ಕುಮಟಾ: ತಾಲೂಕು ಕೇಂದ್ರ ಗ್ರಂಥಾಲಯ ಪಟ್ಟಣದ ಮಣಕಿ ಮೈದಾನದ ಸಮೀಪದಲ್ಲಿದ್ದು, ಸುಮಾರು 2500 ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಆದರೆ ಕೆಲವೊಂದು ಸೌಲಭ್ಯ ಕೊರತೆಯಿದ್ದು, ಮುಂದುವರೆಯುತ್ತಿರುವ ಸಾಮಾಜಿಕ ಜಾಲತಾಣಗಳಿಂದ ಓದುಗರ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೂ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಆಗಮಿಸಿ,ಗ್ರಂಥಾಲಯದ ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲ ಗ್ರಂಥಾಲಯದ ಹಾಗೇ ಸಿಬ್ಬಂದಿ ಕೊರತೆಯನ್ನು ಕುಮಟಾ ಗ್ರಂಥಾಲಯವೂ ಎದುರಿಸುತ್ತಿದೆ.
ತಾಲೂಕಿನ ಬಹುಜನರ ಬೇಡಿಕೆಯಂತೆ 1978ರಲ್ಲಿ ಖಾಸಗಿ ಕಟ್ಟಡ ವೊಂದರಲ್ಲಿ ಆರಂಭ ವಾದ ಈ ಗ್ರಂಥಾಲಯವು ಬಹು ವರ್ಷ ಅಲ್ಲಿಯೇ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಜನ ಮನ್ನಣೆ ಗಳಿಸುವುದರ ಮೂಲಕ ಓದುಗರ ಸಂಖ್ಯೆಯನ್ನೂ ಸಹ ಹೆಚ್ಚಿಸಿಕೊಂಡಿತ್ತು. ಕುಮಟಾ ಜನತೆಯ ಆಶಯದಂತೆ 2007 ರಲ್ಲಿ ಪಟ್ಟಣದ ಮಣಕಿ ಮೈದಾನದ ಸಮೀಪದ ಸರ್ಕಾರಿ ಜಾಗದಲ್ಲಿ ನೂತನ ಸ್ವಂತ ಕಟ್ಟಡ ಹೊಂದಿತು. 2010 ರಲ್ಲಿ ಉದ್ಘಾಟನೆಯಾಗಿ ಓದುಗರಿಗೆ ಉತ್ತಮ ಸ್ಥಳಾವಕಾಶ ಕಲ್ಪಿಸಿತು. ಗ್ರಂಥಾಲಯ ವಿಭಾಗ ಆಧುನಿಕತೆಗೆ ತೆರದುಕೊಳ್ಳುತ್ತಿದ್ದು, 15 ದಿನದೊಳಗೆ ಡಿಜಿಟಿಲೀಕರಣಕ್ಕೆ ಒಳಪಡಲಿದೆ. ಸಧ್ಯದಲ್ಲೇ 2 ಕಂಪ್ಯೂಟರ್ ಮತ್ತು ಟ್ಯಾಬ್‌ಗಳು ಬರಲಿವೆ ಎಂದು ಗ್ರಂಥಾಲಯದ ಅಧಿಕಾರಿ ತಿಳಿಸಿದ್ದಾರೆ.
