ಕನಕಪುರ: ತನ್ನ ಮೈಮೇಲೆ ತಾನೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಕಂಸಾಗರ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಾತನೂರು ಹೋಬ ಳಿಯ ಕಂಸಾಗರ ಗ್ರಾಮದ ನರಸೇಗೌಡ(66) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿಗೆ ಪತ್ನಿ ಹಾಗೂ ಮಕ್ಕಳಿದ್ದಾರೆ. ಮೃತ ನರಸೇಗೌಡ ಕುಡಿತಕ್ಕೆ ದಾಸನಾಗಿದ್ದು, ಪ್ರತಿದಿನ ಕೂಡಮದ್ಯಪಾನ ಮಾಡುತ್ತಿದ್ದ. ಅದೇ ರೀತಿ ಕಳೆದ ಫೆ.28ರಂದು ಬುಧವಾರ ರಾತ್ರಿ ಕುಡಿದು ಮನೆಗೆ ಬರುವಾಗ ಜೊತೆಯಲ್ಲಿ ಒಂದು ಚಿಕ್ಕ ಬಾಟಲ್ ನಲ್ಲಿ ಪೆಟ್ರೋಲ್ ತಂದಿದ್ದ ಎನ್ನಲಾಗಿದೆ.
ಮನೆಯ ಮುಂದೆ ಯಾರೂ ಇಲ್ಲದನ್ನು ನೋಡಿ ತನ್ನ ಮೈಮೇಲೆ ತಾನೆ ಪೆಟ್ರೋಲ್ ಸುರಿಸಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿಯ ಹೊತ್ತಿಕೊಳ್ಳುತ್ತಿದ್ದಂತೆ ನೋವು ತಾಳಲಾರದೆ ವ್ಯಕ್ತಿ ಚೀರಾಡುತ್ತಿದ್ದಾಗ ಪತ್ನಿ ಹಾಗೂ ಅಕ್ಕ ಪಕ್ಕದ ಮನೆಯವರು ಸೇರಿ ನೀರನ್ನು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ. ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದ ನರಸೇಗೌಡನನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರ ಪುತ್ರ ನವೀನ್ ಕುಮಾರ್ ನೀಡಿದ ದೂರಿನ ಮೇರಿಗೆ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.