ಮಹಾನಗರ: ನಗರದ ಎಂ.ಜಿ. ರಸ್ತೆಯ ದೀಪಾ ಕಂಫರ್ಟ್ಸ್ ಹೊಟೇಲ್ ಸಭಾಂಗಣದಲ್ಲಿ ಫಿಲಾಟೆಲಿಕ್ ಡೀಲರ್ ಅಸೋಸಿಯೇಶನ್, ಇಂಡಿಯಾ ವತಿಯಿಂದ ಏರ್ಪಡಿಸಿರುವ ಅಂಚೆ ಚೀಟಿಗಳು, ಹಳೆಯ ನಾಣ್ಯ ಮತ್ತು ನೋಟುಗಳ ಪ್ರದರ್ಶನವು ಜನರ ಆಕರ್ಷಣೆಯ ತಾಣವಾಗಿದೆ.
ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹಿಸುವ ಹವ್ಯಾಸಿಗಳು ಮತ್ತು ಮಾರಾಟಗಾರರು ಸೇರಿಕೊಂಡು ಈ ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಿದ್ದು, ದೇಶಾದ್ಯಂತದ 20 ಮಂದಿ ಡೀಲರ್‌ಗಳು ದೇಶ ವಿದೇಶಗಳ ಅಂಚೆ ಚೀಟಿಗಳು, ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ.
ಪ್ರದರ್ಶನದ ಉದ್ಘಾಟನೆಯನ್ನು ಶುಕ್ರವಾರ ಫಿಲಾಟೆಲಿಕ್ ಡೀಲರ್ ಅಸೋಸಿಯೇಶನ್, ಇಂಡಿಯಾದ ಅಧ್ಯಕ್ಷ ಮಧುಕರ್ ಜಿಂಗನ್ ಅವರು ನೆರವೇರಿಸಿದರು. ಅಂಚೆ ಚೀಟಿಗಳು, ನಾಣ್ಯಗಳನ್ನು ಮತು ಕರೆನ್ಸಿಗಳನ್ನು ಸಂಗ್ರಹಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಢಿಸುವುದು ಹಾಗೂ ವಿಶೇಷವಾಗಿ ಯುವಕರನ್ನು ಈ ಹವ್ಯಾಸದಲಿಯಲ ತೊಡಗಿಸುವುದು ಈ ಪ್ರದರ್ಶನದ ಉದ್ದೇಶ ಎಂದವರು ಈ ಸಂದರ್ಭದಲ್ಲಿ ಹೇಳಿದರು.
ಚಿನ್ನ, ಬೆಳ್ಳಿ ಮತ್ತಿತರ ಲೋಹಗಳಿಂದ ಹಾಗೂ ರಬ್ಬರ್, ರೇಶ್ಮೆ, ಮೀನಿನ ಚರ್ಮ ಇತ್ಯಾದಿಗಳಿಂದ ತಯಾರಿಸಿದ ನಾಣ್ಯಗಳು, ವಿವಿಧ ಗಾತ್ರದ ಅಂಚೆ ಚೀಟಿಗಳು, ಪಾಂಡಿಚೇರಿಯಲ್ಲಿ ಫ್ರೆಂಚ್ ಆಡಳಿತದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಇಂಡೊ- ಫ್ರೆಂಚ್ ನಾಣ್ಯಗಳು, ಬ್ರಿಟಿಷ್ ಇಂಡಿಯಾ ನೋಟುಗಳು, ಗಾಂಧಿ ಅಂಚೆ ಚೀಟಿಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಈ ಪ್ರದರ್ಶನವು ಅ. 13 ರ ತನಕ ಇರುತ್ತದೆ ಎಂದು ಅಸೋಸಿಯೇಶನ್‌ನ ಉಪಾಧ್ಯಕ್ಷ ಎ.ವಿ.ಜಯಚಂದ್ರನ್ ತಿಳಿಸಿದರು.
ಮಂಗಳೂರಿನ ನಾಗರಾಜ ಶೇಟ್ ಅವರು ತನ್ನ ಬಳಿ 1835 ರಿಂದ 1943 ವರೆಗಿನ ಬೆಳ್ಳಿ ನಾಣ್ಯಗಳ ಸಂಗ್ರಹವಿದೆ. ನಾಣ್ಯಗಳ ಸಂಗ್ರಹದ ಜತೆಗೆ ಮಾರಾಟವನ್ನೂ ಮಾಡುತ್ತಿದ್ದೇನೆ ಎಂದು ಉದಯವಾಣಿ ಜತೆ ಮಾತನಾಡುತ್ತಾ ತಿಳಿಸಿದರು.
ಕೊಚ್ಚಿಯ ಜೊಸೆಫ್ ಡಿ’ಕೋತೊ ಮತ್ತು ಜೇಮ್ಸ್ ವಿ.ಪಿ. ಅವರು ಭಾರತ ಮಾತ್ರವಲ್ಲದೆ ಹಲವು ವಿದೇಶಗಳ ಅಂಚೆ ಚೀಟಿ, ನೋಟುಗಳು ಮತ್ತು ನಾಣ್ಯಗಳನ್ನು ಪ್ರದರ್ಶಿಸಿದ್ದಾರೆ. ಜಗತ್ತಿನ ಮೊದಲ ಪ್ಲಾಸ್ಟಿಕ್ ನಾಣ್ಯ, ವಿವಿಧ ರಾಜ ಮನೆತನದ ಮದುವೆಗಳ ಫೋಟೊಗಳು ಇವರ ಸಂಗ್ರಹದಲ್ಲಿದೆ.
ಬೆಂಗಳೂರಿನ ಸಂತೋಷ್ ಅವರ ಬಳಿ 107 ದೇಶಗಳ ನೋಟುಗಳ ಸಂಗ್ರಹವಿದೆ. ಚೆನ್ನೈನ ಅರವಮುತ್ತನ್ ಅವರ ಹವ್ಯಾಸ ವಿದೇಶಿ ನಾಣ್ಯ, ನೋಟು ಮತ್ತು ಅಂಚೆ ಚೀಟಿ ಸಂಗ್ರಹಕ್ಕೆ ಮೀಸಲಾಗಿದ್ದು, 250 ದೇಶಗಳ ನಾಣ್ಯಗಳು, 200 ದೇಶಗಳ ಕರೆನ್ಸಿ ನೋಟುಗಳು, 100 ದೇಶಗಳ ಗಾಂಧಿ ಕರೆನ್ಸಿಗಳ ಸಂಗ್ರಹವಿದೆ.