Advertisement

ಕೈ ಧ್ರುವೀಕರಣ?: ಕುತೂಹಲ ಮೂಡಿಸಿದ ಡಿಕೆಶಿ-ಸಿದ್ದರಾಮಯ್ಯ ಭೇಟಿ

10:10 AM Jan 07, 2020 | mahesh |

ಬೆಂಗಳೂರು: “ನಾಯಕತ್ವ’ದ ವಿಚಾರದಲ್ಲಿ ಒಗ್ಗಟ್ಟು ಮೂಡಿಸಲು ಶನಿವಾರ ಕರೆದಿದ್ದ ಕಾಂಗ್ರೆಸ್‌ ಹಿರಿಯ ನಾಯಕರ ಸಭೆಯಿಂದ ಮಧ್ಯದಲ್ಲೇ ನಿರ್ಗಮಿಸಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ರವಿವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿ.ಕೆ. ಶಿವ ಕುಮಾರ್‌ಗೆ ಸಿದ್ದರಾಮಯ್ಯ ಅವರೇ ಅಡ್ಡಿ ಎಂಬ ಮಾತುಗಳು ಕೇಳಿ ಬರು ತ್ತಿರುವ ಸಂದರ್ಭದಲ್ಲೇ ಇವರಿಬ್ಬರ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ ಎನ್ನಲಾಗಿ ರುವ ಗುಂಪುಗಳ ರಾಜಕಾರಣದಲ್ಲಿ ಇದೊಂದು ಬಗೆಯ “ಧ್ರುವೀಕರಣ’ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ರವಿವಾರ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಭೇಟಿ ಕೊಟ್ಟು ಕೆಲವು ಸಮಯ ಮಾತನಾಡಿಸಿದ ಡಿ.ಕೆ. ಶಿವಕುಮಾರ್‌ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ತಮ್ಮ ಹೆಸರಿಗೆ ಸಮ್ಮತಿ ಸೂಚಿಸಿದರೆ ಸಹಕಾರ ನೀಡಿ ಎಂದು ಮಾಜಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ನೀವೇ ನಮ್ಮ ನಾಯಕರು. ಇದರಲ್ಲಿ ಭಿನ್ನಾಭಿಪ್ರಾಯವಿಲ್ಲ. ನಿಮ್ಮ ಜತೆ ವಿಶ್ವಾಸದೊಂದಿಗೆ ಕೆಲಸ ಮಾಡಲು ನಾನು ಸಿದ್ಧ. ಕೆಪಿಸಿಸಿ ಅಧ್ಯಕ್ಷನಾಗಲು ನನಗೆ ಸಹಕರಿಸಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

“ನೋ ಅಬ್ಜೆಕ್ಷನ್‌’
ಡಿ.ಕೆ. ಶಿವಕುಮಾರ್‌ ಮನವಿಗೆ ಪ್ರತಿ ಕ್ರಿಯಿಸಿದ ಸಿದ್ದರಾಮಯ್ಯ ಯಾರೇ ಕೆಪಿಸಿಸಿ ಆಧ್ಯಕ್ಷ ರಾಗುವುದಕ್ಕೂ “ನೋ ಅಬ್ಜೆಕ್ಷನ್‌’. ಯಾರೂ ಕೆಪಿಸಿಸಿ ಅಧ್ಯಕ್ಷ ರಾಗುವುದಕ್ಕೂ ನಾನು ಅಡ್ಡಿಪಡಿಸಿಲ್ಲ. ನೀವು ಅಧ್ಯಕ್ಷರಾಗುವುದಕ್ಕೂ ನಾನು ತಕರಾರು ಮಾಡಿಲ್ಲ ಎಂದು ಹೇಳಿದರು ಎನ್ನಲಾಗಿದೆ.

Advertisement

ಭೇಟಿಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಡಿ.ಕೆ.ಶಿ., ಸಿದ್ದರಾಮಯ್ಯ ನಮ್ಮ ನಾಯಕರು. ಎಲ್ಲ ಶಾಸಕರಂತೆ ನಾನೂ ಸಹ ಅವರ ಕೈ ಕೆಳಗೆ ಕೆಲಸ ಮಾಡಬೇಕಿದೆ. ನಾನು ಯಾರ ಜತೆಯಲ್ಲಿ ಕೆಲಸ ಮಾಡಿರುತ್ತೇನೋ ಅವರ ವಿರುದ್ಧವಾಗಿ ಯಾವತ್ತೂ ನಡೆದುಕೊಂಡಿಲ್ಲ ಎಂದರು. ಪಕ್ಷದ ವಿಚಾರಗಳ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಅದಕ್ಕೆ ವಿಶೇಷ ಅರ್ಥ ಬೇಡ ಎಂದು ತಿಳಿಸಿದರು.