ಪುಸ್ತಕಗಳ ಸಂಖ್ಯೆ 35 ಸಾವಿರ : ಸರ್ಕಾರ ಮತ್ತು ಹಲವು ದಾನಿಗಳ ನೆರವಿನಿಂದ ಈ ಕೇಂದ್ರ ಗ್ರಂಥಾಲಯವು 35 ಸಾವಿರ ಪುಸ್ತಕ ಭಂಡಾರ ಹೊಂದಿದ್ದು, ನೂತನವಾಗಿ 5 ಸಾವಿರ ಪುಸ್ತಕಗಳು ಬಂದಿದ್ದು, ದಿನನಿತ್ಯ ಇಂಗ್ಲಿಷ್ ದಿನಪತ್ರಿಕೆ ಸೇರಿದಂತೆ ವಿವಿಧ ಭಾಷೆಗಳ 20 ದಿನಪತ್ರಿಕೆಗಳು ಗ್ರಂಥಾಲಯದಲ್ಲಿ ಓದುಗರಿಗೆ ಲಭ್ಯವಿದೆ. ಅಲ್ಲದೇ 1 ಸಾವಿರ ಮಕ್ಕಳ ನೀತಿಯುಕ್ತ ಕಥೆ ಪುಸ್ತಕಗಳು, ಸಾಮಾನ್ಯ ಜ್ಞಾನದ ಪುಸ್ತಕಗಳು ಗ್ರಂಥಾಲಯದಲ್ಲಿ ಲಭ್ಯವಿದ್ದು, ಹಲವು ಚಿಕ್ಕಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಸಿಬ್ಬಂದಿ ಕೊರತೆ: ಓದುಗರ ಸಂಖ್ಯೆಗನುಗುಣವಾಗಿ ಒಟ್ಟೂ 3 ಸಿಬ್ಬಂದಿ ಕಾರ್ಯ ನಿರ್ವಹಿಸಬೇಕಿದ್ದು, ಇಬ್ಬರು ಮಾತ್ರ ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯಕ ಗ್ರಂಥಾಲಯಾಧಿಕಾರಿ ಹೊನ್ನಾವರ ಮತ್ತು ಕುಮಟಾ ಎರಡೂ ತಾಲೂಕುಗಳ ಜವಾಬ್ದಾರಿ ನಿಭಾಯಿಸುವಂತಾಗಿದ್ದು, ಕಾಯಂ ಸಹಾಯಕ ಗ್ರಂಥಾಲಯಾಧಿಕಾರಿಯನ್ನು ಇಲಾಖೆ ಶೀಘ್ರ ನೇಮಿಸಬೇಕಾಗಿದೆ.
ಮೂಲ ಸೌಕರ್ಯಗಳಿಲ್ಲ : ಸಾಕಷ್ಟು ಸಂಖ್ಯೆಯಲ್ಲಿ ಗ್ರಂಥಾಲಯಕ್ಕೆ ಓದುಗರು ಆಗಮಿಸುತ್ತಾರೆ. ಆದರೆ ನೂತನಗ್ರಂಥಾಲಯದ ನಿರ್ಮಾಣಕ್ಕೂ ಪೂರ್ವದಲ್ಲೇ ನಿರ್ಧರಿಸಿದಂತೆ ಗ್ರಂಥಾಲಯದ ಮೇಲ್ಭಾಗದ ಕಟ್ಟಡ 10 ವರ್ಷಗಳು ಕಳೆದರೂ ಸಂಪೂರ್ಣ ನಿರ್ಮಾಣಗೊಂಡಿಲ್ಲ. ಇನ್ನು ಮಳೆಗಾಲದಲ್ಲಿ ಕಟ್ಟಡದ ಕೆಲ ಭಾಗಗಳಲ್ಲಿ ಸೋರತೊಡಗಿದೆ. ಅಲ್ಲದೇ, ಗ್ರಂಥಾಲಯದ ಒಳಭಾಗದ 3 ಫ್ಯಾನ್‌ಗಳ ದುರಸ್ತಿಯಾಗಬೇಕಿದ್ದು, ಓದುಗರ ಸಂಖ್ಯೆಗನುಗಣವಾಗಿ ಆಸನದ ವ್ಯವಸ್ಥೆಯೂ ಆಗಬೇಕಿದೆ.
ಶಿಥಿಲಾವಸ್ಥೆಯ ಕಂಪೌಂಡ್ : ಗ್ರಂಥಾಲಯದ ಕಟ್ಟಡ ನಿರ್ಮಾಣದ ಸಮಯದಲ್ಲಿ ನಿರ್ಮಿಸಿದ ಕಂಪೌಂಡ್ ಬಿಸಿಲು ಮಳೆಯಿಂದ ಶಿಥಿಲಾವಸ್ಥೆಗೆ ತಲುಪಿದ್ದು, ಇದನ್ನು ಮರು ದುರಸ್ತಿಗೊಳಿಸುವ ಕಾರ್ಯ ನಡೆದರೆ ಒಳ ಭಾಗದಲ್ಲಿ ವಿವಿಧ ಹೂ ಗಿಡಗಳನ್ನು ನೆಡಬಹುದು ಎಂಬುದು ಓದುಗರ ಅಭಿಪ್ರಾಯವಾಗಿದೆ.
ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಹಲವು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಗ್ರಂಥಾಲಯದಲ್ಲಿನ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದು ಬೇಸರದ ಸಂಗತಿ. ಓದುಗರ ಬೇಡಿಕೆಯ ಮೇರೆಗೆ ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಯಲಿದೆ.
–ಗಣೇಶ ಹೆಗಡೆ, ಸಹಾಯಕ ಗ್ರಂಥಾಲಯಾಧಿಕಾರಿ
-ಕೆ. ದಿನೇಶ ಗಾಂವ್ಕರ