Advertisement

ಅಕಾಲಿಕ ಮಳೆಗೆ ಕೊಚ್ಚಿಹೋದ ಬೆಳೆ

05:52 PM Dec 03, 2021 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಕಳೆದ ನವೆಂಬರ್‌ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಗೆ ಕೃಷಿ, ತೋಟಗಾರಿಕೆ ಸೇರಿದಂತೆ 48 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಭತ್ತ, ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಕೋಟ್ಯಂತರ ರೂ. ನಷ್ಟ ಅನುಭವಿಸುವಂತಾಗಿದೆ.

Advertisement

ಜಿಲ್ಲೆಯಲ್ಲಿ ಅಕಾಲಿಕ ಮಳೆಯಾಗಿದ್ದರಿಂದ ಕಟಾವಿನ ಹಂತದಲ್ಲಿದ್ದ ಮುಂಗಾರು ಬೆಳೆ ಹಾಗೂ ಬಿತ್ತನೆ ಮಾಡಿದ್ದ ಹಿಂಗಾರು ಬೆಳೆಗಳಿಗೆ ಹಾನಿಯಾಗಿದೆ. ಕಟಾವಿನ ಹಂತದಲ್ಲಿದ್ದ ಭತ್ತ, ಮೆಕ್ಕೆಜೋಳ, ಹತ್ತಿ ರೈತರ ಕೈಗೆ ಸಿಗದಂತಾಗಿದೆ. ಶೇಂಗಾ, ಕಡಲೆ, ಸೂರ್ಯಕಾಂತಿ, ಕಬ್ಬು, ಮುಂತಾದ ಬೆಳೆಗಳೂ ಹಾನಿಯಾಗಿದೆ. ಜೂನ್‌ ತಿಂಗಳಲ್ಲಿ ನೆರೆ ಬಂದು ರೈತರು ತೀವ್ರ ಸಂಕಷ್ಟ ಅನುಭವಿಸಿದ್ದರು. ಈಗ ಕೈಗೆ ಬಂದಿದ್ದ ಬೆಳೆ ಅಕಾಲಿಕ ಮಳೆಯಿಂದ ನೀರುಪಾಲಾಗಿದೆ.

47 ಸಾವಿರ ಹೆಕ್ಟೇರ್‌ ಕೃಷಿ ಬೆಳೆ ಹಾನಿ: ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 47,068 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ನಾನಾ ರೀತಿಯ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಮೆಕ್ಕೆಜೋಳ ಹಾನಿ ಪ್ರದೇಶ ಹೆಚ್ಚಾಗಿದೆ. 26,217 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಹಾನಿಯಾಗಿದೆ. 11,750 ಹೆಕ್ಟೇರ್‌ ಭತ್ತ, 7501 ಹೆಕ್ಟೇರ್‌ ಹತ್ತಿ, 1337 ಹೆಕ್ಟೇರ್‌ ಜೋಳ, 165 ಹೆಕ್ಟೇರ್‌ ಶೇಂಗಾ, ಸೂರ್ಯಕಾಂತಿ 54 ಹೆಕ್ಟೇರ್‌, ಸೋಯಾಬಿನ್‌ 20 ಹೆಕ್ಟೇರ್‌, ತೊಗರಿ, ರಾಗಿ, ಕಬ್ಬು ಸೇರಿ 25 ಹೆಕ್ಟೇರ್‌ ಬೆಳೆ ಮಳೆಯಿಂದ ಹಾಳಾಗಿದೆ.

ಅಕಾಲಿಕ ಮಳೆಯಿಂದ ಜಿಲ್ಲೆಯ ರೈತರು ತತ್ತರಗೊಂಡಿದ್ದಾರೆ. ಸಾಲ ಸೂಲ ಮಾಡಿ ಬಿತ್ತನೆ ಬೀಜ, ಗೊಬ್ಬರ ತಂದು, ಇನ್ನೇನು ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಎಲ್ಲವೂ ನೀರುಪಾಲಾಗಿದೆ. ಇದು ಹಿಂಗಾರು ಬಿತ್ತನೆ ಮೇಲೆ ಕೂಡ ಪರಿಣಾಮ ಬೀಳುತ್ತಿದೆ. ಕೆಲ ರೈತರು ಹಿಂಗಾರು ಬಿತ್ತನೆಗೆ ಕೈಯಲ್ಲಿ ಕಾಸಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಜತೆಗೆ, ಹಿಂಗಾರು ಬಿತ್ತನೆ ಮಾಡಿದ್ದ ರೈತರ ಬೆಳೆಗಳು ನಾಶಗೊಂಡಿವೆ.

