ಬೆಂಗಳೂರು: ಸಹಕಾರಿ ಸಂಘದ ಬ್ಯಾಂಕ್ ಅಧಿ ಕಾರಿಗಳು ಕಿರುಕುಳ ನೀಡುತ್ತಿ ದ್ದಾರೆಂದು ಆರೋಪಿಸಿ ಬುಧವಾರ ವಿಧಾನಸೌಧದ ಮುಂದೆ ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಾಹುತಿಗೆ ಯತ್ನಿಸಿದ್ದಾರೆ. ಪಡೆದ ಸಾಲಕ್ಕಿಂತ ತುಂಬಾ ಹೆಚ್ಚು ಮೊತ್ತ ಪಾವತಿಸಿದ್ದರೂ ಅಧಿಕಾರಿಗಳು ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂದು ಜೆ.ಜೆ.ನಗರದ ಪಾದರಾಯನಪುರ ನಿವಾಸಿಗಳಾದ ಮೊಹಮ್ಮದ್ ಮುನಾಯಿದ್ ಮತ್ತು ಆತನ ಪತ್ನಿ ಶಾಯಿಸ್ತಾ ಬಾನು ಆರೋಪಿಸಿದ್ದಾರೆ.
ಪ್ರಕರಣದ ವಿವರ
ಮೊಹಮ್ಮದ್ ಮುನಾಯಿದ್ ಈ ಮೊದಲು ನಗರದಲ್ಲಿ ಅಗರಬತ್ತಿ ತಯಾರಿ ಉದ್ಯಮ ನಡೆಸುತ್ತಿದ್ದರು. 2016ರಲ್ಲಿ ಚಾಮರಾಜಪೇಟೆಯಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಮನೆಯ ದಾಖಲೆಗಳನ್ನು ಅಡವಿರಿಸಿ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಈ ಹಣವನ್ನು ಚನ್ನಪಟ್ಟಣದಲ್ಲಿ ಶುಂಠಿ ಬೆಳೆಯಲು ಬಳಸಿದ್ದಾರೆ.
ಆದರೆ ಶುಂಠಿ ಬೆಳೆಯಲ್ಲಿ ನಷ್ಟ ಉಂಟಾಗಿದೆ. ಆದರೂ ಬ್ಯಾಂಕ್‌ಗೆ ಹಂತಹಂತವಾಗಿ 97 ಲಕ್ಷ ರೂ. ಪಾವತಿಸಿದ್ದೇನೆ. ಆದರೂ ನಿಗದಿತ ಸಮಯಕ್ಕೆ ಬಡ್ಡಿ ಹಾಗೂ ಅಸಲು ಪಾವತಿಸಿಲ್ಲ ಎಂಬ ಕಾರಣಕ್ಕೆ ಬ್ಯಾಂಕ್ ಅಧಿಕಾರಿಗಳು 2022ರಲ್ಲಿ ಮನೆಯನ್ನು ಜಪ್ತಿ ಮಾಡಿದ್ದಾರೆ. ಅದನ್ನು 1.41 ಕೋಟಿ ರೂ.ಗೆ ಹರಾಜು ಮಾಡಿ, ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರೆ ಎಂದು ಮೊಹಮ್ಮದ್ ಮುನಾಯಿದ್ ಪೊಲೀಸರ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವ ಜಮೀರ್ ಭೇಟಿಗೆ ಬಂದಿದ್ದ ದಂಪತಿ
ವಿಧಾನಸೌಧ ಪೂರ್ವಭಾಗದ ಪ್ರವೇಶ ದ್ವಾರಕ್ಕೆ ಬೆಳಗ್ಗೆ 11 ಗಂಟೆ ಸುಮಾರಿಗೆ ಬಂದ ದಂಪತಿ, ಸಚಿವ ಜಮೀರ್ ಅಹ್ಮದ್ ಭೇಟಿಗೆ ಕೋರಿದ್ದಾರೆ. ಆದರೆ ಸೂಕ್ತ ಕಾರಣ ನೀಡದ್ದರಿಂದ ಭದ್ರತಾ ಸಿಬಂದಿ ಒಳಗೆ ಬಿಟ್ಟಿಲ್ಲ. ಬಳಿಕ ದಂಪತಿ ಬ್ಯಾಗ್‌ನಲ್ಲಿದ್ದ ಸೀಮೆಎಣ್ಣೆ ಬಾಟಲಿ ತೆಗೆದು ಮೈಮೇಲೆ ಸುರಿದುಕೊಳ್ಳಲು ಯತ್ನಿಸಿದ್ದಾರೆ. ಆಗ ಸ್ಥಳದಲ್ಲಿದ್ದ ವಿಧಾನಸೌಧ ಠಾಣೆ ಇನ್‌ಸ್ಪೆಕ್ಟರ್ ಸೀಮೆಎಣ್ಣೆ ಬಾಟಲಿಯನ್ನು ಕಸಿದುಕೊಂಡು ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು, ಜಾಮೀನಿನಲ್ಲಿ ಬಿಡುಗಡೆ ಮಾಡಿದರು.