ಸುಮಾ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರಾಶೆಯನ್ನೇ ಅನುಭವಿಸುತ್ತಿದ್ದಳು. ತಾನು ಏನು ಕೆಲಸ ಮಾಡಿದರೂ ಫಲಿತಾಂಶ ಕೆಟ್ಟದಾಗಿರುತ್ತದೆ ಎಂಬ ಏಕತಾನಕೆ ಅವಳದ್ದು. ಅವಳ ಪಾಡಿಗೆ ಇದು ಬಗೆಹರಿಯದ ಸಮಸ್ಯೆಯಾಗಿ ಬದಲಾಗಿತ್ತು.
ಇಲ್ಲಿ ಸುಮಾಳಿಗೆ ಸಕಾರಾತ್ಮಕವಾಗಿ ಯೋಚಿಸ ದಿರುವುದೇ ಅವಳ ಹಿನ್ನಡೆಗೆ ಕಾರಣವಾಗಿತ್ತು. ಒಂದೆರಡು ಬಾರಿ ನಿರಾಶೆ ಅನುಭವಿಸಿದರೆ ಪ್ರತಿ ಬಾರಿಯೂ ನಿರಾಶೆಯೇ ಕಟ್ಟಿಟ್ಟ ಬುತ್ತಿ ಎಂಬ ಭಾವನೆ ಮನೆ ಮಾಡುತ್ತದೆ. ಇಂತಹ ಆಲೋಚನೆಗಳೇ ಯಶಸ್ಸಿನ ಹಾದಿಯನ್ನು ಮುಚ್ಚುತ್ತವೆ. ಬಹುಶಃ ಇದೇ ವ್ಯೂಹದಲ್ಲಿ ಸುಮಾ ಸಿಲುಕಿ ಹಾಕಿಕೊಂಡಿದ್ದಳು. ಮೊದಲ ಪ್ರಯತ್ನದಲ್ಲಿ ಸೋತ ಬಳಿಕ ಉಳಿದ ಎಲ್ಲಾ ಪ್ರಯತ್ನಗಳ ಬಾಗಿಲು ಮುಚ್ಚಿದೆ ಎಂದೇ ಭಾವಿಸಿ ಕೊಂಡಿದ್ದಳು. ಇದು ಅವಳಲ್ಲಿ ಗೊಂದಲಗಳ ಕೂಪ ಬಾಯ್ದೆರೆದು ಮಹಾ ಕಂದಕವಾಗಿ ಬದಲಾಗಿತ್ತು. ಇಲ್ಲಿ ಸುಮಾಳ ಈ ಸಮಸ್ಯೆಗೆ ಕಾರಣವಾಗಿದ್ದು ಮನಸ್ಥಿತಿ.ಇಂದು ಇದು ಕೇವಲ ಸುಮಾಳ ವಿಚಾರವಾಗಿ ಉಳಿದಿಲ್ಲ. ಎಲ್ಲರೂ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಗತಿಗಳ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.
ಇಲ್ಲಿ ನಾವು ಪ್ರಯತ್ನವನ್ನು ಇಂದು ಬಾಗಿಲಿಗೆ ಹೋಲಿಸೋಣ. ನೀವು ಯಾವುದೋ ಕಾರ್ಯದ ನಿಮಿತ್ತ ನಿಮ್ಮ ಪಕ್ಕದ ಮನೆಯ ಅಂಗಳದ ಮೂಲಕ ಹಾದು ಹೋಗುತ್ತೀರಿ ಎಂದಿಟ್ಟುಕೊಳ್ಳಿ. ಪಕ್ಕದ ಮನೆಯಲ್ಲಿ ಯಾರೂ ಇಲ್ಲ. ಅವರ ಮನೆಯ ಬಾಗಿಲು ಒಂದು ಮುಚ್ಚಿದೆ ಎಂದು ಭಾವಿಸಿ. ಇಂತಹ ಸಂದರ್ಭ ನಿಮ್ಮಲ್ಲಿ ಬರುವ ಯೋಚನೆ ಏನು? ಈ ಮನೆಯಲ್ಲಿ ಯಾರೂ ಇಲ್ಲ. ಕಾರಣ ಒಂದು ಬಾಗಿಲು ಮುಚ್ಚಿದೆ. ಆದರೆ ಇದು ಸಕಾರಾತ್ಮಕವಾಗಿ ಚಿಂತಿಸುವ ಬಗೆಯಲ್ಲ. ಒಂದು ಬಾಗಿಲು ಮುಚ್ಚಿದೆ ಎಂದರೆ… ಅದರರ್ಥ ಇನ್ನೊಂದು ಬಾಗಿಲು ತೆರೆದಿದೆ. ಒಂದು ಬಾಗಿಲು ಮುಚ್ಚಿದ ಮಾತ್ರಕ್ಕೆ ಅವಕಾಶಗಳ ಬಾಗಿಲು ಮುಚ್ಚಿದೆ ಎಂದಲ್ಲ. ಹೀಗೆ ನಾವು ನಮ್ಮ ಚಿಂತನೆಯನ್ನು ಬದಲಾಯಿಸಿ ಕೊಳ್ಳಬೇಕು. ಸಂದರ್ಭಗಳನ್ನು ನಾವು ವಿಶ್ಲೇಷಿಸಲು ಹೋಗದೇ ಇರುವುದು ಇಂತಹ ಸನ್ನಿವೇಶಗಳನ್ನು ಕಟ್ಟಿಕೊಡುತ್ತದೆ.
ಇಂದು ನಮ್ಮ ಜೀವನದಲ್ಲಿ ಆಗುತ್ತಿರುದು ಇದೇ ಒಂದು ಇಂಟರ್‌ವ್ಯೂ ಅಥವಾ ಪರೀಕ್ಷೆ ಬರೆದ ಬಳಿಕ ಫಲಿತಾಂಶ ಪೂರಕವಾಗಿ ಬರದೇ ಇದ್ದರೆ ನಾವು ಮುಂದೆ ಪ್ರಯತ್ನಿಸುವ ಪರಿ ಎಲ್ಲವೂ ನಕರಾತ್ಮಕವಾಗಿಯೇ ಇರುತ್ತದೆ. ಇದರಿಂದ ನಾವು ಹೊರಬಂದು ಪ್ರಯತ್ನವನ್ನು ಮುಂದುವರೆಸಬೇಕಷ್ಟೇ.
- ಕಾರ್ತಿಕ್ ಅಮೈ