ನಮ್ಮ ಮನೆ ಕಾಡಿನ ಮಧ್ಯ ಭಾಗದಲ್ಲಿತ್ತು. ಹತ್ತಿರದಲ್ಲಿ ಯಾವುದೇ ಮನೆಗಳಿರದೆ ನಮ್ಮ ಮನೆಯಿರುವ ಜಾಗ ಒಂದು ದ್ವೀಪದಂತಿತ್ತು. ಹಾಗಾಗಿಯೇ ಮನೆ ಕಾಯಲೆಂದು ನಮ್ಮ ಅಜ್ಜ ಒಂದು ನಾಯಿಮರಿಯನ್ನು ತಂದಿದ್ದರು. ನಾಯಿಮರಿ ತುಂಬಾ ಮುದ್ದಾಗಿತ್ತು. ನನಗೆ ಮತ್ತು ನನ್ನ ತಂಗಿಗೆ ಯಾರಾದರೂ ಏನಾದರೂ ತಿಂಡಿಕೊಟ್ಟರೆ ಅದರ ಒಂದಂಶವನ್ನು ನಾಯಿಮರಿಗೆ ಕೊಡುತ್ತಿದ್ದೆವು. ನಾಯಿಮರಿ ಬಾಲ ಆಡಿಸುತ್ತ ನಮ್ಮ ಮುಖವನ್ನೊಮ್ಮೆ ನೋಡಿ, ತಿಂಡಿಯನ್ನು ಗಬಗಬನೇ ತಿನ್ನುತ್ತಿತ್ತು. ಅದನ್ನು ಕಟ್ಟಿಹಾಕಲು ಒಂದು ಸರಪಳಿಯನ್ನು ಕೂಡ ತಂದಿದ್ದರು. ನಾಯಿಮರಿಗೆ ಬೆಳಿಗ್ಗೆ ತಿಂಡಿಕೊಡುವ ಮೊದಲು ಮನೆಗೆ ಒಂದು ಸುತ್ತು ತಿರುಗಾಡಿಸಿ ಬರಬೇಕೆಂದು ಅಜ್ಜ ಹೇಳಿದ್ದರು. ಹಾಗೆಯೇ ಕೆಲವು ದಿವಸ ನಾಯಿಮರಿಗೆ ಅಭ್ಯಾಸ ಮಾಡಿಸಿದೆವು. ಅದಕ್ಕೆ ಉಣ್ಣಲು ಪ್ರತ್ಯೇಕವಾದ ತಟ್ಟೆಯೇ ಇತ್ತು. ಅದು ಬಾಲ ಆಡಿಸುತ್ತ ಬಂದು ಬಟ್ಟಲಿನಲ್ಲಿದ್ದ ಗಂಜಿಯನ್ನು ತಿನ್ನುತ್ತಿತ್ತು. ನಾಯಿಮರಿಗೆ ಅಜ್ಜಿ “ಟಾಮಿ’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ನಾನೂ ಹಾಗೂ ತಂಗಿ ಕೂಡ ಬಗೆಬಗೆಯ ಹೆಸರುಗಳಿಂದ ಕರೆಯುತ್ತಿದ್ದೆವು.
ಇದು ನಾಯಿಯ ಕತೆಯಾಯಿತು. ನಮ್ಮ ಮನೆಯಲ್ಲೊಂದು ಬೆಕ್ಕು ಇತ್ತು. ಅದು ಬಹಳ ಸೋಮಾರಿ. ಹತ್ತಿರದಿಂದ ಆ ಕಡೆ, ಈ ಕಡೆ ಇಲಿಗಳು ಓಡಾಡಿದರೂ ಕಣ್ಣೆತ್ತಿ ನೋಡುತ್ತಿರಲಿಲ್ಲ. ಕಾರಣ, ನಮ್ಮ ಅಜ್ಜಿ ಬೆಕ್ಕಿಗೆ ತುಂಬ ತಿನ್ನಲು ಕೊಡುತ್ತಿದ್ದರು.
