ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಜಿಲ್ಲಾಡಳಿತ ಶಾಶ್ವತ ಕಾಲು ಸಂಕಗಳ ನಿರ್ಮಾಣಕ್ಕಾಗಿಯೇ ವಿಶೇಷ ಆದ್ಯತೆ ನೀಡಿ, ಕಾರ್ಯಪ್ರವೃತ್ತರಾದರೂ ಇನ್ನೂ ಕೂಡ ಕೆಲವೊಂದು ಊರುಗಳಲ್ಲಿ ಮತ್ತದೇ ಕಾಲು ಸಂಕದ ಸಂಕಷ್ಟ ಮಾತ್ರ ತಪ್ಪಿಲ್ಲ. ಯಡಮೊಗೆಯ ರಾಂಪಯ್ಯಜೆಡ್ಡು ಇದಕ್ಕೊಂದು ನಿದರ್ಶನ.
ಬೈಂದೂರು ವಿಧಾನಸಭಾ ಕ್ಷೇತ್ರದ, ಕುಂದಾಪುರ ತಾಲೂಕಿನ ಯಡಮೊಗೆ ಗ್ರಾಮದ ಮುಖ್ಯ ರಸ್ತೆಯಿಂದ ತುಸು ದೂರದಲ್ಲಿರುವ ರಾಂಪಯ್ಯಜೆಡ್ಡುವಿಗೆ ಕಿರು ಸೇತುವೆ ಬೇಡಿಕೆ ಈ ವರ್ಷವೂ ಈಡೇರಿಲ್ಲ. ಇಲ್ಲಿನ ಶಾಲಾ ಮಕ್ಕಳು, ಜನರು 50 ವರ್ಷಗಳಿಗೂ ಹೆಚ್ಚು ಕಾಲದಿಂದ ತಾವೇ ನಿರ್ಮಿಸುವ ಅಡಕೆ ಮರದ ಅಪಾಯಕಾರಿ ಕಾಲು ಸಂಕದಲ್ಲೇ ಸಂಚರಿಸುತ್ತಿದ್ದಾರೆ.
ಮರದ ಕಾಲು ಸಂಕವೇ ಆಸರೆ
ಯಡಮೊಗೆ ಗ್ರಾಮದ ರಾಂಪಯ್ಯಜೆಡ್ಡುವಿನಲ್ಲಿ ಕಮಲಶಿಲೆ ಕಡೆಗೆ ಹರಿಯುವ ಕುಬಾj ನದಿಗೆ ಅಡ್ಡಲಾಗಿ ಊರವರೇ ತಾತ್ಕಾಲಿಕವಾಗಿ ಅನೇಕ ವರ್ಷಗಳಿಂದ ಮರದ ಕಾಲು ಸಂಕ ನಿರ್ಮಿಸಿ, ನದಿ ದಾಟುತ್ತಾರೆ. ಪಶ್ಚಿಮಘಟ್ಟದಿಂದ ರಭಸವಾಗಿ ಕುಬಾj ನದಿ ಹರಿದು ಬರುತ್ತಿದ್ದು, ಎಳೆಯ ಮಕ್ಕಳು ಸುಮಾರು 50 ಅಡಿಗೂ ಉದ್ದದ ಮರದ ಕಾಲು ಸಂಕದಲ್ಲಿ ಜೀವ ಭಯದಲ್ಲೇ ಸಂಚರಿಸುತ್ತಾರೆ. ಅಡಿಕೆ ಮರದ ತುಂಡುಗಳನ್ನು ಉದ್ದಕ್ಕೆ ಮೂರು ಹಂತಗಳಲ್ಲಿ ಹಾಕಿ ಅದಕ್ಕೆ ಅಡ್ಡವಾಗಿ ಮರದ ಸಲಕೆಗಳನ್ನಿಟ್ಟು ಹಗ್ಗದಿಂದ ಬಿಗಿಯುತ್ತಾರೆ. ಎರಡು ಕಡೆ ಅಡಿಕೆ ದಬ್ಬೆಯಿಂದ ಗಾರ್ಡ್ ನಂತೆ ಕಟ್ಟುತ್ತಾರೆ. ಸುಮಾರು 30 ಅಡಿಗಳಷ್ಟು ಆಳವಿದ್ದರೆ, ಉದ್ದ ಸುಮಾರು 50 ಅಡಿಗೂ ಹೆಚ್ಚು ಇರುತ್ತದೆ.
