Advertisement

ಖುಷಿ ತಂದ ಕೃಷಿ ಮೇಳ; ಹೊಸ ತಳಿ, ಹೊಸ ತಂತ್ರಜ್ಞಾನ ಸಮಾಗಮ

08:54 PM Oct 20, 2019 | Sriram |

ಗುರುವಾರದಿಂದ ಬೆಂಗಳೂರು ಕೃಷಿ ವಿವಿ ಆವರಣದಲ್ಲಿ ಕೃಷಿ ಮೇಳ ಶುರುವಾಗುತ್ತಿದೆ. ಈ ಸಲ ಮೇಳಕ್ಕೆ ಬಂದ ರೈತರಿಗೆ ನಿರಾಸೆ ಅನ್ನೋದಿಲ್ಲ. ಏಕೆಂದರೆ, ಕೃಷಿ ವಿಶ್ವವಿದ್ಯಾಲಯ, ತಾನೇ ಆವಿಷ್ಕರಿಸಿ, ಪರೀಕ್ಷೆಗೆ ಒಳಪಡಿಸಿ, ಅದರಿಂದ ಒಳ್ಳೆ ಫ‌ಲಿತಾಂಶ ಕೊಟ್ಟ ಏಳು ತಳಿಗಳನ್ನು ರೈತರ ಕೈಗೆ ಇಡಲು ವಿವಿ ಸಿದ್ಧವಾಗಿ ನಿಂತಿದೆ. ಇದರ ಜೊತೆಗೆ ರೈತರಿಗೆ ದೊಡ್ಡ ತಲೆನೋವು ಬೆಳೆಗೆ ನೀರು ಹಾಯಿಸುವುದು. ಕರೆಂಟ್‌ನ ಕಣ್ಣಾ ಮುಚ್ಚಾಲೆಯಿಂದ ಎಲ್ಲಾ ಕೆಲಸ ಬಿಟ್ಟು ನೀರು ಕಟ್ಟುವುದೇ ದೊಡ್ಡ ಉದ್ಯೋಗವಾಗಿ ಬಿಟ್ಟಿದೆ. ಈ ಬಾರಿಯೇ ಮೇಳದಲ್ಲಿ ಈ ಸಮಸ್ಯೆಗೂ ಒಂದು ಪರಿಹಾರ ಇದೆ. ಪಂಪ್‌ಸೆಟ್‌ಗೆ ಪ್ರೋಗ್ರಾಮರ್‌ ಅಳವಡಿಸುವ ಹೊಸ ತಂತ್ರಜ್ಞಾನ ಆವಿಷ್ಕಾರ ಮಾಡಿ ಯಶಸ್ವಿಯಾಗಿದೆ. ರೈತರು ಬೆಳೆ ಎದುರಿಗೆ ನಿಂತೇ ನೀರು ಹಾಯಿಸಬೇಕು ಅಂತಿಲ್ಲ. ಯಾವಾಗ ಬೇಕಾದರೆ, ಹನಿ ಹನಿಯಾಗಿ ನೀರು ಹಾಯಿಸಬಹುದು. ಆದರೆ, ನೀರು ಎಷ್ಟು ಸಮಯದ ತನಕ ಹಾಯಿಸಬೇಕು ಅನ್ನೋದರ ಸಮಯ ಮಿತಿಯನ್ನು ನಮೂದು ಮಾಡಿ ಹೋದರೆ, ಟೈಮರ್‌ ಸಾಧನ ನೀರನ್ನು ಹಾಯಿಸುತ್ತದೆ. ಈ ರೀತಿ ಕಮಾಂಡ್‌ ಅನ್ನು ರೈತರು ಮೊಬೈಲ್‌ ಮೂಲಕವೂ ಕೊಡಬಹುದಂತೆ.

Advertisement

ತಳಿಗಳ ವಿಚಾರಕ್ಕೆ ಬಂದರೆ ಏಕದಳ, ದ್ವಿದಳ, ಎಣ್ಣೆಕಾಳು, ವಾಣಿಜ್ಯ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಹೊಸ ತಳಿಗಳನ್ನು ಆವಿಷ್ಕಾರ ಮಾಡಿ, ಮೇಳದಲ್ಲೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಏಕದಳದಲ್ಲಿ ಭತ್ತದ ಹೆಸರು- ಗಂಗಾವತಿ ಸೋನ (20594). ಇದರ ವಿಶೇಷ ಏನೆಂದರೆ, ಎಕರೆಗೆ 28 ಕ್ವಿಂಟಾಲ್‌ ಧಾನ್ಯ, ಮತ್ತು 34 ಕ್ವಿಂಟಾಲ್‌ ಹುಲ್ಲು ಕೊಡುವ ತಳಿ. 130ರಿಂದ 135 ದಿನಗಳ ಮಧ್ಯಮಾವಧಿಯ ಬೆಳೆಯಂತೆ. ಎಣ್ಣೆ ಕಾಳು ಬೆಳೆಯಲ್ಲಿ ಸೂರ್ಯಕಾಂತಿ (ಕೆಬಿಎಸ್‌ಎಚ್‌-78) ಇದೆ. ಎಕರೆಗೆ 8-10 ಕ್ವಿಂಟಾಲ್‌ ಇಳುವರಿ ಕೊಡುತ್ತದಂತೆ. ಇದರಿಂದ 350 ಕೆ.ಜಿ ಎಣ್ಣೆ ಸಿಗುತ್ತದೆ ಎನ್ನುತ್ತಾರೆ ವಿವಿಯ ಸಂಶೋಧಕ ಷಡಕ್ಷರಿ.

