ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ತೆಗೆಯಲು ಕಾರಣವಾಗಿದ್ದ ಪೆನ್ ಅದು. ಅದು ಇದ್ದಕ್ಕಿದ್ದಂತೆಯೇ ತರಗತಿಯಲ್ಲಿ ಕಣ್ಮರೆಯಾಯಿತು. ನನಗೆ ಆಗ ಶಾಲೆಯಲ್ಲಿದ್ದ ಶಿಕ್ಷಕರು, ವಿದ್ಯಾರ್ಥಿಗಳ ಮೇಲೆಲ್ಲಾ ಅನುಮಾನ ಶುರುವಾಯಿತು…
23 ವರ್ಷಗಳ ಹಿಂದಿನ ಮಾತು. ನಾನು 7ನೇ ತರಗತಿಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದೆನಾದ್ರೂ ನಮ್ಮಪ್ಪನವರಿಗೆ ಅದ್ಯಾಕೋ ಅವು ಕಡಿಮೆ ಅನ್ಸಿದೊ, ಇಲ್ಲಾ ನನ್ನ ಕೆಪಾಸಿಟಿ ಅದಕ್ಕೂ ಮೀರಿ ಇದೆ ಅಂತಾ “ತಪ್ಪಾಗಿ’ ಭಾವಿಸಿದ್ರೋ ಗೊತ್ತಿಲ್ಲ. ಹೈಸ್ಕೂಲ್‌ಗೆ ಮಾತ್ರ “ಸರ್ಕಾರಿ ಶಾಲೆ ಬೇಡ. ಕಾನ್ವೆಂಟ್‌ಗೆ ಹಾಕಿದ್ರೆ ಸ್ವಲ್ಪ ಶಿಸ್ತು ಕಲೀತಾನೆ’ ಅಂತ ನನ್ನೆದುರಿಗೆ ಒಮ್ಮೆ, ಕುಟುಂಬದವರ ಮುಂದೆ ಮತ್ತೂಮ್ಮೆ ಹೇಳಿ ತಂದು ಸಿರಾದಲ್ಲಿ ಸೇರಿಸಿದ್ರು. ಆ ಕಾನ್ವೆಂಟ್‌ನಲ್ಲೋ, ನಾವು ಇದುವರೆಗೂ ಓದಿದ್ದ ವಾತಾವರಣಕ್ಕೆ ವಿರುದ್ಧವಾದ ಪರಿಸರ. ಅವರು ಹೇಳಿದ್ದನ್ನೇ ನಾವು ಮಾಡಬೇಕು. ಅಲ್ಲಿ ನಮ್ಮ ಇಷ್ಟ ಅನ್ನೋದಿರಲಿಲ್ಲ, ಬದಲಿಗೆ ಅವರಿಷ್ಟವೇ ನಮ್ಮ ಇಷ್ಟ ಆಗಬೇಕಿತ್ತು.
ಪ್ರಾರಂಭದಲ್ಲಿಯೇ ನಮಗೆ ಅರುಣ್ ಗೋಲ್ಡ್ ನೋಟ್‌ಬುಕ್ ಹಾಗೂ ಹೀರೋ (ಇಂಕ್) ಪೆನ್‌ನಲ್ಲೇ ಬರೆಯಬೇಕೆಂಬ ಅಲಿಖೀತ ನಿಯಮವೊಂದನ್ನು ಹೇರಿದ್ದರು. ಅವರ ನಿಯಮಗಳಿಂದ ವಿನಾಯಿತಿ ಸಿಗೋದಿಲ್ಲ ಅಂತ ಅರಿವಾದಾಗ ಅವುಗಳನ್ನೇ ಖರೀದಿಸಿದ್ವಿ. ಪೆನ್ನಿಗೆ ಕಪ್ಪು ಇಂಕನ್ನೇ ಬಳಸಬೇಕಾಗಿತ್ತು. ಎಲ್ಲರೂ ಅದನ್ನೇ ಬಳಸುವಾಗ ನಾನು ಮಾತ್ರ ಏಕೆ ರೋದಿಸಬೇಕೆಂದು ಸುಮ್ಮನೇ ಪಾಲಿಸಿದೆ. ಅದರಲ್ಲಿ ಬರೆಯುವುದನ್ನು ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡೆ. ಕಾಲ ಕಳೆದಂತೆ ಆ ಹೀರೋ ಪೆನ್ನು ನನಗೆ ಎಷ್ಟು ಆಪ್ತವಾಯಿತೆಂದರೆ ಯಾರಾದರೂ ಬರೆಯಲು ಕೇಳಿದರೆ ಅದನ್ನು ಕ್ಷಣಕಾಲ ಕೊಡಲೂ ನಾನು ಹಿಂಜರಿಯುತ್ತಿದ್ದೆ. ನನ್ನ ಕ್ಲೋಸ್ ಫ್ರೆಂಡುಗಳಿಗೂ ಕೊಡುತ್ತಿರಲಿಲ್ಲ!
