Advertisement

ದಾರಿ ಕಾಣದಾದ ನಾಯಿ ಈಗ ಮೂರು ಮನೆಗೆ ಅತಿಥಿ !

06:00 AM Jun 14, 2018 | |

ಮಂಗಳೂರು: ಈ ನಾಯಿಯ ಚಿತ್ರವನ್ನು ಮೊಬೈಲ್‌ನಲ್ಲಿ ನೋಡಿರಬಹುದು. ಏಕೆಂದರೆ “ಮನೆಯಿಂದ ಕಾಣೆಯಾದ ಈ ನಾಯಿಯ ಯಜಮಾನರು ಎಲ್ಲಿಯಾದರೂ ಇದ್ದರೆ ಸಂಪರ್ಕಿಸಿ’ ಎಂಬ ಮೆಸೇಜ್‌ ವಾಟ್ಸಾಪ್‌/ಫೇಸ್‌ಬುಕ್‌ನಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಸದ್ಯಕ್ಕೆ ನಾಯಿ ಮೂರನೇ ಮನೆ ಸೇರಿದೆ. 

Advertisement

ಮೇ 29ಕ್ಕೆ ನಗರದಲ್ಲಿ ಭಾರೀ ಮಳೆ ಸುರಿದಾಗ ಯಾವುದೋ ಮನೆಯಿಂದ ನಾಯಿಯೊಂದು ದಾರಿ ಕಾಣದೆ ಮಲ್ಲಿಕಟ್ಟೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿತ್ತು. ಸಾಕು ನಾಯಿಯಂತೆ ಗೋಚರಿಸುತ್ತಿದ್ದ ಅದು ಅಂತಿಮವಾಗಿ ಸಾಯಿರಾಧಾ ವಾಹನ ಶೋರೂಂ ಪಕ್ಕದ ಅಂಗಡಿ/ಮನೆಯ ಬಳಿ ಕುಳಿತಿತ್ತು. ಒಂದೆರಡು ದಿನ ಸ್ಥಳೀಯರು ಆ ನಾಯಿಗೆ ಆಹಾರ ನೀಡಿ ಉಪಚರಿಸಿದರು. ಮರುದಿನ ನಾಯಿ ಶೋರೂಂ ಬಳಿ ಸ್ಥಳಾಂತರಗೊಂಡಿತು. ಕಾವಲುಗಾರ ಆಹಾರ ನೀಡಿದ ಮೇಲೆ ನಾಯಿ ಅಲ್ಲಿಂದ ಕದಲಲಿಲ್ಲ. ಸಂಸ್ಥೆಯ ಸಿಬಂದಿಯೂ  ತಿಂಡಿ ನೀಡಿದರು. ಹೀಗೇ ಒಂದು ವಾರ ಕಳೆಯಿತು.

ವಾಟ್ಸಾಪ್‌ ಮೆಸೇಜ್‌
ನಾಯಿಯ ಅಸಹಾಯಕತೆ ಕಂಡ ಶೋರೂಂ ಸಿಬಂದಿ “ನಾಯಿ ಒಂದು ಬಂದಿದೆ. ಮನೆಯವರ ಹುಡುಕಾಟದಲ್ಲಿದೆ’ ಎಂಬ ಸಚಿತ್ರ ಸಂದೇಶವನ್ನು ವಾಟ್ಸಾಪ್‌ನಲ್ಲಿ ರವಾನಿಸಿದರು. ಆ ಮೆಸೇಜ್‌ ಬೇರೆ ಬೇರೆ ಗ್ರೂಪ್‌ಗ್ಳಲ್ಲಿ ಹರಿದಾಡಿತು. ಮರುದಿನ ಬೆಳಗ್ಗೆ ಹಲವು ಶ್ವಾನಪ್ರಿಯರು ಬಂದು ನಾಯಿ ಬಗ್ಗೆ ವಿಚಾರಿಸಿದರು. 10-15 ಮಂದಿ ಶೋರೂಂಗೆ ಬಂದು ನಾಯಿಯನ್ನು ವೀಕ್ಷಿಸಿದರು. ಅದರಲ್ಲಿ ಮಲ್ಲಿಕಟ್ಟೆಯ ಲೋಬೋ ಲೈನ್‌ ನಿವಾಸಿಯೊಬ್ಬರು, “ನಾಯಿಯನ್ನು ರಸ್ತೆ ಬದಿ ಬಿಡುವ ಬದಲು ಸಾಕುತ್ತೇನೆ’ ಎಂದು ಮನೆಗೆ ಕರೆದುಕೊಂಡು ಹೋದರು. 

ಸಂಜೆಯಾಗುವಷ್ಟರಲ್ಲಿ ಓರ್ವರು ಲೋಬೋ ಲೈನ್‌ ನಿವಾಸಿಗೆ ಕರೆ ಮಾಡಿ, “ನಾಯಿಗೆ ಒಂದೆರಡು ದಿನ ನಾವೂ ಊಟ ನೀಡಿದ್ದೇವೆ. ನಾವೇ ನಾಯಿಯನ್ನು ಸಾಕುತ್ತೇವೆ’ ಎಂದು ಕರೆದೊಯ್ದರು. ಅಲ್ಲಿಗೆ ನಾಯಿ ಮತ್ತೂಂದು ಮನೆಗೆ ರವಾನೆಯಾಯಿತು.

ಕಥೆ ಇಲ್ಲಿಗೇ ಮುಗಿಯಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಈ ವಿಷಯ ಹರಿದಾಡಿದ್ದನ್ನು ಗಮನಿಸಿದ ಪಂಪ್‌ವೆಲ್‌ ಸಮೀಪದ ಮನೆಯವರು “ನಾಯಿ ನಮ್ಮದು’ ಎಂದು ಕರೆದೊಯ್ದಿದ್ದಾರೆ. ಇದರರ್ಥ, ಮೂರನೇ ಯಜಮಾನನ ಮನೆಗೆ. ಆದರಿನ್ನೂ ನಿಜವಾದ ಯಜಮಾನ ಯಾರೆಂಬುದು ಖಚಿತವಾಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next