ವಾಣಿಜ್ಯ ಬೆಳೆಯಲ್ಲಿ ಕಬ್ಬಿನ ಹೊಸತಳಿ( ಸಿಓವಿಸಿ-16061) ಸಿದ್ಧವಾಗಿದೆ. ಎಕರೆಗೆ 65 ಟನ್‌ ಇಳುವರಿ ಕೊಡುವ ತಾಕತ್ತು ಇದಕ್ಕಿದೆಯಂತೆ. ಕೊಳೆ ರೋಗ ಇದರ ಬಳಿ ಸುಳಿಯುವುದಿಲ್ಲ. ಇನ್ನೊಂದು ತಳಿ ಸಿಓವಿಸಿ-16062 ಅಂತ. ಎಕರೆಗೆ 70 ಟನ್‌ ಇಳುವರಿಗೆ ಕೊಡುವ ಸಾಮರ್ಥ್ಯ ಇದೆಯಂತೆ. ಜೊತೆಗೆ ಬರದ ನಾಡಿಗೆ ಹೇಳಿ ಮಾಡಿಸಿದ ತಳಿ ಅಂತಾರೆ. ಅಲ್ಲದೇ, ಎಕರೆಗೆ ಐದು ಕ್ವಿಂಟಾಲ್‌ ಇಳುವರಿ ಕೊಡುವ ಉದ್ದು, ಲಾಲಾಬಾಗ್‌ ಮಧುರ ಎನ್ನುವ ಹಲಸು ಕೂಡ ಹೊಸ ತಳಿಯ ಪಟ್ಟಿಯಲ್ಲಿ ಇದೆ.
ಇವೆಲ್ಲವನ್ನೂ ಸುಖಾಸುಮ್ಮನೆ ಆವಿಷ್ಕಾರ ಮಾಡಿ ರೈತರ ಮುಂದೆ ಇಡುತ್ತಿಲ್ಲ. ಬದಲಾಗಿ, ದೊಡ್ಡಬಳ್ಳಾಪುರ, ಮಾಗಡಿ, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ, ಚಿಂತಾಮಣಿ, ಚಾಮರಾಜನಗರದ ಕೃಷಿ ವಿವಿ ಹಂತಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಕೆಲವೊಂದು, ಭತ್ತ, ಕಬ್ಬಿನ ತಳಿಗಳನ್ನು ಪ್ರಗತಿಪರ ರೈತರ ಜಮೀನಿನಲ್ಲಿ ಬೆಳೆಸಿ, ಉತ್ತಮ ಫ‌ಲಿತಾಂಶವನ್ನು ಗಳಿಸಿದ ನಂತರವೇ ರೈತರ ಮುಂದೆ ಇಡುತ್ತಿರುವುದು ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳುಚಿಯಾಗೆ ಡಿಮ್ಯಾಂಡ್‌;
ಚಿಯಾಗೆ ಈಗಾಗಲೇ ಹೆಚ್ಚಿನ ಬೇಡಿಕೆ ಶುರುವಾಗಿದೆ. ಹೀಗಾಗಿ, ಕೃಷಿ ವಿವಿ ರೈತರ ಹಿತದೃಷ್ಟಿಯಿಂದ ಹೊಸತಳಿಯೊಂದನ್ನು ಸಂಶೋಧಿಸಿದೆ. ಎಕರೆಗೆ ಮೂರು ಕ್ವಿಂಟಾಲ್‌ನಷ್ಟು ಇಳುವರಿ ನೀಡುತ್ತದಂತೆ. ವಿಶೇಷ ಎಂದರೆ, ಇದನ್ನು ದನ ಕರುಗಳನ್ನು ತಿನ್ನುವುದಿಲ್ಲ, ರೋಗ ರುಜಿನ ಕಡಿಮೆಯಂತೆ. ” ರೈತರಿಗೆ, ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 25 ಸಾವಿರ ಸಿಕ್ಕರೂ, 50ಸಾವಿರ ನಿವ್ವಳ ಲಾಭ ಸಿಗುತ್ತದೆ’ ಎನ್ನುತ್ತಾರೆ ಡಾ. ನಿರಂಜನಮೂರ್ತಿ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಗ್ರಾಹಕರು ಹೆಚ್ಚಿನ ಗಮನ ಕೊಡುತ್ತಿರುವುದರಿಂದ ಪ್ರೊಟೀನ್‌ ಯುಕ್ತ ತಳಿ ಇದು. ಬೊಜ್ಜನು ಕಂಟ್ರೋಲ್‌ ಮಾಡುವುದರಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆಯಂತೆ. ಹೀಗಾಗಿ, ಚಿಯಾ ತಳಿಗೆ ಬೇಡಿಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next