ಶಾಲೆಯಲ್ಲಿ ನನಗೆ ಜೊತೆಯಾಗಿದ್ದ ಆ ಹೀರೋ ಪೆನ್ನನ್ನು ದೊಡ್ಡವನಾದ ಮೇಲೂ ಜತನದಿಂದ ಕಾಪಾಡಿಕೊಂಡು ಬಂದಿದ್ದೆ. ಮುಂದೆ 2002ರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಶಿಕ್ಷಕನಾಗಿ ಆಯ್ಕೆಯಾದ ಮೇಲೂ ನಾನು ಅದೇ ಪೆನ್ನಿನಲ್ಲಿಯೇ ನನ್ನ ದಿನಚರಿ ಬರೆಯುತ್ತಿದ್ದೆ. ಯಾವುದೇ ಬೇರೆಯ ಪೆನ್ ಬಳಸುತ್ತಿರಲಿಲ್ಲ. ಅಷ್ಟೇ ಅಲ್ಲ, ನೀಲಿ ಕಲರ್‌ನಲ್ಲಿ ಬರೆಯುತ್ತಲೇ ಇರಲಿಲ್ಲ. ಸಹೋದ್ಯೋಗಿ ಶಿಕ್ಷಕರೆಲ್ಲಾ ನನ್ನ ಮತ್ತು ಆ ಪೆನ್ನಿನ ನಂಟಿನ ಬಗ್ಗೆ ತಿಳಿದು ಆಶ್ಚರ್ಯಪಡುತ್ತಿದ್ದರು. ತರಗತಿಯಲ್ಲಿ ಸಮಯ ಸಿಕ್ಕಾಗಲೆಲ್ಲಾ ನನ್ನ ವಿದ್ಯಾರ್ಥಿಗಳಿಗೂ ಅದರ ಬಗ್ಗೆ ಹೇಳುತ್ತಿದ್ದೆ.
ಅದೊಂದು ದಿನ ಇದ್ದಕ್ಕಿದ್ದಂತೆ ಶಾಲೆಯಲ್ಲಿಟ್ಟಿದ್ದ ಪೆನ್ನು ಕಾಣೆಯಾಯ್ತು. ಎಷ್ಟು ಹುಡುಕಾಡಿದರೂ ಪತ್ತೆಯಾಗಲಿಲ್ಲ. ಪೆನ್ನು ಕೊಡೋದಿಲ್ಲ ಎಂಬ ಕಾರಣಕ್ಕಾಗಿಯೇ ಶಿಕ್ಷಕರ್ಯಾರಾದರೂ ಎತ್ತಿಟ್ಟಿರಬೇಕೆಂಬ ಗುಮಾನಿಯಿಂದ ಎಲ್ಲರಲ್ಲೂ ವಿಚಾರಿಸಿದೆ. ಅವರೆಲ್ಲರೂ “ನೀವು ಪೆನ್ನನ್ನು ಕಳೆದುಕೊಂಡಿರಾ?’ ಎಂದು ಅಚ್ಚರಿ ಪಟ್ಟರೇ ವಿನಾ ಪೆನ್ನಿನ ಸುಳಿವು ಸಿಗಲಿಲ್ಲ. ಕೊನೇ ಪ್ರಯತ್ನವೆಂಬಂತೆ ಶಾಲಾ ಕೊಠಡಿಯೊಳಗೆ ಹೋಗಿ ಯಾರಾದ್ರೂ ನನ್ನ ಹೀರೋ ಪೆನ್ ತಗೊಂಡ್ರೇನೋ ಎಂದು ಮಕ್ಕಳನ್ನೂ ಕೇಳಿದ್ದಾಯ್ತು.
