ಹದಿನೈದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೃಹಸಾಲದ ಮೇಲಿನ ಬಡ್ಡಿದರ 8%ಕ್ಕಿಂತ ಕೆಳಗೆ ಇಳಿದಿದೆ. ಬ್ಯಾಂಕಿಂಗ್ ವಿಶ್ಲೇಷಕರ ಮಾತುಗಳನ್ನೇ ನಂಬುವುದಾದರೆ, ಅದು ಇನ್ನೂ ಕಡಿಮೆಯಾಗುವುದನ್ನು ನಿರೀಕ್ಷಿಸಬಹುದು. ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 30 ಲಕ್ಷದವರೆಗಿನ ಗೃಹ ಸಾಲದ ಮೇಲಿನ ಬಡ್ಡಿದರವನ್ನು 7.95%ಗೆ ಇಳಿಸಿದೆ. ಜನವರಿಯಿಂದಲೇ ಇದು ಜಾರಿಗೆ ಬಂದಿದೆ. ಅಲ್ಲದೆ, ಮಹಿಳಾ ಗ್ರಾಹಕರಿಗೆ ಇನ್ನೂ 0.05% ಕಡಿಮೆ ಬಡ್ಡಿದರವನ್ನು ನಿಗದಿ ಪಡಿಸಲಾಗಿದೆ. ಈ ಇಳಿಕೆ 2003- 2004ರಲ್ಲಿ ಗೃಹಸಾಲದ ಮೇಲಿನ ಬಡ್ಡಿದರ 7.75 ಇರುವುದನ್ನು ನೆನಪಿಸುತ್ತದೆ. ಹಣದುಬ್ಬರವನ್ನು ನಿಯಂತ್ರಿಸಿದರೆ ಈ ಬಡ್ಡಿದರ ಇನ್ನೂ ಇಳಿಯಬಹುದು ಎನ್ನುವುದು ಬ್ಯಾಂಕುಗಳ ಲೆಕ್ಕಾಚಾರ.
ಎಸ್‌ಬಿಐ ದೊಡ್ಡಣ್ಣ
ಬ್ಯಾಂಕಿಂಗ್ ವಲಯದಲ್ಲಿ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾವನ್ನು “ಬ್ಯಾಂಕುಗಳ ದೊಡ್ಡಣ್ಣ’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ, ಬ್ಯಾಂಕಿಂಗ್‌ನಲ್ಲಿ ಯಾವುದೇ ಹೊಸ ಯೋಜನೆಗಳು, ಅವಿಷ್ಕಾರಗಳು, ಗ್ರಾಹಕಸ್ನೇಹಿ ಯೋಜನೆಗಳು, ಸೌಲಭ್ಯಗಳು, ವಿನಾಯಿತಿಗಳು ಮತ್ತು ಸುಧಾರಣೆಗಳನ್ನು ಮೊದಲು ಹುಟ್ಟು ಹಾಕುವುದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎನ್ನುವ ಮಾತು ಬ್ಯಾಂಕಿಂಗ್ ವಲಯದಲ್ಲಿದೆ. ನಂತರ, ಆ ಸುಧಾರಣೆಗಳನ್ನು ಇತರೆ ಬ್ಯಾಂಕುಗಳು ಕೊಂಚ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳುತ್ತವೆ. ಬಿಜಿನೆಸ್‌ನಲ್ಲಿ ಉಳಿಯಲು, ಮುಂದೆ ಇತರೆ ಬ್ಯಾಂಕುಗಳೂ ಎಸ್.ಬಿ.ಐ ಅನ್ನು ಅನುಸರಿಸಿ ತಾವೂ ಗೃಹಸಾಲದ ಮೇಲಿನ ಬಡ್ಡಿದರವನ್ನು ಇಳಿಸಲೇಬೇಕಾಗುತ್ತದೆ.
ಬಡ್ಡಿದರ ಇನ್ನೂ ಕಡಿಮೆಯಾಗಬಹುದೇ?
