ಮುತ್ತಳ್ಳಿ ತುಂಬಾ ಚೆನ್ನಾಗಿದೆ. ಆದರೆ ಈಗ ತುಂಬಾ ಬಿಸಿಲು. ಮಳೆ ಬಿದ್ದರೆ ಚೆನ್ನಾಗಿರುತ್ತೆ ಅಂತ ಅಮ್ಮಮ್ಮ-ಅಜ್ಜ ಹೇಳಿಕೊಳ್ಳುತ್ತಿದ್ದರು. ಮುತ್ತಳ್ಳಿ ತೋಟಕ್ಕೆ ಹತ್ತಿರವಿದೆಯಂತೆ. ಅಲ್ಲಿ ತುಂಬಾ ಸೊಳ್ಳೆ. ನೀನು ಕೊಟ್ಟ ಓಡೊಮಸ್ ಹಚ್ಚಿಕೊಳ್ಳುತ್ತಿದ್ದೇನೆ. ಮುತ್ತಳ್ಳಿಯಲ್ಲಿ ನನಗೆ ತುಂಬಾ ಇಷ್ಟವಾದುದೆಂದರೆ ತುಂಗಾ ನದಿ.
Advertisement
ಅಜ್ಜ ನನ್ನನ್ನು ಪ್ರತಿದಿನ ಹೊಳೆಗೆ ಈಜಲು ಕರೆದುಕೊಂಡು ಹೋಗುತ್ತಿದ್ದಾರೆ. ಅಜ್ಜ ಎರಡೂ ಕೈಗಳನ್ನು ಮುಂದೆ ಚಾಚಿ, ನನ್ನನ್ನು ಅವುಗಳ ಮೇಲೆ ಮಲಗಿಸಿಕೊಂಡು ಕೈ-ಕಾಲು ಆಡಿಸುವಂತೆ ಹೇಳುತ್ತಾರೆ. ಅಜ್ಜ ನೀರಲ್ಲಿ ನಡೆದು ಮುಂದೆ ಮುಂದೆ ಹೋಗುತ್ತಾರೆ. ಈಜುತ್ತ ನಾನೇ ಮುಂದೆ ಹೋಗುತ್ತಿದ್ದೇನೆಂದು ಅಜ್ಜ ಹೇಳುತ್ತಾರೆ. ಮೊದಲ ದಿನವಂತೂ ಕಿವಿ, ಬಾಯಿ, ಮೂಗಿಗೆಲ್ಲ ನೀರು ಹೋಗಿ ಸಿಕ್ಕಾಪಟ್ಟೆ ಕೆಮ್ಮಿದೆ. ಅಜ್ಜ ಮೃದುವಾಗಿ ನನ್ನ ತಲೆಯ ಮೇಲೆ ತಟ್ಟಿದರು.
Related Articles
Advertisement
ಸುಮಾರು ಹನ್ನೊಂದು ಗಂಟೆಗೆ ಅಮ್ಮಮ್ಮ ತಟ್ಟೆಯಲ್ಲಿ ಹೂವು-ಹಣ್ಣು-ಕಾಯಿ ಇಟ್ಟುಕೊಂಡು ಜಾತ್ರೆ ನಡೆಯುವ ಗುಡಿಗೆ ಹೋಗೋಣ ಅಂದರು. ಉತ್ಸಾಹದಿಂದ “ಹೂಂ’ ಅಂದೆ. ನನ್ನ ಕೈಗೆ ಹತ್ತು ರೂಪಾಯಿ ಇಟ್ಟು ಹುಂಡಿಗೆ ಹಾಕಲು ಹೇಳಿದರು. ಎರಡು ಬಾಳೆ ಹಣ್ಣನ್ನು ಕೈಯಲ್ಲಿಡುತ್ತಾ “ಜಾತ್ರೆಯಲ್ಲಿ ರಥ ಎಳೆದಾಗ ಎಲ್ಲರೂ ರಥಕ್ಕೆ ಬಾಳೆಹಣ್ಣು ಎಸೆಯುತ್ತಾರೆ. ನೀನೂ ಎಸಿ’ಎಂದರು. ನನಗಂತೂ ತುಂಬಾ ಖುಷಿ ಆಯಿತು.