ಒಂದಿಬ್ಬರು ತರಲೆ ವಿದ್ಯಾರ್ಥಿಗಳನ್ನು ನಿಲ್ಲಿಸಿ, ಬೈದು, ಎಚ್ಚರಿಸಿದ್ದೂ ಆಯ್ತು. ಅವರಿಂದಲೂ ನನ್ನ ಪೆನ್ನಿನ ಸುಳಿವು ಸಿಗಲಿಲ್ಲ. ಹೈಸ್ಕೂಲಿನಲ್ಲಿದ್ದಾಗಿನಿಂದಲೂ ಬಳಸುತ್ತಿದ್ದ ಪೆನ್ನು ಅದು! ಅಲ್ಲಿಂದ ಬೇರೆ ಪೆನ್ನಿನಲ್ಲಿ ಪರೀಕ್ಷೆ ಬರೆದ ನೆನಪೇ ನನಗಿರಲಿಲ್ಲ. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಫಸ್ಟ್ ಕ್ಲಾಸ್ ಮಾರ್ಕ್ಸ್ ಕೊಡಿಸಿದ್ದ ಪೆನ್ನದು. ಅದರ ಬಗ್ಗೆ ಎಲ್ಲರ ಬಳಿ ಹೇಳಿದ್ದೇ ತಪ್ಪಾಯ್ತು! ಯಾರೋ ಬೇಕೆಂದೇ ಅಪಹರಿಸಿದ್ದಾರೆ ಎಂದೆಲ್ಲಾ ಚಡಪಡಿಸುತ್ತಾ ಹುಸಿ ಮುನಿಸಿನಿಂದಾಗಿ ಕರ್ತವ್ಯ ಮುಗಿಸಿ ಮನೆಗೆ ಬಂದೆ. ಏನಾಶ್ಚರ್ಯ!
ನನ್ನ ಹೀರೋ ಪೆನ್ನು ತನ್ನ ಮಾಮೂಲಿ ಸ್ಥಳದಲ್ಲಿ ಆರಾಮವಾಗಿ ವಿಶ್ರಾಂತಿ ಪಡೆಯುತ್ತಿತ್ತು. ಸುಮ್ಮನೆ ಎಲ್ಲರ ಮೇಲೂ ರೇಗಾಡಿದೆನಲ್ಲ ಅನ್ನಿಸಿದಾಗ ನಗು ಬಂತು. ಮರುದಿನ ಶಾಲೆಯಲ್ಲಿ ವಿಷಯ ತಿಳಿಸಿ, “ನಿನ್ನೆ ವಿನಾಕಾರಣ ಎಲ್ಲರನ್ನೂ ಅನುಮಾನದಿಂದ ನೋಡಿದೆ. ದಯವಿಟ್ಟು ಕ್ಷಮಿಸಿ’ ಎಂದೆ ಪೆನ್ನು ನನ್ನ ಬಳಿಯೇ ಇರುವುದು ತಿಳಿದು ಅವರೂ ಖುಷಿಪಟ್ಟರು. ದಶಕಗಳ ಕಾಲ ನನ್ನ ಒಡನಾಡಿಯಾಗಿದ್ದ ಆ ಪೆನ್ನು ಈಗಲೂ ನನ್ನ ಬಳಿಯಿದೆ. ಅದನ್ನು ದಿನಕ್ಕೊಮ್ಮೆ ನೋಡದಿದ್ದರೂ ನನಗೆ ನಿದ್ರೆ ಬರೋದಿಲ್ಲ.
* ಪ. ನಾ. ಹಳ್ಳಿ ಹರೀಶ್ ಕುಮಾರ್