Advertisement

ಬರ-ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ

09:43 AM Aug 17, 2019 | Team Udayavani |

ಬೆಂಗಳೂರು: ಭೀಕರ ಬರಗಾಲದ ಜತೆಗೆ ಭಾರೀ ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಧೈರ್ಯ ತುಂಬಿರುವ ಸಿಎಂ ಯಡಿಯೂರಪ್ಪ, ಸರ್ಕಾರ ಮತ್ತು ಇಡೀ ರಾಜ್ಯ ನಿಮ್ಮ ಜತೆಯಲ್ಲಿದೆ ಎಂದು ಭರವಸೆಯ ಮಾತುಗಳನ್ನು ಹೇಳಿದ್ದಾರೆ.

Advertisement

ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಜನರ ಸಂಕಷ್ಟಗಳಿಗೆ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಲು ಸರ್ಕಾರ ಯಾವ ಪ್ರಯತ್ನವನ್ನೂ ಕೈಬಿಟ್ಟಿಲ್ಲ ಎಂಬುದನ್ನು ಆತ್ಮಸಾಕ್ಷಿಯಾಗಿ ಹೇಳಬಲ್ಲೆ’ ಎಂದರು.

ಅರ್ಧ ರಾಜ್ಯ ಜಲಪ್ರಳಯಕ್ಕೊಳಗಾಗಿದೆ. 22 ಜಿಲ್ಲೆಗಳ ವ್ಯಾಪ್ತಿಯಲ್ಲಿ 103 ತಾಲೂಕುಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದ ನಡುವೆ 5 ಜಿಲ್ಲೆಗಳ ಬಹುತೇಕ ಭಾಗದಲ್ಲಿ ಮಳೆಯಾಗದೆ ಬರದ ಪರಿಸ್ಥಿತಿ ಉಂಟಾಗಿದೆ. ಪರಿಸ್ಥಿತಿ ನಿಭಾಯಿಸುವುದು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವುದು ಸರ್ಕಾರದ ಆದ್ಯತೆ ಎಂದು ಯಡಿಯೂರಪ್ಪ ಹೇಳಿದರು.

ಕೇಂದ್ರದ ನೆರವು: ಕೇಂದ್ರ ಸಚಿವರಾದ ಅಮಿತ್‌ ಷಾ, ನಿರ್ಮಲಾ ಸೀತಾರಾಮನ್‌, ಡಿ.ವಿ. ಸದಾನಂದಗೌಡ, ಪ್ರಲ್ಹಾದ ಜೋಷಿ, ಸುರೇಶ್‌ ಅಂಗಡಿ ಸೇರಿ ಸಂಸದರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಂದ್ರದಿಂದ ಅಗತ್ಯ ನೆರವು ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ಹಾನಿಯ ಅಂದಾಜು ಮಾಡಲಾಗುತ್ತಿದ್ದು, ಬಳಿಕ ಕೇಂದ್ರದಿಂದ ಹೆಚ್ಚಿನ ನೆರವು ಕೋರಲಾಗುವುದು ಎಂದಿದ್ದಾರೆ.

ಮೀನುಗಾರರಿಗೆ ಒತ್ತಾಸೆಯಾಗಿ ನಿಲ್ಲಲಿದೆ: ಕಡಲ್ಕೊರೆತದಿಂದ ಕರಾವಳಿ ಭಾಗದ ಹಲವು ಮೀನುಗಾರರು ಮನೆ ಕಳೆದುಕೊಂಡಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವೂ ನೆರವಿಗೆ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಂತೆಯೇ ರಾಜ್ಯ ಸರ್ಕಾರವೂ ಕಡಲ ಕೊರೆತದಿಂದ ಸಂಕಷ್ಟಕ್ಕೊಳಗಾದ ಮೀನುಗಾರರಿಗೆ ಒತ್ತಾಸೆಯಾಗಿ ನಿಲ್ಲಲಿದೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.

Advertisement

ಅಧಿಕಾರಿಗಳು, ಶಾಸಕರು, ಸಂಸದರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಮಾನವೀಯ ಕಾಳಜಿಯುಳ್ಳ ಜನ ಆಪತ್ಬಾಂಧವರಂತೆ ನೆರವು ನೀಡಿ ಸಂತ್ರಸ್ತರನ್ನು ಕಾಪಾಡಿದ್ದಾರೆ. ವಿರೋಧ ಪಕ್ಷಗಳ ನಾಯಕರೂ ಪರಿಹಾರ ಕ್ರಮಗಳ ಬಗ್ಗೆ ಸಮಾಧಾನ ವ್ಯಕ್ತಪಡಿಸಿ ಸಹಕರಿಸಿದ್ದಾರೆ.
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next