ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ಯಾರಧ್ದೋ ದೇಹಕ್ಕೆ ನಟಿ ರಶ್ಮಿಕಾ ಮಂದಣ್ಮ ಅವರ ಮುಖದ ಫೋಟೋ ಹಾಕಿ ಸೃಷ್ಟಿಸಲಾದ ನಕಲಿ ವೀಡಿಯೋ ಭಾರೀ ಸುದ್ದಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಡೀಪ್‌ಫೇಕ್ ತಂತ್ರಜ್ಞಾನದ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಏನಿದು ಡೀಪ್ ಫೇಕ್?: ಡೀಪ್‌ಫೇಕ್ ಎನ್ನುವುದು ಅಂತರ್ಜಾಲ ಜಗತ್ತಿನಲ್ಲಿ ಬಳಕೆಯಲ್ಲಿರುವ ಒಂದು ತಂತ್ರಜ್ಞಾನ. ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಬಹಳ ಸೂಕ್ಷ್ಮವಾಗಿ, ಆಳವಾಗಿ ಮಾಡುವ ಮೋಸ. ಅದು ಚಿತ್ರ, ವೀಡಿಯೋ, ಆಡಿಯೋ ರೂಪದಲ್ಲಿರಬಹುದು. ಆ ಧ್ವನಿ, ದೃಶ್ಯ, ಚಿತ್ರಗಳು ನಿಮ್ಮದೇ ಎನಿಸುವಂತೆ ಎಐ ತಂತ್ರಜ್ಞಾನ ಬಳಸಿಕೊಂಡು ಸಿದ್ಧಪಡಿಸಲಾಗುತ್ತದೆ.
ಹೇಗೆ ನಡೆಯುತ್ತದೆ ವಂಚನೆ?: ಸಾಮಾಜಿಕ ತಾಣಗಳು, ಅಂತರ್ಜಾಲವನ್ನು ಬಳಸಿಕೊಂಡು ನಿರ್ದಿಷ್ಟ ವ್ಯಕ್ತಿಯ ಮಾಹಿತಿಯನ್ನು ವಂಚಕರು ಸಂಗ್ರಹಿಸುತ್ತಾರೆ. ಅವರ ಗುರುತು, ಮುಖಭಾವ, ಅಭಿವ್ಯಕ್ತಿ ಕ್ರಮ, ಧ್ವನಿ ಮಾದರಿ, ಇನ್ನಿತರ ಲಕ್ಷಣಗಳನ್ನು ಪಡೆದುಕೊಳ್ಳುತ್ತಾರೆ. ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯಾಪಕವಾಗಿ ಮೋಸ ಮಾಡಲಾಗುತ್ತಿದೆ. ಚೀನೀ ಉದ್ಯಮಿಯೊಬ್ಬರಿಗೆ ಅವರ ಗೆಳೆಯನಂತೆ ಡೀಪ್‌ಫೇಕ್ ಬಳಸಿ ವೀಡಿಯೋ ಕರೆ ಮಾಡಲಾಗಿದೆ. ಅನಂತರ 5 ಕೋಟಿ ರೂ. ವಂಚಿಸಲಾಗಿದೆ. ಕೇರಳದ ನಿವೃತ್ತ ಸರಕಾರಿ ಉದ್ಯಮಿಯೊಬ್ಬರಿಗೂ ಹೀಗೆಯೇ ಮಾಡಿ ಜುಲೈಯಲ್ಲಿ 40,000 ರೂ. ವಂಚಿಸಲಾಗಿದೆ!
ತಂತ್ರಜ್ಞಾನದ ದುರ್ಬಳಕೆ: ಮಕ್ಕಳ ಅಶ್ಲೀಲ ವೀಡಿಯೋ ಸೃಷ್ಟಿ, ಪೋರ್ನ್ ವೀಡಿಯೋಗಳಲ್ಲಿ ಸೆಲೆಬ್ರಿಟಿಗಳ ಮುಖ ಬಳಕೆ, ಪ್ರತೀ ಕಾರ ತೀರಿಸಲು ಅಶ್ಲೀಲ ವೀಡಿಯೋ ಸೃಷ್ಟಿ, ಸುಳ್ಳು ಸುದ್ದಿ, ಚುಡಾಯಿಸುವಿಕೆ ಮತ್ತು ಹಣಕಾಸು ವಂಚನೆಗೆ ಡೀಪ್‌ಫೇಕ್ ತಂತ್ರಜ್ಞಾನ ಬಳಸಿಕೊಂಡಿರುವಂಥ ಹಲವು ಪ್ರಕರಣಗಳು ವರದಿಯಾಗಿವೆ.
ಪರಿಹಾರಗಳೇನು?
ಸಾಮಾಜಿಕ ತಾಣಗಳಲ್ಲಿ ಅತಿಯಾಗಿ ಚಿತ್ರಗಳನ್ನು, ವೀಡಿಯೋಗಳನ್ನು, ಖಾಸಗಿ ಮಾಹಿತಿಯನ್ನು ಹಾಕದಿರುವುದು ಕ್ಷೇಮ.
ಸೆಟ್ಟಿಂಗ್ಸ್‌ಗೆ ಹೋಗಿ ಎಲ್ಲರೂ ನಿಮ್ಮ ಖಾತೆಯನ್ನು ಗಮನಿಸಲು ಸಾಧ್ಯವಾಗದಂತೆ ಮಾಡಿಕೊಳ್ಳಬೇಕು.
ಖಾತೆಗಳ ಪಾಸ್‌ವರ್ಡ್‌ಗಳನ್ನು ಸುಭದ್ರಗೊಳಿಸಿ ಕೊಳ್ಳಬೇಕು. ಸರಕಾರ ಇದಕ್ಕೊಂದು ದಾರಿ ಕಂಡುಹಿಡಿಯುವರೆಗೆ ಇರುವ ಮಾರ್ಗ ಇದೊಂದೇ.