Advertisement

ಭ್ರಷ್ಟಾಚಾರ ಆರೋಪ ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಎಚ್ಚರಿಕೆ

12:15 PM Apr 12, 2022 | Team Udayavani |

ಕಲಬುರಗಿ: ಉತ್ತಮವಾಗಿ ಮುನ್ನೆಡೆಸಲಾಗುತ್ತಿದ್ದರೂ ವಿಶ್ವಕರ್ಮ ಸಮಾಜದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿರುವುದರಿಂದ ಸಮಾಜದ ಘನತೆಗೆ ಧಕ್ಕೆ ಉಂಟಾಗುತ್ತಿದ್ದು, ಭ್ರಷ್ಟಾಚಾರ ಆರೋಪ ಮಾಡಿರುವವರು ಕೂಡಲೇ ಆರೋಪವನ್ನು ಸಾಬೀತುಪಡಿಸಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕ್ಕದ್ದಮ್ಮೆ ಹೂಡಲಾಗುವುದು ಎಂದು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಾಣಿಕರಾವ ಪೋದ್ದಾರ ಎಚ್ಚರಿಕೆ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಗೆ ನಿರ್ಧರಿಸಲಾಗಿತ್ತು. ಆದರೆ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಚುನಾವಣೆಗೆ ಮುಂದಾಗಿದ್ದರಿಂದ ಸಮಾಜದ ಎಲ್ಲ ಹಿರಿಯರು ಅದನ್ನು ತಿರಸ್ಕರಿಸಿದ್ದರು. ಆದರೆ ಚುನಾವಣಾಧಿಕಾರಿ ಚಂದ್ರಶೇಖರ ನಿಯಮ ಬಾಹಿರವಾಗಿ ಚುನಾವಣೆ ನಡೆಸಿದ್ದರಿಂದ ಅದನ್ನು ತಿರಸ್ಕರಿಸಿ, ಹಿಂದಿನ ಪದಾಧಿಕಾರಿಗಳನ್ನೇ ಇದುವರೆಗೆ ಮುಂದುವರಿಸಲಾಗಿದೆ ಎಂದರು.

ಇಡೀ ಸಮಾಜ ಇದೀಗ ಒಗ್ಗಟ್ಟಾಗಿದೆ. ಆದರೆ ಕೆಲವರು ಸಮಾಜದಲ್ಲಿ 2.5 ಕೋಟಿ ರೂ. ಅವ್ಯವಹಾರವಾಗಿದೆ. ಚಿನ್ನ, ಬೆಳ್ಳಿ ಆಭರಣ ಗುಳುಂ ಆಗಿವೆ ಎನ್ನುತ್ತಿದ್ದಾರೆ. ಇಡೀ ಸಂತ್ರಸ್ತವಾಡಿಯ ಕಾಳಿಕಾ ದೇವಿಯ ದೇವಸ್ಥಾನ ಆಸ್ತಿಯೇ ಅಷ್ಟು ಇಲ್ಲ. ದೇವಿಯ ಎಲ್ಲ ಆಭರಣ ಸಂಸ್ಥೆಯಲ್ಲಿಯೇ ಇದ್ದು, ಆರು ಲಕ್ಷ ರೂ. ಬ್ಯಾಂಕ್‌ನಲ್ಲಿವೆ. ಸಂಸ್ಥೆ ಆರಂಭವಾದಾಗಿನಿಂದ ಇದುವರೆಗೆ ಪ್ರತಿ ವರ್ಷದ ಲೆಕ್ಕಪತ್ರಗಳನ್ನು ಇಡಲಾಗಿದೆ. ಆರೋಪದಲ್ಲಿ ಹುರುಳಿಲ್ಲ. ಆದ್ದರಿಂದ ಕೂಡಲೇ ಇದಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿ, ಶೀಘ್ರದಲ್ಲಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಮಾಜದ ಪ್ರಧಾನ ಕಾರ್ಯದರ್ಶಿ ದಶರಥ ಪೋದ್ದಾರ, ಉಪಾಧ್ಯಕ್ಷ ಮನೋಹರ ಪೋದ್ದಾರ, ಪ್ರಮುಖರಾದ ಕುಪ್ಪಣ್ಣ ಪೋದ್ದಾರ, ಸತೀಶ ಪತ್ತಾರ, ದತ್ತು ಬಡಿಗೇರ್‌ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next