Advertisement

‘ನಾನಿಲ್ಲಿ ಸಾಯಲು ಬಂದಿದ್ದೇನೆ; ನನ್ನನ್ನು ರಕ್ಷಿಸಬೇಡಿ’: ಸಿಂಹದ ಎದುರು ನಿಂತ ಕುಡುಕನ ಮನವಿ!

09:32 AM Oct 18, 2019 | Team Udayavani |

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿರುವ ಮೃಗಾಲಯದಲ್ಲಿ ಗುರುವಾರದಂದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೃಗಾಲಯದ ಸಿಬ್ಬಂದಿಗೆ ಪೀಕಲಾಟ ಶುರುವಾಗಿತ್ತು. ಇದಕ್ಕೆಲ್ಲ ಕಾರಣವಾಗಿದ್ದು 28 ವರ್ಷ ಪ್ರಾಯದ ವ್ಯಕ್ತಿಯೊಬ್ಬ ಮೃಗಾಲಯದಲ್ಲಿ ಸಿಂಹಗಳಿದ್ದ ಪ್ರದೇಶದ ಆವರಣ ಬೇಲಿಯನ್ನು ಜಿಗಿದು ಒಳನುಗ್ಗಿದ್ದು!

Advertisement

ಹೌದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ರಕ್ಷಣಾ ಬೇಲಿಯನ್ನು ಜಿಗಿದ ಆ ವ್ಯಕ್ತಿ ಸೀದಾ ಸಿಂಹವೊಂದರ ಎದುರು ನಿಂತೇ ಬಿಟ್ಟಿದ್ದ. ಆ ಸಿಂಹವಾದ್ರೂ ಯಾವ ಮೂಡಿನಲ್ಲಿತ್ತೋ, ತನ್ನೆದುರು ಬಂದು ನಿಂತ ವ್ಯಕ್ತಿಯನ್ನು ಹಾಗೇ ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿತು. ಆ ವ್ಯಕ್ತಿಯಾದ್ರೂ ಸಿಂಹದ ಎದುರಿನಲ್ಲಿ ಚಿತ್ರವಿಚಿತ್ರವಾಗಿ ವರ್ತಿಸಲಾರಂಭಿಸಿದ. ಈತನ ಹುಚ್ಚಾಟವನ್ನು ನೋಡುತ್ತಲೇ ಇದ್ದ ಆ ಸಿಂಹ ಆತನ ಬಳಿಗೆ ಬಂದು ಆತನಿಗೊಂಡು ಸುತ್ತುಹಾಕಿ ತನ್ನ ಮುಂಗಾಲೆರಡನ್ನು ಆತನ ಮೇಲೆ ಇರಿಸಲು ಪ್ರಯತ್ನಿಸುವ ರೋಚಕ ದೃಶ್ಯ ಮೊಬೈಲ್ ಕೆಮರಾದಲ್ಲಿ ಸೆರೆಯಾಗಿದೆ.

ಆ ಬದಿಯಲ್ಲಿ ಇಷ್ಟೆಲ್ಲಾ ರಾಮಾಯಣ ಆಗುತ್ತಿರುವಾಗ ವಿಷಯ ತಿಳಿದು ಗಾಬರಿ ಬಿದ್ದು ಅಲ್ಲಿಗೆ ಆಗಮಿಸಿದ ಮೃಗಾಲಯದ ಸಿಬ್ಬಂದಿ ಆ ಸಿಂಹಕ್ಕೆ ಮಂಪರು ಬರಿಸಿ ಆತನನ್ನು ಅಲ್ಲಿಂದ ಕರೆದುಕೊಂಡುಬಂದು ವಿಚಾರಣೆ ನಡೆಸಿದ್ದಾರೆ.

‘ತಾನು ಬಿಹಾರದ ಚಂಪಾರಣ್ ಜಿಲ್ಲೆಯವನಾಗಿದ್ದು ಸಾಯುವ ಉದ್ದೇಶದಿಂದಲೇ ನಾನು ಆವರಣಗೋಡೆ ಜಿಗಿದು ಸಿಂಹದ ಹತ್ತಿರ ಹೋಗಿದ್ದೆ’ ಎಂದು 28 ವರ್ಷ ಪ್ರಾಯದ ರೆಹಾನ್ ಖಾನ್ ಎನ್ನುವ ಆ ವ್ಯಕ್ತಿ ಹೇಳಿದ್ದಾನೆ. ಮತ್ತು ಈ ಸಂದರ್ಭದಲ್ಲಿ ರೆಹಾನ್ ಖಾನ್ ಪಾನಮತ್ತನಾಗಿದ್ದ ಎಂಬ ವಿಚಾರವೂ ಇದೀಗ ಬಹಿರಂಗವಾಗಿದೆ.

ರೆಹಾನ್ ಆವರಣ ಗೋಡೆಯನ್ನು ಜಿಗಿದು ಒಳ ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲೇ ಇದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅವರಿಂದ ತಪ್ಪಿಸಿಕೊಂಡು ಆತ ಸಿಂಹದ ಬಳಿಗೆ ಸಾಗಿದ್ದಾನೆ. ಮತ್ತು ರೆಹಾನ್ ಅಲ್ಲಿಂದ ಹೊರಬರಲು ಏಣಿಯೊಂದನ್ನು ಇರಿಸಿದರೂ ಆತ ಸಿಂಹದ ಎದುರಿನಿಂದ ಕದಲಲಿಲ್ಲ. ಹಾಗಾಗಿ ನಾವು ಅನಿವಾರ್ಯವಾಗಿ ಸಿಂಹಕ್ಕೆ ಮಂಪರು ಬರಿಸಿ ಆ ಕುಡುಕನನ್ನು ರಕ್ಷಿಸಬೇಕಾಯಿತು ಎಂದು ಮೃಗಾಲಯದ ಮಾಧ್ಯಮ ವಕ್ತಾರ ರಿಯಾಝ್ ಅಹಮ್ಮದ್ ಎಂಬುವವರು ಮಾಹಿತಿ ನೀಡಿದ್ದಾರೆ.

Advertisement

ಅಂತೂ ತಾನು ಸಾಯಲು ಹೋಗಿ ಮೃಗಾಲಯದ ಸಿಬ್ಬಂದಿ ಮತ್ತು ಅಲ್ಲಿದ್ದವರನ್ನೆಲ್ಲಾ ಕೆಲಕ್ಷಣ ಭಯಭೀತರನ್ನಾಗಿಸಿದ ಈ ಭಲೇ ಕುಡುಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next