ಮನೆಗೆ ಒಂದು ನಾಯಿಮರಿ ಯಾವ ಕ್ಷಣದಲ್ಲಿ ಬಂದಿತೋ ಪ್ರಾಣಿಪ್ರೀತಿಯಲ್ಲಿ ವಿಭಜನೆಯಾಯಿತು. ಬೆಕ್ಕಿಗೆ ಕೊಡುವ ಆಹಾರವೂ ಕಡಿಮೆಯಾಯಿತು. ಬೆಕ್ಕು ಹಸಿವೆಯಿಂದ ಮಿಯಾಂ ಮಿಯಾಂ ಎಂದು ಓಡಾಲಾರಂಭಿಸಿತು. ಇಲಿಗಳನ್ನು ಹಿಡಿದು ತಿನ್ನಲಾರಂಭಿಸಿತು. ನಾಯಿಮರಿ ಬಂದ ಪರೋಕ್ಷ ಪರಿಣಾಮದಿಂದ ಮನೆಯಲ್ಲಿ ಇಲಿಗಳ ಕಾಟ ಕೊಂಚ ಕಡಿಮೆಯಾಯಿತು. ಇಲಿಗಳು ಸಂಪೂರ್ಣ ಮರೆಯಾಗದಿದ್ದರೂ ಅವು ಬಿಲದಿಂದ ಹೊರಗೆ ಬರಲು ಅಂಜಿದವು.
ಏನೇ ಆಗಲಿ ನಾಯಿಮರಿ ಮತ್ತು ಬೆಕ್ಕು ನಮ್ಮ ಬದುಕಿನ ಭಾಗವೇ ಆಯಿತು. ನಮ್ಮ ಮನೆಯ ಸದಸ್ಯರೇ ಆದರು. ಪ್ರತಿದಿನ ನಾನು ಮತ್ತು ತಂಗಿ ಅಂಗಳದಲ್ಲಿ ಆಟವಾಡುತ್ತಿದ್ದೆವು. ಆಗ ನಾಯಿ-ಬೆಕ್ಕುಗಳಿಗೆ ಸಮಯವಿದ್ದರೆ, ಮೂಡ್ ಇದ್ದರೆ ನಮ್ಮೊಂದಿಗೆ ಆಟದಲ್ಲಿ ಸೇರಿಕೊಳ್ಳುತ್ತಿದ್ದವು. ಕೆಲವೊಮ್ಮೆ ದೂರದಲ್ಲಿ ಕುಳಿತು ನಮ್ಮ ಆಟವನ್ನು ನೋಡುತ್ತಿದ್ದವು.
ಒಮ್ಮೆ ಏನಾಯಿತೆಂದರೆ, ನನ್ನ ತಂಗಿ ಆಟವಾಡುವಾಗ ಕೆಳಗೆ ಬಿದ್ದಳು. ಬಿದ್ದು ಪೆಟ್ಟು ಮಾಡಿಕೊಂಡಳು. ತಂಗಿ ಅಳುತ್ತ ಬಂದು, “ಅಕ್ಕ ನನ್ನನ್ನು ದೂಡಿ ಹಾಕಿದಳು’ ಎಂದು ಅಜ್ಜಿಯಲ್ಲಿ ದೋಷಾರೋಪಣೆ ಮಾಡಿದಳು. ಅಜ್ಜಿ ನನಗೆ ಬೈದರು. ನಾನು ಮತ್ತು ನನ್ನ ತಂಗಿಯ ನಡುವೆ ನಡೆದಿದ್ದೇನು ಎಂಬುದಕ್ಕೆ ಸಾಕ್ಷಿ ಬೆಕ್ಕು. ಏಕೆಂದರೆ, ಅದು ನಮ್ಮ ಆಟವನ್ನು ನೋಡುತ್ತಲೇ ಇತ್ತು. ಅಜ್ಜಿ ನನ್ನನ್ನು ಗದರಿಸುವಾಗ ಏನೋ ಸೂಚನೆ ಎಂಬಂತೆ ಬಂದು ಅಜ್ಜಿಯ ಕಾಲು ನೆಕ್ಕಲಾಂಭಿಸಿತು. ಅಜ್ಜಿಯ ಗಮನ ಬೇರೆಡೆಗೆ ಹೋಯಿತು. ನನಗೆ ಬೈಯುವುದು ನಿಂತಿತು. ಆ ದಿನದ ಮಟ್ಟಿಗೆ ಬೆಕ್ಕು ತೀರ್ಪುಗಾರನಂತೆ ಸಹಕರಿಸಿ ನನ್ನ ಮರ್ಯಾದೆ ಉಳಿಸಿತು.