ಅಮ್ಮಮ್ಮ ನಡೆದುಕೊಂಡು ಹೊರಟರು. ನಾನೂ ಹಿಂಬಾಲಿಸಿದೆ. ರಸ್ತೆ ಭಯಂಕರ ಸುಡುತ್ತಿತ್ತು. ನನ್ನ ಕಾಲು ಸುಟ್ಟಿತು. ಜೋರಾಗಿ ಚೀರಿದೆ. ಅಜ್ಜ ಓಡಿಬಂದು ನನ್ನನ್ನು ಎತ್ತಿಕೊಂಡರು.ನಾವು ಮೂವರೂ ಗುಡಿಯ ಕಡೆ ಹೊರೆಟೆವು. “ಅಜ್ಜ ರಥ ಹೇಗಿರುತ್ತೆ? ಎಷ್ಟು ಎತ್ತರ ಇರತ್ತೆ?’ ಅಂತೆಲ್ಲ ಪ್ರಶ್ನೆಗಳನ್ನು ಕೇಳಿದೆ. ಅಜ್ಜನ ಹೆಗಲೇರಿ ಕುಳಿತಿದ್ದ ನಂಗೆ ದೂರದಿಂದಲೇ ರಥ ಕಾಣಿಸಿತು. “ಅಬ್ಬ ಎಷ್ಟು ಎತ್ತರ!’ ಎಂದು ಉದ್ಗಾರ ತೆಗೆದೆ. ತೆಂಗಿನ ಮರ ನೋಡುವ ಹಾಗೆ ನೋಡಬೇಕೆನಿಸಿತು. ಅಷ್ಟು ಎತ್ತರ! ರಥದ ಮೇಲೆ ಬಣ್ಣ ಬಣ್ಣದ ಬಾವುಟಗಳು. ರಥದ ಕಂಬಗಳಿಗೆ ಹಸಿರು ಬಾಳೆಕಂದುಗಳು. ಮಾವಿನ ಸೊಪ್ಪು. ರಥದಿಂದ ಇಳಿ ಬಿದ್ದ ಕೆಂಪು-ಬಿಳಿ- ಹಳದಿ ಹೂವಿನ ಹಾರ ಗಳಂತೂ ತುಂಬಾ ಚೆನ್ನಾಗಿದ್ದವು. ರಥದ ಮುಂಭಾಗಕ್ಕೆ ಎರಡು ಮರದ ಕುದುರೆ ಗೊಂಬೆಗಳನ್ನು ಕಟ್ಟಲಾಗಿತ್ತು. “ಅಜ್ಜ, ಕುದುರೆ!’ಎಂದು ಕೂಗಿದೆ. ಮುತ್ತಳ್ಳಿಯ ಎಲ್ಲ ಮನೆಗಳಿಂದ ಹೂವು-ಹಣ್ಣಿನ ತಟ್ಟೆಗಳು ಬಂದವು. ರಥಕ್ಕೆ ಪೂಜೆಯಾಯ್ತು. ಎಲ್ಲ ಕಡೆಯೂ ಜನವೋ ಜನ! ಎಲ್ಲರೂ ಜೋರಾಗಿ ಮಾತಾಡುತ್ತಿದ್ದರು. ತಾಯಂದಿರೆಲ್ಲ ಬಣ್ಣ ಬಣ್ಣದ ಸೀರೆ ಉಟ್ಟು ಒಂದೆಡೆ ನಿಂತಿದ್ದರು. ಮಕ್ಕಳು ಚೀರುತ್ತಿದ್ದವು. ಕೆಲವು ಬಾಲಕರು, ನಾವೂ ರಥ ಎಳೆಯುತ್ತೇವೆಂದು ರಥದ ಬಳಿಗೆ ಓಡುತ್ತಿದ್ದರು. ಓಲಗದವರು ಸ್ವರ ಹಾಕುತ್ತಿದ್ದರು. ಪಕ್ಕದ ಮೈದಾನದಲ್ಲಿ ಅನೇಕ ಆಕರ್ಷಕ ಆಟಿಕೆಗಳಿದ್ದವು. ಸಂಜೆ ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆಂದರು ಅಜ್ಜ. “ಹೋ’ ಎನ್ನುತ್ತ ರಥವನ್ನು ಎಳೆಯಲಾಯಿತು. ರಥದ ದೊಡ್ಡ ಗಾಲಿಗಳನ್ನು ಊರಿನ ಅಣ್ಣಂದಿರು ತಳ್ಳುತ್ತಿದ್ದರು. ಎಲ್ಲ ಕಡೆಗಳಿಂದಲೂ ಜನ ಬಾಳೆಹಣ್ಣುಗಳನ್ನು ಎಸೆದರು. ನಾನೂ ಎಸೆದೆ. ಅಜ್ಜ ನನ್ನನ್ನು ಭುಜದ ಮೇಲೆ ಕೂರಿಸಿಕೊಂಡೇ ಗುಂಪಿನಲ್ಲಿ ಮುನ್ನಡೆದರು. ಎಲ್ಲರೂ ಒಟ್ಟಿಗೆ ನಡೆದಾಗ ಧೂಳು ಮೇಲೆದ್ದಿತು. “ಹೋ’ ಎನ್ನುತ್ತ ಎಲ್ಲರೂ ಸಡಗರದಿಂದ ರಥವನ್ನು ಎಳೆದರು. ಅಮ್ಮ, ರಥ ಎಳೆದ ನಂತರ ನಾವೆಲ್ಲ ಸಾಲಿನಲ್ಲಿ ಕುಳಿತೆವು. ನಮಗೆಲ್ಲ ಸಿಹಿಯಾದ ಪಾನಕ ಕೊಟ್ಟರು. ಕೋಸಂಬರಿ ಕೊಟ್ಟರು. ಬೇಲದ ಹಣ್ಣಿನ ಪಾನಕವಂತೆ ಅಮ್ಮ! ತುಂಬಾ ಚೆನ್ನಾಗಿತ್ತು. ನೀನು ಅದನ್ನು ಮಾಡಿಯೇ ಇಲ್ಲ. ಈ ಬಾರಿ ಅಜ್ಜ ಬೇಲದ ಹಣ್ಣನ್ನು ಕಳಿಸಿ ಕೊಡ್ತಾರಂತೆ. ಊಟಕ್ಕೂ ಅಷ್ಟೆ. ನಾವೆಲ್ಲ ಗುಡಿಯ ಜಗುಲಿಯಲ್ಲಿ ಸಾಲಾಗಿ ಊಟಕ್ಕೆ ಕುಳಿತೆವು. ಮುತ್ತಳ್ಳಿಯ ತಾಯಂದಿರೇ ಸೇರಿಕೊಂಡು ಜಾತ್ರೆಗೆ ಬರುವವರಿಗೆ ಅಡುಗೆ ಮಾಡ್ತಾರಂತೆ! ಅಜ್ಜ ಸಂಜೆ ನನ್ನನ್ನು ಗುಡಿಯ ಪಕ್ಕದ ಮೈದಾನಕ್ಕೆ ಕರೆದುಕೊಂಡು ಹೋದರು. ಅಲ್ಲಿ ಗೊಂಬೆ ಕುದುರೆ ಸವಾರಿ ಇತ್ತು. ಪೆಟ್ಟಿಗೆಯಲ್ಲಿ ಸಿನಿಮಾ ತೋರಿಸಿದರು. ಆಕಾಶದೆತ್ತರಕ್ಕೆ ಒಯ್ಯುವ ಎತ್ತರದ ಚಕ್ರಗಳಿದ್ದವು. ಬೆಂಡು ಬತ್ತಾಸನ್ನೂ ತಿಂದೆ. ಅಜ್ಜ ಸುಮಾರು ಆಟಿಕೆಗಳನ್ನೂ ಕೊಡಿಸಿದರು. ಸುಸ್ತಾಗಿ ರಾತ್ರಿ ಮನೆಗೆ ಬಂದೆವು. ನಾ ಹೇಳಿದ ಹಾಗೆ ಇಷ್ಟೆಲ್ಲ ಬರೆದುಕೊಟ್ಟರು ಅಜ್ಜ. ಮುಂದಿನ ಬಾರಿ ಅಮ್ಮನನ್ನೂ ಕರೆದು ಕೊಂಡು ಬಾ ಎಂದರು ಅಮ್ಮಮ್ಮ. ಬರ್ತೀಯ ತಾನೆ?
ಐ ಲೌ ಯೂ ಅಮ್ಮ…
– ನಿನ್ನ ಪ್ರೀತಿಯ ಧೃತಿ
— ಮತ್ತೂರು ಸುಬ್ಬಣ್ಣ