ಮಾಜಿ ಡಿಸಿಎಂ ಡಾ| ಜಿ. ಪರಮೇಶ್ವರ್‌ ನಿವಾಸದಲ್ಲಿ ಶನಿವಾರ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಎಂ.ಬಿ. ಪಾಟೀಲ್‌, ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ ಹೆಸರು ಪ್ರಸ್ತಾವಕ್ಕೆ ಬಂದ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಡಿ.ಕೆ.ಶಿ. ಸಭೆಯಿಂದ ಅರ್ಧದಲ್ಲಿಯೇ ಹೊರನಡೆದಿದ್ದರು ಎನ್ನಲಾಗಿತ್ತು.

ಇದು ಶರಣಾಗತಿಯೇ?
ಬೆಂಗಳೂರು, ಜ. 5: ಕೆಪಿಸಿಸಿ ಗಾದಿಯ ಆಸೆ ಹೊತ್ತು “ಅಡ ಕತ್ತರಿ’ಯಲ್ಲಿ ಸಿಕ್ಕಿಕೊಂಡಂತಿರುವ ಮಾಜಿ ಸಚಿವ ಶಿವಕುಮಾರ್‌ ಅವರು ಸಿದ್ದರಾಮಯ್ಯ ಹಾಗೂ ಹಿರಿಯರ ಬಣದಿಂದ ಅಂತರ ಕಾಯ್ದುಕೊಂಡು ಅತಂತ್ರ ಸ್ಥಿತಿ ತಂದು ಕೊಂಡಿದ್ದಾರೆಯೇ?

ನೇರವಾಗಿ ಹೈಕಮಾಂಡ್‌ ಮೇಲೆ ಪ್ರಭಾವ ಬೀರಿ ಹುದ್ದೆ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ ಸಿದ್ದ ರಾಮಯ್ಯ ಹಾಗೂ ಪಕ್ಷದ ಹಿರಿ ತಲೆಗಳಿಂದ ಅಂತರ ಕಾಯ್ದು ಕೊಂಡಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ಈಗ “ಅತಂತ್ರಭಾವ’ ಕಾಡುತ್ತಿರುವಂತಿದ್ದು ರವಿವಾರದ ಸಿದ್ದರಾಮಯ್ಯ ಅವರೊಂದಿಗಿನ ಭೇಟಿ ಒಂದು ರೀತಿಯಲ್ಲಿ “ಶರ ಣಾಗತಿ’ ಸೂಚಿಸಿದೆ ಎಂಬ ವಾಖ್ಯಾನಗಳು ಕೇಳಿಬರುತ್ತಿವೆ.

ಹೇಗಾದರೂ ಮಾಡಿ ಡಿಕೆಶಿಗೆ ಹುದ್ದೆ ತಪ್ಪಿಸಬೇಕು ಎಂದು ಸಿದ್ದ ರಾಮಯ್ಯನವರು ಹೈಕಮಾಂಡ್‌ ಮಟ್ಟದಲ್ಲಿ ಜಾತಿ ಲೆಕ್ಕಾಚಾರದ ಆಧಾರದಲ್ಲಿ ಎಂ.ಬಿ. ಪಾಟೀಲ್‌ ಹೆಸರು ಮುನ್ನೆಲೆಗೆ ತಂದಿದ್ದರೆ, ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲು ಹಿರಿಯರು ಹೈಕಮಾಂಡ್‌ ಮುಂದೆ ಡಿ.ಕೆ.ಶಿ. ಪರ ಲಾಬಿ ನಡೆಸುತ್ತಿದ್ದಾರೆ.

ಹೀಗಿರುವಾಗ ಇತ್ತ ಸಿದ್ದ ರಾಮಯ್ಯ ಅವರನ್ನೂ ಅವ ಗಣಿಸುವಂತಿಲ್ಲ, ಅತ್ತ ಹಿರಿ ತಲೆಗಳನ್ನೂ ಸಂಪೂರ್ಣವಾಗಿ ನೆಚ್ಚಿಕೊಳ್ಳುವಂತಿಲ್ಲ ಎಂಬ ಗೊಂದಲ ಸ್ಥಿತಿಯಲ್ಲಿ ಡಿ.ಕೆ. ಶಿವಕುಮಾರ್‌ ಇದ್ದಾರೆ. ರಾಜ್ಯ ನಾಯಕತ್ವನ್ನು “ಬೈಪಾಸ್‌’ ಮಾಡಿ ಹೈಕಮಾಂಡ್‌ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂಬ ಅಂಶವೂ ಅವರಿಗೆ ಮನದಟ್ಟು ಆದಂತಿದೆ.

ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಕಾಂಗ್ರೆಸ್‌ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಏನನ್ನೂ ಕೇಳುವ ಪ್ರಶ್ನೆಯೇ ಇಲ್ಲ, ನಾನು ಪಕ್ಷದ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ.
-ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next