ಮುಂದಿನ ದಿನಗಳಲ್ಲಿ ಬಡ್ಡಿದರ ಇನ್ನೂ ಕೆಳಗಿಳಿಯಲಿದೆ ಎನ್ನುವ ಮಾತನ್ನು ಬ್ಯಾಂಕುಗಳು ನಿರಾಕರಿಸುವುದಿಲ್ಲ. ಆದರೆ, ಇದು ಹಣದುಬ್ಬರ, ಬ್ಯಾಂಕುಗಳ ಅಂತರಿಕ ಅರ್ಥಿಕ ಸ್ಥಿತಿ, ಬ್ಯಾಂಕುಗಳ ಠೇವಣಿ ವೆಚ್ಚ (funds cost),, ರಿಸರ್ವ್ ಬ್ಯಾಂಕ್‌ನಿಂದ ರೆಪೋದರ ಇಳಿಸುವಿಕೆಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಠೇವಣಿ ಮೇಲಿನ ಬಡ್ಡಿದರ ಇಳಿಯುತ್ತಿರುವುದರಿಂದ, ಬ್ಯಾಂಕುಗಳಿಗೆcost of fundsಕಡಿಮೆ ಆಗುತ್ತಿದೆ. ಈ ಇಳಿಕೆಯನ್ನು ಗೃಹಸಾಲದ ಮೇಲಿನ ಬಡ್ಡಿ ದರಕ್ಕೆ ವರ್ಗಾಯಿಸಬಹುದು ಎನ್ನುವ ಲೆಕ್ಕಾಚಾರವೂ ಇದೆ. ರೆಪೋ ದರ ಸದ್ಯ 5.15% ಇದ್ದು, ಇದು ಇನ್ನೂ ಕಡಿಮೆಯಾಗುವ (4.75% ) ಸಾಧ್ಯತೆ ಇದೆ. ಹಾಗೆ ಸಂಭವಿಸಿದರೆ, ಹಣದುಬ್ಬರವೂ ರಿಸರ್ವ್ ಬ್ಯಾಂಕ್‌ನ ನಿರೀಕ್ಷೆ ಮಟ್ಟದಲ್ಲಿ ಇರುವುದರಿಂದ ಮತ್ತು ಒಟ್ಟಾರೆ ಅರ್ಥಿಕ ಪರಿಸ್ಥಿತಿ ನಿಸ್ತೇಜವಾಗಿ, ಗೃಹಸಾಲದ ಮೇಲಿನ ಬಡ್ಡಿದರ ಮುಂದಿನ ದಿನಗಳಲ್ಲಿ ಇನ್ನೂ ಇಳಿಕೆ ಕಾಣಬಹುದು ಎನ್ನುವ ಆಭಿಪ್ರಾಯ ಬ್ಯಾಂಕಿಂಗ್ ವಲಯದಲ್ಲಿ ಕೇಳಿಬರುತ್ತಿದೆ.
ಹೌಸಿಂಗ್ ಸೆಕ್ಟರ್‌ಗೆ ಪ್ರಾಮುಖ್ಯತೆ
ನವೆಂಬರ್ ತಿಂಗಳಿನಲ್ಲಿ ಬ್ಯಾಂಕುಗಳಲ್ಲಿ ಠೇವಣಿ ಬೆಳವಣಿಗೆ 10% ಇದ್ದರೆ ಸಾಲ ವಿಲೇವಾರಿ 7% ಎಂದು ಹೇಳಲಾಗುತ್ತಿದ್ದು, ಸಾಲ ನೀಡಿಕೆಯನ್ನು ಹೆಚ್ಚಿಸುವ ಅನಿವಾರ್ಯತೆಯಲ್ಲಿ ಗೃಹಸಾಲದ ಮೇಲಿನ ಬಡ್ಡಿ ದರ ಇಳಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಕಾರಣ ಏನೇ ಇರಲಿ, ಗೃಹ ಸಾಲ ಗ್ರಾಹಕರು ಸ್ವಲ್ಪ ನೆಮ್ಮದಿ ಕಾಣುವಂತಾಗಿದೆ. ಮುಂದಿನ ಹಣಕಾಸು ನೀತಿ ಪರಾಮರ್ಶೆ ಫೆಬ್ರವರಿಯಲ್ಲಿ ನಡೆಯುತ್ತಿದ್ದು, ರೆಪೋ ದರ 0.25ರ ಆಧಾರದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ಫೆಬ್ರವರಿ 1ರಂದು ದೇಶದ 2020- 21ರ ಆಯವ್ಯಯ ಮಂಡನೆಯಾಗಲಿದ್ದು, ಹೌಸಿಂಗ್ ಸೆಕ್ಟರ್‌ಗೆ ವಿಶೇಷ ಗಮನ ನೀಡುವ ಸೂಚನೆಗಳು ಕಾಣುತ್ತಿದ್ದು, ಇದು ಸಾಧ್ಯವಾದರೆ ಬಡ್ಡಿದರ ಇನ್ನೂ ಕೆಳಗಿಳಿಯುವುದನ್ನು ನಿರೀಕ್ಷಿಸಬಹುದು.
