ಕೆಜಿಎಫ್: ಬಿಜಿಎಂಎಲ್ ಮುಚ್ಚಿ ಇಂದಿಗೆ 20 ವರ್ಷ ದಾಟಿದ ಹಿನ್ನೆಲೆಯಲ್ಲಿ ಕೆಜಿಎಫ್ ಕರಾಳ ದಿನ ಒಕ್ಕೂಟದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪೈಲೈಟ್ಸ್ ವೃತ್ತದಲ್ಲಿ ಕಪ್ಪು ಬಟ್ಟೆ ಧರಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಿಜಿಎಂಎಲ್‌ನಲ್ಲಿ ಇನ್ನೂ ಚಿನ್ನದ ನಿಕ್ಷೇಪಗಳು ಇವೆ. ಅದನ್ನು ಪ್ರಯೋಗಾಲಯಗಳು ಪುಷ್ಟೀಕರಿಸಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತ್ರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸೈನೈಡ್ ದಿಬ್ಬದಲ್ಲಿ ಚಿನ್ನದ ನಿಕ್ಷೇಪ ಇದೆ. ಭೂಮಿಯಲ್ಲಿ ಚಿನ್ನದ ನಿಕ್ಷೇಪ ಇನ್ನೂ ಇದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿದರೆ ಚಿನ್ನ ತೆಗೆಯಬಹುದು. ಗಣಿ ಕಾರ್ಮಿಕರ ಪರ ಚುನಾವಣೆ ಸಮಯದಲ್ಲಿ ಮಾತನಾಡುವ ಜನಪ್ರತಿನಿಧಿಗಳು, ಕಾಲೋನಿಗಳಲ್ಲಿರುವ ಮೈನಿಂಗ್ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಯೋಚನೆ ಮಾಡುತ್ತಿಲ್ಲ. ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಅವರಿಗೇ ಇನ್ನೂ ನೀಡಿಲ್ಲ. ಬಾಕಿ ಹಣವನ್ನು ವಿತರಣೆ ಮಾಡಿಲ್ಲ. ಬದಲಿ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕೆಜಿಎಫ್ ನಾಗರಿಕರಿಗೆ ಕರಾಳ ದಿನವಾಗಿದೆ. ಇಪ್ಪತ್ತು ವರ್ಷ ದಾಟಿದರೂ ಒಂದು ನಿರ್ಧಾರ ತೆಗೆದುಕೊಂಡು ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರಗಳ ಕೈಯಲ್ಲಿ ಸಾಧ್ಯವಾಗಿಲ್ಲ. ಈಗ ನಮ್ಮ ರಾಜ್ಯದವರೇ ಗಣಿ ಸಚಿವರಾಗಿದ್ದಾರೆ. ಅವರಾದರೂಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಲಾಯಿತು.
ಒಕ್ಕೂಟದ ಪದಾಧಿಕಾರಿಗಳಾದ ರಮೇಶ್ ಲೋಗನಾಥನ್, ಸುರೇಶ್ ಬಾಬುಯ, ಅರಿ, ಸಂತೋಷ್, ರಂಜಿತ್, ಚರಣ್, ಜನಾಧಿಕಾರದ ರಾಮಮೂರ್ತಿ ಮತ್ತು ರಾಜಪ್ಪ ಹಾಜರಿದ್ದರು.