ಒಂದು ದಿವಸ ನಮ್ಮ ದೂರದ ಸಂಬಂಧಿಕರೊಬ್ಬರು ಮನೆಗೆ ಬಂದಿದ್ದರು. ಮನೆಯಲ್ಲಿ ಎಲ್ಲರಲ್ಲಿಯೂ ಚೆನ್ನಾಗಿ ಮಾತನಾಡಿ ಹೊರಟು ನಿಲ್ಲುವಾಗ ನನ್ನ ತಂಗಿಯ ಕೈಗೆ ಮುಟ್ಟಿದ್ದೇ ತಡ, ನಮ್ಮ ಟಾಮಿ ಕೋಪದಿಂದ “ಗುರ್’ ಎಂದಿತು. ಆಗ ನನ್ನ ಅಮ್ಮ ಒಂದು ಕೋಲು ತಂದು ಟಾಮಿಯನ್ನು ಗದರಿಸಿ ಓಡಿಸಿದರು. ಟಾಮಿ ನನ್ನ ಅಮ್ಮನಿಗೆ ಹೆದರುತ್ತಿತ್ತು. ಆದರೆ, ನಮ್ಮ ಅಜ್ಜನಿಗೆ ಅದರ ಬಗ್ಗೆ ತುಂಬ ಕಕ್ಕುಲಾತಿ. ಅಮ್ಮನ ಭಯದಿಂದ ಎಲ್ಲಿಯೋ ಅವಿತುಕೊಂಡಿದ್ದ ಟಾಮಿ, ಅಜ್ಜ ಬಂದಾಕ್ಷಣ ಮೆಲ್ಲ ಮೆಲ್ಲನೆ ಬಾಲ ಅಲ್ಲಾಡಿಸುತ್ತ ಬೆಳಕಿಗೆ ಬರುತ್ತಿತ್ತು.
ಬಹುಕಾಲ ನಮ್ಮ ಮನೆಯಲ್ಲಿ ನಮ್ಮ ಕುಟುಂಬದ ಸದಸ್ಯನಂತೆ ಇದ್ದ ಟಾಮಿಗೂ ಪ್ರಾಯವಾಯಿತು. ಪ್ರತಿದಿನ ನಿಷ್ಠೆಯಿಂದ ಮನೆ ಕಾಯುತ್ತಿದ್ದ ನಾಯಿ ಒಮ್ಮೆ ಮನೆಬಿಟ್ಟು ಹೋದದ್ದೇ ಮರಳಿ ಬರಲಿಲ್ಲ. ಎಲ್ಲಿ ಹೋಯಿತೋ ಬಲ್ಲವರಾರು? ಈ ಬಗ್ಗೆ ಅಜ್ಜನಿಗೆ ಕೇಳಿದೆ. “ಬಹುಶಃ ಮುದಿಯಾದ ತನ್ನಿಂದ ತೊಂದರೆಯಾಗಬಾರದೆಂದು ಟಾಮಿ ದೂರ ಹೋಗಿರಬೇಕು’ ಎಂದರು ಮಾರ್ಮಿಕವಾಗಿ.
ಅಜ್ಜಿನ ಮಾತನ್ನು ನನಗೆ ಇವತ್ತಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಆಗ ನನ್ನ ಕಣ್ಣಲ್ಲಿ ನೀರು ಬಂದಿತ್ತು. ಇವತ್ತಿಗೂ ಟಾಮಿಯನ್ನು ನೆನೆದರೆ ಕಣ್ಣು ತೇವವಾಗುತ್ತದೆ.
ಗೀತಾಶ್ರೀ
ದ್ವಿತೀಯ ಪಿಯುಸಿ, ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು, ತೆಂಕ ಎಡಪದವು