Related Articles
ರಿಯಲ್ ಎಸ್ಟೇಟ್ ಚೇತರಿಕೆ
15 ವರ್ಷಗಳ ಹಿಂದೆ, ಅಂದರೆ 2003- 04ರಲ್ಲಿ ಗೃಹಸಾಲದ ಮೇಲಿನ ಬಡ್ಡಿದರ ಇದೇ ರೀತಿ ಕೆಳಗಿಳಿದಿತ್ತು. ಆ ದಿನಗಳಲ್ಲಿ ದೇಶದಲ್ಲಿ ಗೃಹ ನಿರ್ಮಾಣ ಚಟುವಟಿಕೆ ಉತ್ತುಂಗಕ್ಕೇರಲು (housing boom)ಇದೇ ಕಾರಣವಾಗಿತ್ತು. ಇದೀಗ ಗೃಹಸಾಲದ ಮೇಲಿನ ಬಡ್ಡಿದರದ ಇಳಿಕೆಯುಂದಾಗಿ, ತಲೆಯ ಮೇಲೆ ಸೂರಿನ ಕನಸು ಕಾಣುತ್ತಿರುವವರಿಗೆ ಸೂರಿನಾಶ್ರಯವನ್ನು ನೀಡಬಹುದು ಎನ್ನುವ ಆಶಯವನ್ನು ರಿಯಲ್ ಎಸ್ಟೇಟ್ ವ್ಯಕ್ತಪಡಿಸುತ್ತಿದೆ. ಅರ್ಥಿಕ ಹಿನ್ನಡೆಯ ಕಾರಣ ಮಂದಗತಿಯಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮದ ಚೇತರಿಕೆಗೂ ಇದು ಕಾರಣವಾಗಬಹುದು. ಬ್ಯಾಂಕಿಂಗ್ ತಜ್ಞರು ಮತ್ತು ವಿಶ್ಲೇಷಕರ ದೃಷ್ಟಿಯಲ್ಲಿ 7.95% ಬಡ್ಡಿದರ affordable ಸರ್ವರಿಗೂ ಕೈಗೆಟುಕುವ)ಬಡ್ಡಿದರ. ಇನ್ನೂ ಕಡಿಮೆ ಬಡ್ಡಿದರವನ್ನು ಗ್ರಾಹಕರು ನಿರೀಕ್ಷಿಸಬಹುದು. ಅದರೆ, ಬ್ಯಾಂಕುಗಳಿಗೂ ಒಂದು ಇತಿ- ಮಿತಿ ಮತ್ತು ಲೆಕ್ಕಾಚಾರ ಇರುತ್ತದೆ.
ಗೃಹಸಾಲದ ಮೇಲಿನ ಬಡ್ಡಿದರ ಬ್ರೇಕ್‌ಡೌನ್
ರಿಸರ್ವ್ ಬ್ಯಾಂಕ್‌ನ ರೆಪೋ ದರ – 5.15%
ಬ್ಯಾಂಕಿನspread– 2.65%
ಪ್ರೀಮಿಯಂ 0.15%
ಒಟ್ಟು- 7.95%
– ರಮಾನಂದ ಶರ್ಮಾ