ಶಿವಮೊಗ್ಗ: ರಸ್ತೆ ವ್ಯವಸ್ತೆ ಇಲ್ಲದೇ ಇರುವ ಕಾರಣ ಅನಾರೋಗ್ಯ ಪೀಡಿತ ಮಹಿಳೆಯನ್ನು ಜೋಲಿ ಕಟ್ಟಿ ಹೊತ್ತುಕೊಂಡು ಆಸ್ಪತ್ರೆಗೆ ಕರೆತಂದ ಮನಕಲಕುವ ಘಟನೆಯೊಂದು ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯೆಂಬ ಖ್ಯಾತಿಯ ಶಿವಮೊಗ್ಗದಲ್ಲಿ ನಡೆದಿದೆ.
ಜಿಲ್ಲೆಯ ಸಾಗರ ತಾಲೂಕಿನ ಜೋಗದ ಚರ್ಚ್ ಮೌಂಟ್ ಏರಿಯಾದಲ್ಲಿ ಈ ಘಟನೆ ನಡೆದಿದೆ.
ಜೋಗದ ಚರ್ಚ್ ಮೌಂಟ್ ಏರಿಯಾದ ಅಚ್ಚಮ್ಮ ಎಂಬವರು ಪಾರ್ಶ್ವವಾಯುಗೆ ತುತ್ತಾಗಿದ್ದರು. ಆದರೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರಲು ಅವರ ಮನೆಗೆ ರಸ್ತೆಯೇ ಇಲ್ಲದ ಕಾರಣ ತಾಯಿಯನ್ನು ಉಳಿಸಿಕೊಳ್ಳಲು ಮಗ ಅದ್ದಮ್ ಡೋಲಿ ಕಟ್ಟಿ ಕಾಲುದಾರಿಯಲ್ಲಿ ತಾಯಿಯನ್ನು ಹೊತ್ತುಕೊಂಡು ಬಂದಿದ್ದಾನೆ.
ಇದನ್ನೂ ಓದಿ:ಮಂಗಳೂರು: ಪೊಲೀಸರಿಗೆ ನಿಂದಿಸಿದ ಆರೋಪಿಗಳು ಸೇರಿ 9 ಜನರ ಬಂಧನ;ವಿಚಾರಣೆ ವೇಳೆ ಸ್ಪೋಟಕ ಮಾಹಿತಿ
ಆದ್ದಮ್ ತಾಯಿಯನ್ನು ಸುಮಾರು ಒಂದು ಕಿಲೋಮೀಟರ್ ಹೊತ್ತುಕೊಂಡು ಬಂದಿದ್ದಾನೆ. ರಸ್ತೆ ಸಿಕ್ಕ ಬಳಿಕ ಅಲ್ಲಿಂದ ವಾಹನದಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ.
20 ಮನೆಗಳಿಗಿಲ್ಲ ರಸ್ತೆ
ಚರ್ಚ್ ಮೌಂಟ್ ಏರಿಯಾವು ಜೋಗ ಕಾರ್ಗಲ್ ಪಟ್ಟಣ ಪಂಚಾಯತಿಗೆ ಸೇರಿದೆ. ನಗರ ಪ್ರದೇಶದಲ್ಲಿದ್ದರೂ ಇದುವರೆಗೆ ಸ್ಥಳೀಯ ಆಡಳಿತ ಚರ್ಚ್‌ಮೌಂಟ್ ಏರಿಯಾಗೆ ರಸ್ತೆ ಸಂಪರ್ಕ ಕಲ್ಪಿಸಿಲ್ಲ. ಈ ಏರಿಯಾದಲ್ಲಿರುವ ಸುಮಾರು 20 ಮನೆಗಳಿಗೆ ಹೋಗಲು ರಸ್ತೆಯೇ ಇಲ್ಲ. ಹೀಗಾಗಿ ಯಾರಾದರೂ ಅನಾರೋಗ್ಯಕ್ಕೊಳಗಾದರೆ ಜೋಲಿ ಕಟ್ಟಿ ಹೊತ್ತುಕೊಂಡು ಬರಬೇಕಾದ ದುಸ್ಥಿತಿಯಿದೆ. ಇನ್ನಾದರೂ ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರ ಬೇಡಿಕೆ.