೂರು ಠಾಣೆ ಪೊಲೀಸರು, ಮಂಡ್ಯದಲ್ಲಿದ್ದ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಜಾಲವನ್ನು ಬೇಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಪಿ ನಗರದ ಮೊಹಮದ್‌ ರಹಮತ್‌ ಅಲಿ, ಮಂಡ್ಯದ ಅಯಾಜ್‌ ಪಾಷಾ ಹಾಗೂ ಸೈಯದ್‌ ಜಿಲಾನ್‌ ಬಂಧಿತರು.

Advertisement

ಅಚ್ಚರಿಯ ಸಂಗತಿ ಎಂದರೆ “ನಕಲಿ ಡ್ರೈವಿಂಗ್‌ ಲೈಸೆನ್ಸ್‌’ ಜಾಲದ ಸೂತ್ರಧಾರ ಹಾಲಿ ಕರ್ತವ್ಯದಲ್ಲಿರುವ ಸಹಾಯಕ ಸಬ್‌ ಇನ್ಸಪೆಕ್ಟರ್‌ವೊಬ್ಬರ ಪುತ್ರ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತಲೆಮರೆಸಿಕೊಂಡ ಎಎಸ್‌ಐ ಮಗ ಸಮೀರ್‌ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನಕಲಿ ಡ್ರೈವಿಂಗ್‌ ಲೈಸೆನ್ಸ್‌ ತನಿಖೆಯಿಂದ ಹೆಗಡೆ ನಗರದ ಠಾಣೆಯಲ್ಲಿ ಒಟ್ಟು 28 ನಕಲಿ ಡ್ರೈವಿಂಗ್‌ ಲೈಸೆನ್ಸ್‌ಗಳು ಸಂಗ್ರಹವಾಗಿವೆ. ಬಳಿಕ ಸಯ್ಯದ್‌ ಇರ್ಷಾದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತನಿಗೆ ರಹಮತ್‌ ಅಲಿ ಕೆಲ ತಿಂಗಳ ಹಿಂದೆ ನಕಲಿ ಕಾರು ಡ್ರೈವಿಂಗ್‌ ಲೈಸೆನ್ಸ್‌ ಮಾಡಿಕೊಟ್ಟಿದ್ದಾಗಿ ಮಾಹಿತಿ ನೀಡಿದ.

ಹೀಗಾಗಿ ರಹಮತ್‌ನನ್ನು ಬಂಧಿಸಿದಾಗ, ಮಂಡ್ಯದಲ್ಲಿ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ಪ್ರಿಂಟ್‌ ಮಾಡುತ್ತಿರುವ ಸಂಗತಿ ಕುರಿತು ಬಾಯ್ಬಿಟ್ಟ. ಬಳಿಕ ಮಂಡ್ಯದ “ರಾಯಲ್‌ ಅಪ್‌ಸೆಟ್‌ ಪ್ರಿಂಟರ್’ ಮೇಲೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದಾಗ, ಈ ಜಾಲ ಬೆಳಕಿಗೆ ಬಂದಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

ಮಂಡ್ಯದಲ್ಲಿ ಲೈಸೆನ್ಸ್‌ ಮುದ್ರಣಕ್ಕೆ ಬಳಸುತ್ತಿದ್ದ ಮ್ಯಾಜಿಕ್‌ ಕಾರ್ಡ್‌ ಪ್ರಿಂಟಿಂಗ್‌ ಮಿಷಿನ್‌, 22 ನಕಲಿ ಡ್ರೈವಿಂಗ್‌ ಲೈಸೆನ್ಸ್‌ಗಳು, ಒಂದು ಲ್ಯಾಪ್‌ಟಾಪ್‌ ಹಾಗೂ ಮೊಬೈಲ್‌ ಫೋನ್‌ ಜಪ್ತಿ ಮಾಡಿಕೊಂಡಿದ್ದು, ಮತ್ತೋರ್ವ ಆರೋಪಿ ಸಮೀರ್‌ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Advertisement

ದಂಧೆ ಶುರುವಾದದ್ದು ಹೇಗೆ?: ತಲೆ ಮರೆಸಿಕೊಂಡಿರುವ ಸಮೀರ್‌, ಈ ಹಿಂದೆ ಮಂಡ್ಯದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದಾಗ ತನ್ನ ಸ್ನೇಹಿತನೊಬ್ಬನ ಜೊತೆ ಆರ್‌ಟಿಒ ಕಚೇರಿಗೆ ಹೋಗಿ ಬರುತ್ತಿದ್ದು ಡ್ರೈವಿಂಗ್‌ ಲೈಸೆನ್ಸ್‌ ಹೇಗೆ ನೀಡಲಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡಿದ್ದ.

