ವಿಜಯಪುರ : ಜಿಲ್ಲೆಯಲ್ಲಿ ಎರಡು ನದಿಗಳು ಪ್ರವಾಹ ಸೃಷ್ಟಿಸಿದ್ದು, ಸಾವಿರಾರು ಜನರನ್ನು ಸಂತ್ರಸ್ತರನ್ನಾಗಿಸಿದೆ. ನೆರೆ ಬಾಧಿತರ ನೆರವಿನ ಕರ್ತವ್ಯದಲ್ಲಿರುವ ವಿಜಯಪುರ ಜಿಲ್ಲಾಧಿಕಾರಿ ತಮ್ಮ ಅಜ್ಜ ಮೃತಪಟ್ಟರೂ ಅಂತ್ಯಕ್ರಿಯೆಗೂ ಹೋಗದೆ ಕರ್ತವ್ಯ ನಿಷ್ಠೆ ಮೆರೆಯುವ ಮೂಲಕ ಅಜ್ಜನಿಗೆ ಅಮೂಲ್ಯ ಶ್ತದ್ಧಾಂಜಲಿ ಸಲ್ಲಿಸಿ, ಮಾದರಿ ಕಾರ್ಯ ಮಾಡಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರ ಅಜ್ಜ ಬೆಳಗಾವಿ ಜಿಲ್ಲೆಯಲ್ಲಿ ಹಳ್ಳಿಯಲ್ಲಿ ಶುಕ್ರವಾರವೇ ನಿಧನರಾಗಿದ್ದರು.
ಈ ಸಂದರ್ಭದಲ್ಲಿ ಕೃಷ್ಣಾ ನದಿ ತೀತದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದಕ್ಕಾಗಿ ಮುದ್ದೇಬಿಹಾಳ ತಾಲೂಕಿನಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದರು. ಹೀಗಾಗಿ ಅಜ್ಜನ ಅಂತ್ಯಕ್ರಿಯೆಗೆ ಹೋಗಲೇ ಇಲ್ಲ.
ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಅಧಿಕಾರಿ ಅಧಿಕಾರಿಗಳಿಗೆ ರಜೆ ರಹಿತ ಕರ್ತವ್ಯಕ್ಕೆ ಸೂಚಿಸಲಾಗಿದೆ. ಮತ್ತೊಂದೆಡೆ ಸಂತ್ರಸ್ತರು ಎಲ್ಲ ಕಳೆದುಕೊಂಡು ಸಂಕಷ್ಟದಲ್ಲಿ ನೆಲೆ ಇಲ್ಲದೇ ನಿಂತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಅಜ್ಜ ಎಂ .ಎಚ್. ನಾಯ್ಕರ ಅಗಲಿಕೆಗೆ ನೊಂದವರ ಕಣ್ಣೀರು ಒರೆಸುವ ಮೂಲಕ ಬಾಲ್ಯದಲ್ಲಿ ತಮ್ಮನ್ನು ಎತ್ತಿ-ಆಡಿ ಬೆಳೆಸಿದ ಅಜ್ಜನಿಗೆ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿದ್ದಾರೆ.