ಶಿಗ್ಗಾವಿ, ಹಾನಗಲ್ಲ, ರಾಣಿಬೆನ್ನೂರು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಬೆಳೆ ಹಾಳಾಗಿದೆ. ಕಟಾವಿಗೆ ಬಂದಿದ್ದ ಬೆಳೆ ಮಳೆ ನೀರಿನಿಂದ ತುಂಬಿದ ಗದ್ದೆಗಳಲ್ಲಿ ಬಿದ್ದು ಕೊಳೆತಿದೆ. ಹತ್ತಿ ಕೂಡ ಮಳೆಗೆ ಸಿಕ್ಕು ಹಾಳಾಗಿದೆ. ಒಣಗಲು ಹಾಕಿದ್ದ ಮೆಕ್ಕೆಜೋಳ ಕೂಡ ತೊಳೆದುಹೋಗಿವೆ.

Advertisement

1600 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿ: ಮಳೆಯಿಂದ 1608 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಇದರಲ್ಲಿ ಮುಖ್ಯವಾಗಿ ತರಕಾರಿ ಬೆಳೆ ಸಂಪೂರ್ಣವಾಗಿ ಕೊಳೆತು ನಾಶವಾಗಿದೆ. ಮೆಣಸಿನಕಾಯಿ ಬೆಳೆಯೇ 600 ಹೆಕ್ಟೇರ್‌ ಹಾನಿಯಾಗಿದೆ. ಶುಂಠಿ, ಬಾಳೆ, ಅಡಕೆ, ವಿವಿಧ ರೀತಿಯ ತರಕಾರಿ ಮಳೆಯ ಹೊಡೆತಕ್ಕೆ ಸಂಪೂರ್ಣ ನೆಲಕಚ್ಚಿವೆ. ಜಿಲ್ಲೆಯ ಅನೇಕ ರೈತರು ತರಕಾರಿಯನ್ನೇ ಮುಖ್ಯ ಬೆಳೆಯನ್ನಾಗಿ ಮಾಡಿಕೊಂಡು ಆದಾಯ
ಕಂಡುಕೊಂಡಿದ್ದರು. ಆದರೆ, ಮಳೆಯಿಂದ ಎಲ್ಲವೂ ಹಾಳಾಗಿದೆ. ಅಳಿದುಳಿದ ತರಕಾರಿ ಕೂಡ ಕೀಟಬಾಧೆ ಮತ್ತಿತರ ಕಾರಣಗಳಿಂದ ಕೊಳೆತು ಹೋಗುತ್ತಿವೆ. ಮಳೆಯಿಂದ ಸಾವಿರಾರು ಮನೆಗಳು ಬಿದ್ದಿದ್ದು ಒಂದು ಕಡೆಯಾದರೆ, ಬೆಳೆ ನಾಶದಿಂದ ಬಡ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ರೈತರಿಂದ 63 ಸಾವಿರ ಅರ್ಜಿ
ಬೆಳೆ ಹಾನಿಯಾದ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನ.30ರವರೆಗೆ ಅವಕಾಶವಿತ್ತು. ಜಿಲ್ಲೆಯ 63 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. 45 ಸಾವಿರ ಅರ್ಜಿಗಳನ್ನು ಆಯಾ ತಹಶೀಲ್ದಾರ್‌ ಕಚೇರಿಯಲ್ಲಿ ಹಾನಿಯಾದ ಬೆಳೆಗಳ ವಿವರವನ್ನು ತಂತ್ರಾಂಶದಲ್ಲಿ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಈಗಾಗಲೇ 10 ಸಾವಿರ ಅರ್ಜಿಗಳನ್ನು ಬೆಳೆ ಹಾನಿ ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ರೈತರಿಗೆ ಆದಷ್ಟು ಬೇಗ ಪರಿಹಾರ ಸಿಗಬೇಕಿದ್ದು, ಸರ್ಕಾರ ತುರ್ತಾಗಿ ಪರಿಹಾರ ಬಿಡುಗಡೆ ಮಾಡಿ ರೈತರ ನೆರವಿಗೆ ಬರಬೇಕಿದೆ.

ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ 47.068 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಈಗಾಗಲೇ ಬೆಳೆ ಹಾನಿ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಬೆಳೆ ಹಾನಿ ಪರಿಹಾರಕ್ಕಾಗಿ ಜಿಲ್ಲೆಯ 63 ಸಾವಿರ ರೈತರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 10 ಸಾವಿರ ಅರ್ಜಿಗಳನ್ನು ಬೆಳೆ ಹಾನಿ ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.
ಮಂಜುನಾಥ್‌ ಬಿ.,
ಜಂಟಿ ಕೃಷಿ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next