ಅಲ್ಲದೆ, ಒಂದು ವರ್ಷದ ಹಿಂದೆ ಪರಿಚಯವಾಗಿದ್ದ ಮೊದಲ ಆರೋಪಿ ಅಯಾಜ್‌ ಡಿಪ್ಲೋಮಾ ಕಂಪ್ಯೂಟರ್‌ ಕೋರ್ಸ್‌ ಮಾಡಿದ್ದ. ಈ ಜ್ಞಾನ ಬಳಸಿಕೊಂಡು ಆರೋಪಿಗಳಿಬ್ಬರೂ ಸೇರಿ ನಕಲಿ ಡ್ರೈವಿಂಗ್‌ ಲೈಸೆನ್ಸ್‌ ದಂಧೆ ಶುರುಮಾಡಿದ್ದರು. ಇವರ ಜೊತೆ ಇತರೆ ಆರೋಪಿಗಳ ಜೊತೆ ಸೇರಿ ಮಂಡ್ಯದಲ್ಲಿ ರಿಜಿಸ್ಟ್ರೇಶನ್‌ ಮಾಡಿಸದೆಯೇ “ರಾಯಲ್‌ ಅಪ್‌ಸೆಟ್‌ ಪ್ರಿಂಟರ್’ ಅಂಗಡಿ ತೆರೆದಿದ್ದರು.

ನಕಲಿ ಲೈಸೆನ್ಸ್‌ಗೆ ಬೆಲೆ 20 ಸಾವಿರ ರೂ.: ದಂಧೆ ಶುರು ಮಾಡಿದ ಆರೋಪಿಗಳು ಮೊದಲು ಲೈಸೆನ್ಸ್‌ ಪ್ರಿಂಟ್‌ ಮಾಡಲು ಬೇಕಾದ ಪಿವಿಸಿ ಕಾರ್ಡ್‌ಗಳನ್ನು ಆನ್‌ಲೈನ್‌ ಮಾರಾಟ ತಾಣಗಳಾದ ಅಮೆಜಾನ್‌ ಸೇರಿದಂತೆ ಇನ್ನಿತರೆ ತಾಣಗಳಿಂದ ಖರೀದಿ ಮಾಡಿದ್ದಾರೆ. ಬಳಿಕ, ಕಳೆದ ಹಲವು ತಿಂಗಳುಗಳಿಂದ ದಂಧೆ ನಡೆಸಿದ್ದಾರೆ.

ಇತ್ತ ಬೆಂಗಳೂರಿನಲ್ಲಿ ರಹಮತ್‌ ಹಾಗೂ ಸಮೀರ್‌, ಲೈಸೆನ್ಸ್‌ ಅಗತ್ಯವಿದ್ದವರನ್ನು ಸಂಪರ್ಕಿಸಿ 20 ಸಾವಿರ ರೂ. ಆಧಾರ್‌ ಕಾರ್ಡ್‌, ಫೋಟೋಗಳು ಸೇರಿದಂತೆ ಇನ್ನಿತರೆ ದಾಖಲೆಗಳನ್ನು ನೀಡಿದರೆ ಒಂದು ತಿಂಗಳಿಗೆ ನಿಮಗೆ ಲೈಸೆನ್ಸ್‌ ತಂದುಕೊಡುತ್ತೇವೆ ಎಂದು ನಂಬಿಸಿದ್ದಾರೆ. ಹೀಗೆ ಹಲವರ ಬಳಿ ಹಣ ಪಡೆದುಕೊಂಡು, ಮಂಡ್ಯದಲ್ಲಿ ನಕಲಿ ಲೈಸೆನ್ಸ್‌ ಫ್ರಿಂಟ್‌ ಮಾಡಿಸಿಕೊಂಡು ಬಂದು ಕೊಟ್ಟಿದ್ದಾರೆ. ಸದ್ಯ ಆರೋಪಿಗಳು ಎಷ್ಟು ಮಂದಿಗೆ ವಂಚಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next