ಕಿರು ಸೇತುವೆಗೆ ಬೇಡಿಕೆ
ಕುಬಾj ನದಿಗೆ ಕಿರುಸೇತುವೆ ಅಥವಾ ಡ್ಯಾಂ ಕಮ್ ಬ್ರಿಡ್ಜ್ ಆಗಬೇಕು ಅನ್ನುವ ಬೇಡಿಕೆಯಿದೆ. ಕಳೆದ ವರ್ಷ ಎಲ್ಲ ಕಾಲುಸಂಕಗಳ ಗುರುತಿಸುವ ಕಾರ್ಯ ನಡೆದಿದ್ದು, ಅದರಲ್ಲಿ ರಾಂಪಯ್ಯ ಜೆಡ್ಡು ಸಹ ಒಂದಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ 10 ಲಕ್ಷ ರೂ. ಅನುದಾನದಲ್ಲಿ ಶಾಶ್ವತ ಕಾಲು ಸಂಕ ನಿರ್ಮಾಣದ ಪ್ರಸ್ತಾವವಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎನ್ನುತ್ತಾರೆ.
Related Articles
50+
ಮನೆಗಳು
ರಾಂಪಯ್ಯ ಜೆಡ್ಡುವಿನಲ್ಲಿ ಸುಮಾರು 50ಕ್ಕೂ ಮಿಕ್ಕಿ ಮನೆಗಳಿವೆ. ಈ ಇಲ್ಲಿ ಕಿರು ಸೇತುವೆಯಾದರೆ ನೂರಾರು ಮಂದಿಗೆ ಅನುಕೂಲವಾಗುತ್ತದೆ. ಇನ್ನು ನಿತ್ಯ ರಾಂಪಯ್ಯಜೆಡ್ಡುವಿನಿಂದ ಯಡಮೊಗೆ ಮತ್ತಿತರ ಕಡೆಗಳಿಗೆ ಶಾಲೆಗೆ ಹೋಗುವ 25 ಮಂದಿ ಮಕ್ಕಳಿದ್ದಾರೆ. ಅನಾರೋಗ್ಯ ಕಾಣಿಸಿಕೊಂಡರೂ ಈ ಕಾಲುಸಂಕದಲ್ಲೇ ಹೊಳೆ ದಾಟಬೇಕು. ದಿನ ನಿತ್ಯದ ವಸ್ತುಗಳನ್ನು ತರಲು ಇದರಲ್ಲಿಯೇ ತೆರಳಬೇಕು. ಈ ಕಾಲು ಸಂಕದಲ್ಲಿ 5 ನಿಮಿಷದ ದಾರಿಯಾದರೆ, ಇನ್ನೊಂದು ದಾರಿಯಿದ್ದು ವಾಹನದಲ್ಲಿ ಸುತ್ತು ಬಳಸಿ, 3-4 ಕಿ.ಮೀ. ದೂರವಾಗುತ್ತದೆ. ಮಳೆಗಾಲದ 4 ತಿಂಗಳು ನಮಗೆ ಭಾರೀ ಕಷ್ಟದ ಕಾಲ. ಸಿಕ್ಕಾಪಟ್ಟೆ ಹೆದರಿಕೆಯಾಗುತ್ತದೆ ಎನ್ನುವುದಾಗಿ ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ಜನ.
ಇನ್ನೆಷ್ಟು ವರ್ಷ ಕಾಯಬೇಕು?
ಕಾಲು ಸಂಕ ಬೇಡ. ಕಿರು ಸೇತುವೆ ಹಾಗೂ ಕಿಂಡಿ ಅಣೆಕಟ್ಟು ಆದರೆ ಸಂಚಾರ ಹಾಗೂ ನೀರಿಗೂ ಅನುಕೂಲವಾಗುತ್ತದೆ. ನಾವು ಅನೇಕ ವರ್ಷಗಳಿಂದ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಕೊಡುತ್ತಿದ್ದೇವೆ. ಚುನಾವಣೆ ಬಂದಾಗ ಮಾಡಿಕೊಡುವ ಭರವಸೆ ಕೊಟ್ಟು ಹೋಗುತ್ತಾರೆ. ಆಮೇಲೆ ಈ ಕಡೆ ಬರುವುದೇ ಇಲ್ಲ. ಇನ್ನು ಎಷ್ಟು ವರ್ಷ ಬೇಕೋ ಗೊತ್ತಿಲ್ಲ.
– ರಮೇಶ್ ರಾಂಪಯ್ಯಜೆಡ್ಡು, ಸ್ಥಳೀಯರು
ಪರಿಶೀಲಿಸಿ ಕ್ರಮ
ಯಡಮೊಗೆಯ ರಾಂಪಯ್ಯಜೆಡ್ಡು ಕಾಲು ಸಂಕದ ಸಂಕಷ್ಟದ ಬಗ್ಗೆ ಕೂಡಲೇ ಪರಿಶೀಲನೆ ನಡೆಸಿ, ಅಲ್ಲಿನ ಜನರ ಬೇಡಿಕೆ ಈಡೇರಿಸುವ ಸಂಬಂಧ ಅಗತ್ಯ ಕ್ರಮಕೈಗೊಳ್ಳಲಾಗುವುದು.
– ರಶ್ಮೀ ಎಸ್.ಆರ್., ಕುಂದಾಪುರದ ಸಹಾಯಕ ಕಮಿಷನರ್
– ಪ್ರಶಾಂತ್ ಪಾದೆ